ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಇನ್ನುಮುಂದೆ ವಾರದ 6 ದಿನವೂ ಮೊಟ್ಟೆ ಸಿಗಲಿದೆ. ಈ ಕುರಿತು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದೊಂದಿಗೆ 1ರಿಂದ 10ನೇ ತರಗತಿ ಮಕ್ಕಳಿಗೆ ವಾರದ 6 ದಿನವೂ ಮುಂದಿನ 3 ವರ್ಷಗಳ ಕಾಲ ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ನೀಡುವ ಒಪ್ಪಂದಕ್ಕೆ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಹಾಕಿದರು.
ಬಳಿಕ ಮಾತನಾಡಿ, ಮೊದಲು ವಾರಕ್ಕೆ ಒಂದು ನೀಡುತ್ತಿದ್ದ ಮೊಟ್ಟೆಯನ್ನು ಕಳೆದ ವರ್ಷದಿಂದ 2ಕ್ಕೇರಿಸಲಾಗಿತ್ತು. ಇನ್ನು ಮುಂದೆ 6 ಮೊಟ್ಟೆಗಳನ್ನು ನೀಡಲಾಗುತ್ತದೆ. 55.50 ಲಕ್ಷ ಮಕ್ಕಳಿಗೆ ಇದರ ಪ್ರಯೋಜನ ಲಭಿಸಲಿದೆ ಎಂದರು.
ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಆರೋಗ್ಯ ಪೂರ್ಣವಾಗಿರುವುದು ಅವಶ್ಯಕ. ಉಪಾಹಾರವಿಲ್ಲದೆ ಶಾಲೆಗೆ ಬಂದು ಮಧ್ಯಾಹ್ನದವರೆಗೆ ಉಪವಾಸ ಇರುವ ಮಕ್ಕಳನ್ನು ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮಕ್ಕಳು ವೈಜ್ಞಾನಿಕ ಮತ್ತು ವೈಚಾರಿಕ ಶಿಕ್ಷಣ ಹೊಂದಿ ವಿಕಾಸಗೊಂಡರೆ ಮಾತ್ರ ಸಮಾಜಮುಖೀಗಳಾಗಿ ಬೆಳೆಯಲು ಸಾಧ್ಯ. ಜ್ಞಾನ ವಿಕಾಸವಾಗಬೇಕು ಎಂದಾದರೆ ಅವರು ಆರೋಗ್ಯ ಪೂರ್ಣವಾಗಿರಬೇಕು. ಬಡವರು, ಶ್ರೀಮಂತರು, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾಕ ವರ್ಗಕ್ಕೆ ಸೇರಿದ ಎಲ್ಲ ಮಕ್ಕಳು ಗುಣಮಟ್ಟದ ಸಮಾನ ಶಿಕ್ಷಣ ಪಡೆಯಬೇಕು. ಜಾತ್ಯತೀತರಾಗಿ ಬೆಳೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ರಾಜ್ಯಸರಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಅಜೀಂ ಜೀ ಪ್ರತಿಷ್ಠಾನದ ಅಧ್ಯಕ್ಷ ಅಜೀಂ ಪ್ರೇಮ್ ಜೀ ಮಾತನಾಡಿ, ಮೊಟ್ಟೆ ನೀಡಲು ಸರಕಾರದೊಂದಿಗೆ ಸಹಭಾಗಿ ಆಗುತ್ತಿರುವುದು ಗೌರವದ ಕೆಲಸ ಎಂದು ನಾನು ಭಾವಿಸಿದ್ದೇನೆ. ನನ್ನ ತವರು ರಾಜ್ಯಕ್ಕೆ ಸೇವೆ ಸಲ್ಲಿಸಲು ನಾನು ಬದ್ಧನಾಗಿದ್ದೇನೆ. ಕರ್ನಾಟಕ ಸರಕಾರದೊಂದಿಗೆ ನಮ್ಮದು 25 ವರ್ಷಗಳ ರಚನಾತ್ಮಕ ಸಹಭಾಗಿತ್ವವಿದೆ ಎಂದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ, ಯಾಸ್ಮಿನ್ ಪ್ರೇಮ್ ಜೀ, ಶಾಸಕ ರಿಜ್ವಾನ್ ಅರ್ಷದ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್, ಪ್ರಾಥಮಿಕ ಶಾಲಾ ಆಯುಕ್ತೆ ಬಿ.ಬಿ. ಕಾವೇರಿ ಇದ್ದರು.