ಮಾಗಡಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಪ್ರತಿಯೊಬ್ಬರೂ ಮುಂ ದಾಗಬೇಕೆಂದು ಬಿಇಒ ಸಿದ್ದೇಶ್ವರ್ ತಿಳಿಸಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ 2019-20 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದಾಖಲಾತಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾನ ಶಿಕ್ಷಣ: ಶಿಕ್ಷಣ ಇಂದು ಸಂವಿಧಾನಬದ್ಧ ಮೂಲ ಭೂತ ಹಕ್ಕು. ಈ ಹಕ್ಕನ್ನು ಯಾವುದೇ ತಾರ ತಮ್ಯ ಅಸಮಾನತೆ ಮತ್ತು ಪ್ರತ್ಯೇಕತೆಯಿಲ್ಲದೆ ಎಲ್ಲಾ ಮಕ್ಕಳಿಗೆ ಸಮಾನತೆ ನೆಲೆಯಲ್ಲಿ ಸಮಾನ ಅವಕಾಶಗಳ ಮೂಲಕ ಸಾಕಾರ ಗೊಳಿಸುವ ಶಾಲಾ ಶಿಕ್ಷಣ ವ್ಯವಸ್ಥೆ ಕಟ್ಟಿ ಕೊಡಬೇಕೆಂದರು.
ಒಗ್ಗೂಡಿ ಬೆಂಬಲ ನೀಡಿ:ಸರ್ಕಾರದ ಜೊತೆಗೆ ಬೆಂಬಲವಾಗಿ ಕೈ ಜೋಡಿಸುವುದು ಸಮುದಾಯದ ಹೊಣೆ ಯಾಗಿದೆ. ಸರ್ಕಾರ ಮತ್ತು ಸಮುದಾಯ ಒಗ್ಗೂಡಿ ಕೆಲಸ ನಿರ್ವಹಿಸಿದ್ದಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಸಮಾನ ಗುಣಾತ್ಮಕ ಕೇಂದ್ರವನ್ನಾಗಿ ಪರಿವರ್ತಿಸಬಹುದೆಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಅಶೋಕ್, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ತರಬೇತಿ ಪಡೆದ ವೃತ್ತಿ ಪರಿಣಿತ ಶಿಕ್ಷಕರಿಂದ ಶಿಶು ಕೇಂದ್ರಿತ ಹಾಗೂ ಶಿಶು ಸ್ನೇಹಿ ವಿಧಾನದಲ್ಲಿ ಪಾಠ ಬೋಧನೆ. ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪಠ್ಯ ಪುಸ್ತಕ, 2 ಜೊತೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆ, ಹೆಣ್ಣು ಮಕ್ಕಳಿಗೆ ಹಾಜರಾತಿ ಪ್ರೋತ್ಸಾಹ ಧನ, ಮಧ್ಯಾಹ್ನದ ಬಿಸಿಯೂಟ, ಕೆನೆಭರಿತ ಹಾಲು ಮತ್ತು ವಿಟಮಿನ್ ಹಾಗೂ ಜಂತು ನಿವಾರಣೆ ಮಾತ್ರೆ ಮತ್ತಿತರ ಸೌಕರ್ಯ ಸಿಗಲಿದ್ದು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ಹದಿಹರೆಯದ ಹೆಣ್ಣು ಮಕ್ಕಳಿಗೆ ಆಪ್ತ ಸಮಾಲೋಚನೆ ಹಾಗೂ ವೈದ್ಯಕೀಯ ನೆರವು, 8 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, 1 ರಿಂದ 8 ನೇ ತರಗತಿಗೆ ವಸ್ತುನಿಷ್ಠ ಕಲಿಕಾ ಮೌಲ್ಯ ಮಾಪನ, 8 ರಿಂದ 10 ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ್ ಸಮವಸ್ತ್ರ ವಿತರಿಸಲಾಗುತ್ತದೆ. ಜೊತೆಗೆ ಇನ್ನು ಹತ್ತು ಹಲವಾರು ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ದೊರೆಯುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೇ ದಾಖಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಆರ್‌ಪಿ ಚಂದ್ರಣ್ಣ, ಸಹಾಯಕ ನಿರ್ದೇಶಕ ಗಂಗಾಧರ್, ವೆಂಕಟಯ್ಯ, ರೇವಣ್ಣ, ದಾಸಪ್ಪ, ನಾಗೇಶ್, ಗೋಪಿ, ಅಂಜಿನಪ್ಪ, ನಾರಾಯಣಸ್ವಾಮಿ, ಸವಿತಾ ಮತ್ತಿರರಿದ್ದರು.