ಶಿಡ್ಲಘಟ್ಟ: ಕೋವಿಡ್ 19 ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆ ಆರಂಭಿಸಬೇಕೆ? ಅಥವಾ ಬೇಡವೇ? ಎಂಬ ಗೊಂದಲದ ವಾತಾವರಣ ಮುಂದುವರಿದಿದೆ. ಆದರೆ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರಿ-ಮೇಕೆ ಹಾಗೂ ದನಕರುಗಳ ದೊಡ್ಡಿಯಾಗಿ ಪರಿವರ್ತನೆಗೊಂಡಿದೆ.
ಶಾಲೆಯೇ ಜ್ಞಾನದೇಗುಲ ಕೈಮುಗಿದು ಬನ್ನಿ ಎಂಬುದು ಸಾಮಾನ್ಯ. ಆದರೆ ರಾಮಲಿಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆ ಆರಂಭಿಸಬಾರದೆಂದು ಬಹುತೇಕ ಪೋಷಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಮಧ್ಯೆ ಜೂ.8 ರಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ತೆರದು ಶಾಲಾಭಿವೃದ್ಧಿ ಸಮಿತಿಗಳ ಸಭೆ ಕರೆದು ಪೋಷಕರ ಅಭಿಪ್ರಾಯ ಸಂಗ್ರಹಿಸಿ ಸಾರ್ವಜ ನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕೆಂದು ಆದೇಶಿ ಸಲಾಗಿದೆ.
ಆದರೆ ಸರ್ಕಾರದ ಆದೇಶವನ್ನು ಉಲಂಘಿಸಿ ಶಿಕ್ಷಕರು ಶಾಲೆಗಳಿಗೆ ಚಕ್ಕರ್ ಹೊಡೆದಿದ್ದಾರೆ ಎಂಬುದಕ್ಕೆ ರಾಮಲಿಂಗಾಪುರ ಸರ್ಕಾರಿ ಶಾಲೆಯೇ ನಿದರ್ಶನವಾಗಿದೆ. ಗ್ರಾಮದಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರ ಅಕ್ಕಪಕ್ಕದಲ್ಲಿ ನಡೆಯುತ್ತಿದೆ. ಸರ್ಕಾರಿ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ ಇದೆ. ಅಚ್ಚರಿ ಎಂದರೆ ಈ ಶಾಲೆಯಲ್ಲಿ ಇರುವುದು ಒಬ್ಬನೇ ಒಬ್ಬ ವಿದ್ಯಾರ್ಥಿ ಮಾತ್ರ. ವಿದ್ಯಾರ್ಥಿಗಳು ಇಲ್ಲದಿರುವುದರಿಂದ ಶಾಲೆಯ ಒಂದು ಕಟ್ಟಡವನ್ನು ಅಂಗನವಾಡಿ ಕೇಂದ್ರಕ್ಕೆ ಬಿಟ್ಟು ಕೊಡಲಾಗಿದೆ. ಅಲ್ಲಿ ಮೂರು ಮಕ್ಕಳ ದಾಖಲಾತಿ ಇದೆ ಎಂದು ಮಾಹಿತಿ ಬಂದಿದೆ. ಆದರೆ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಆವರಣ ಮಾತ್ರ ಕುರಿ-ಮೇಕೆ ಮತ್ತು ದನಕರುಗಳಿಗೆ ಆಶ್ರಯತಾಣದೆ.
ನೋಟಿಸ್ ಜಾರಿ: ಸರ್ಕಾರಿ ಶಾಲೆಗಳನ್ನು ತೆರೆದು ಪೋಷಕರ ಸಭೆ ಆಯೋಜಿಸಬೇಕೆಂದು ಈಗಾಗಲೇ ಮುಖ್ಯಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಆದರೆ ಕೆಲ ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ಹೋಗುತ್ತಿಲ್ಲ ಎಂಬುದರ ಬಗ್ಗೆ ದೂರುಗಳು ಕೇಳಿಬಂದಿದೆ. ರಾಮಲಿಂಗಾಪುರ ಗ್ರಾಮದ ಸರ್ಕಾರಿ ಶಾಲೆಯನ್ನು ಗ್ರಾಮದ ಕೆಲವರು ಕುರಿ-ಮೇಕೆ, ದನಕರುಗಳ ದೊಡ್ಡಿ ಮಾಡಿ ಕೊಂಡಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕಾರಣ ಕೇಳಿ ಮುಖ್ಯ ಶಿಕ್ಷ ಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅವರಿಂದ ಸೂಕ್ತ ಮಾಹಿತಿ ದೊರೆಯದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಉದಯವಾಣಿಗೆ ತಿಳಿಸಿದ್ದಾರೆ.
* ಎಂ.ಎ.ತಮೀಮ್ ಪಾಷ