Advertisement

Government ಶಾಲಾ ಕಟ್ಟಡ: ಸಿಎಸ್‌ಆರ್‌ ನಿಧಿಗೆ ಮನವಿ ಮಾಡಲು ಆಡಳಿತಾಧಿಕಾರಿ ಸೂಚನೆ

12:42 PM Sep 12, 2024 | Team Udayavani |

ಬಂಟ್ವಾಳ: ತಾಲೂಕಿನಲ್ಲಿ ಶಿಥಿಲಾ ವಸ್ಥೆಯಲ್ಲಿರುವ ನೇರಳಕಟ್ಟೆ, ಕಾವಳಕಟ್ಟೆ, ನಂದಾವರ, ಕಡಂಬು ಸರಕಾರಿ ಶಾಲೆಗಳ ಕಟ್ಟಡ ತೆರವಿನ ಬಳಿಕ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಇಲ್ಲದೆ ಇರುವುದರಿಂದ ಕಂಪೆನಿಗಳ ಸಿಎಸ್‌ಆರ್‌ ಅನುದಾನಕ್ಕೆ ಮನವಿ ಮಾಡಿ ಕಟ್ಟಡ ನಿರ್ಮಿಸುವಂತೆ ತಾ.ಪಂ.ಆಡಳಿತಾಧಿಕಾರಿ ಮಂಜುನಾಥ್‌ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಅವರು ಬುಧವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆ ಹಾಗೂ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನೆ(ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಣ ಸಂಯೋಜಕಿ ಸುಜಾತಕುಮಾರಿ ಶಾಲೆಗಳ ಶಿಥಿಲಾವಸ್ಥೆಯ ಕಟ್ಟಡ ತೆರವಿಗೆ ಸಂಬಂಧಿಸಿ ಅನುಮತಿಯ ವಿಷಯ ಪ್ರಸ್ತಾಪಿಸಿದಾಗ ತೆರವು ಮಾಡಿದ ಕಟ್ಟಡದ ಪುನಃ ನಿರ್ಮಾಣದ ಅನುದಾನದ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಈ ಬಾರಿ ಮಳೆಗೆ 36 ಶಾಲೆಗಳ ಕಟ್ಟಡ ದುರಸ್ತಿಗೆ ಸಂಬಂಧಿಸಿ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದರಲ್ಲಿ 34 ಕಟ್ಟಡಗಳ ದುರಸ್ತಿಗೆ ಅನುಮತಿ ದೊರಕಿದೆ. 2 ಶಾಲೆಗಳ ಕಟ್ಟಡಕ್ಕೆ 15 ಲಕ್ಷ ರೂ.ಗಳ ಪ್ರಸ್ತಾವನೆ ಇದ್ದು, ಆದರೆ ಎಸ್‌ಡಿಆರ್‌ಎಫ್‌ನಿಂದ 2 ಲಕ್ಷ ರೂ. ಮಾತ್ರ ಅನುದಾನ ಲಭಿಸಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಇಇ ತಾರಾನಾಥ ಸಾಲ್ಯಾನ್‌ ಪಿ. ಅವರು ಶಾಲೆಗಳ ಸ್ಥಿತಿಯ ಕುರಿತು ವಿವರಿಸಿದರು. ಹೆಚ್ಚಿನ ಅನುದಾನ ಬೇಕಿದ್ದರೆ ಸಿಎಸ್‌ಆರ್‌ ಅನುದಾನಕ್ಕೆ ಮನವಿ ಮಾಡುವಂತೆ ಆಡಳಿತಾಧಿಕಾರಿಗಳು ವಿನಂತಿಸಿದರು.

9 ಪ್ರಸ್ತಾವನೆಗಳಿಗೆ ಅನುಮೋದನೆ
ಮಾಸಿಕ ಲೆಕ್ಕಪತ್ರ, ಹೊರಗುತ್ತಿಗೆ ಟೆಂಡರ್‌, ಪರಿಶಿಷ್ಟ ಜಾತಿ, ವರ್ಗ, ಮಹಿಳಾ ಇಲಾಖೆ, ಶಿಕ್ಷಣ, ಆರೋಗ್ಯ, ಗ್ರಾಂಥಾಲಯ, ಸಂಪರ್ಕ ರಸ್ತೆ ಅನುದಾನ, ಗ್ಯಾರಂಟಿ ಯೋಜನೆ ಕಚೇರಿ ನವೀಕರಣ, ಇತರ ವಲಯದಲ್ಲಿ ಎಂಅರ್‌ಎಫ್‌ ಘಟಕಕ್ಕೆ 15 ಲಕ್ಷ ರೂ. ಸೇರಿದಂತೆ ತಾ.ಪಂ.ನ 9 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು.

Advertisement

ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಸಚಿನ್‌ಕುಮಾರ್‌ ಅವರು ತಾಲೂಕು ಪಂಚಾಯತ್‌ ನ ವಿವರ ನೀಡಿದರು. ತಾಲೂಕಿನ ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿ ಪೂರ್ಣ ಗುರಿ ಸಾಧನೆ ಮಾಡಲಾಗಿದೆ ಎಂದು ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ ತಿಳಿಸಿದರು. ಶಿಕ್ಷಣ ಇಲಾಖೆಗೆ ಸಂಬಂಧಿಸಿ 160 ಜಿಪಿಟಿ ಶಿಕ್ಷಕರ ನೇಮಕ, ಸಮವಸ್ತ್ರ, ಪಠ್ಯಪುಸ್ತಕ ವಿತರಣೆಯಲ್ಲಿ ಗುರಿ ಸಾಧನೆ ಮಾಡಲಾಗಿದೆ ಎಂದು ಸುಜಾತಕುಮಾರಿ ತಿಳಿಸಿದರು.

ಈ ಬಾರಿ ಆಗಸ್ಟ್‌ ತಿಂಗಳಲ್ಲಿ ಮಳೆ ಕಡಿಮೆ ಇದ್ದು, ಸೆಪ್ಟೆಂಬರ್‌ ತಿಂಗಳಲ್ಲಿ ವಾಡಿಕೆಗಿಂತ ಶೇ. 14 ಹೆಚ್ಚಿನ ಮಳೆಯಾಗಿದೆ. ಕೃಷಿ ಭಾಗ್ಯ ಯೋಜನೆಯಲ್ಲಿ ತಾಲೂಕಿಗೆ 34 ಗುರಿ ಇದ್ದು, 12 ಅರ್ಜಿ ಸಲ್ಲಿಕೆಯಾಗಿದೆ ಎಂದು ಕೃಷಿ ಅಧಿಕಾರಿ ನಂದನ್‌ ಶೆಣೈ ಸಭೆಯ ಗಮನಕ್ಕೆ ತಂದರು.

ಆರೋಗ್ಯ ಇಲಾಖೆಯ ಕಾಮಗಾರಿ ಸಂಬಂಧಿಸಿ ಯೋಜನಾ ಶಾಖೆಯಿಂದ ಅನುಮತಿ ಪಡೆದುಕೊಂಡು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಎಇಇ ಮೂಲಕ ಅನುಷ್ಠಾನಗೊಳಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್‌ಕುಮಾರ್‌ ರೈ ಅವರು ಇಲಾಖೆಯ ಕುರಿತು ಮಾಹಿತಿ ನೀಡಿದರು.

ಪ್ರಮುಖ ವಿಚಾರಗಳು
41 ಅಂಗನವಾಡಿ ಕಟ್ಟಡಗಳ ದುರಸ್ತಿ ಕಾರ್ಯ ಅಗತ್ಯದ ಬಗ್ಗೆ ಪ್ರಸ್ತಾವ
25 ಸಾವಿರ ರೇಬಿಸ್‌ ಲಸಿಕಾ ಕಾರ್ಯ ಉದ್ದೇಶ
ಸಮವಸ್ತ್ರ, ಪಠ್ಯಪುಸ್ತಕ ವಿತರಣೆಯಲ್ಲಿ ಗುರಿ ಸಾಧನೆ
ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿ ಪೂರ್ಣ ಗುರಿ ಸಾಧನೆ

ಅಂಗನವಾಡಿ ಕಟ್ಟಡ ದುರಸ್ತಿ
ಬಂಟ್ವಾಳದಲ್ಲಿ 13 ಅಂಗನವಾಡಿ ಕೇಂದ್ರ ಗಳ ಕಟ್ಟಡಗಳಿಗೆ ಮಳೆಹಾನಿಯಿಂದ ತೊಂದರೆಯಾಗಿದ್ದು, ಮಕ್ಕಳನ್ನು ಈಗಾಗಲೇ ಬೇರೆ ಕಡೆಗಳಿಗೆ ಶಿಫ್ಟ್‌ ಮಾಡಲಾಗಿದೆ. ಉಳಿದಂತೆ 41 ಕಟ್ಟಡಗಳ ದುರಸ್ತಿ ಕಾರ್ಯ ನಡೆಯಬೇಕಿದೆ ಎಂದು ಮೇಲ್ವಿಚಾರಕಿ ತಿಳಿಸಿದರು. ಈ ಕುರಿತು ಇಲಾಖೆ ಉಪನಿರ್ದೇಶಕರ ಜತೆ ಚರ್ಚಿಸಿ ದುರಸ್ತಿಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಆಡಳಿತಾಧಿಕಾರಿ ಸೂಚಿಸಿದರು. ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಹುದ್ದೆ ಖಾಲಿಗೆ ಸಂಬಂಧಿಸಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೇಲ್ವಿಚಾರಕಿ ತಿಳಿಸಿದರು.

ಜಾನುವಾರು ಗಣತಿ ಕಾರ್ಯ: ಹೆಚ್ಚಿನ ಗಣತಿದಾರರ ಆವಶ್ಯಕತೆ
ಪಶು ಪಾಲನಾ ಇಲಾಖೆಯ ಕುರಿತು ಮುಖ್ಯ ಪಶು ವೈದ್ಯಾಧಿಕಾರಿ ಡಾ| ಅವಿನಾಶ್‌ ಭಟ್‌ ಅವರು ಮಾಹಿತಿ ನೀಡಿ, ಈ ಬಾರಿ ಜಾನುವಾರು ಗಣತಿ ನಡೆಯಬೇಕಿದೆ. ಆದರೆ ಸಾಫ್ಟ್‌ವೇರ್‌ನ ತಾಂತ್ರಿಕ ತೊಂದರೆಯ ಕಾರಣಕ್ಕೆ ಗಣತಿ ಕಾರ್ಯ ಮುಂದೂಡಲ್ಪಟ್ಟಿದೆ. ಈಗಾಗಲೇ 32 ಮಂದಿ ಗಣತಿದಾರರು ಹಾಗೂ 6 ಮಂದಿ ಮೇಲ್ವಿಚಾರಕರ ನೇಮಕಕ್ಕೆ ಅನುಮತಿ ಲಭಿಸಿದೆ. ಆದರೆ ಇಲ್ಲಿ 2011ರ ಗಣತಿ ಪ್ರಕಾರ 70 ಸಾವಿರ ಕುಟುಂಬಗಳಿದ್ದು, ಹೆಚ್ಚಿನ ಗಣತಿದಾರರ ಆವಶ್ಯಕತೆ ಇದೆ. ಹೀಗಾಗಿ 58 ಮಂದಿಯ ಪ್ರಸ್ತಾವನೆ ಕಳುಹಿಸಲಾಗಿದೆ. ಗಣತಿಯ ಸ್ಟಿಕ್ಕರ್‌ಗೆ ತಾ.ಪಂ.ನಿಧಿ ಬಳಸಬೇಕಿದೆ. ಜತೆಗೆ 25 ಸಾವಿರ ರೇಬಿಸ್‌ ಲಸಿಕಾ ಕಾರ್ಯ ನಡೆಯಬೇಕಿದ್ದು, ಲಸಿಕೆ ಉಚಿತವಾಗಿ ಲಭ್ಯವಿದೆ. ಅದರ ಸೂಜಿ ಖರೀದಿಗೆ ಅನುಮೋದನೆ ಅಗತ್ಯವಿದೆ ಎಂದು ತಿಳಿಸಿದಾಗ ಆಡಳಿತಾಧಿಕಾರಿಗಳು ಅನುಮೋದನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next