Advertisement

ಸರ್ಕಾರದ ಯೋಜನೆಗಳು ಸಂಪೂರ್ಣ ಸದ್ಬಳಕೆಯಾಗಬೇಕು

09:46 PM Feb 06, 2020 | Team Udayavani |

ತಿ.ನರಸೀಪುರ: ಮಹಿಳೆಯರ ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳು ಸಂಪೂರ್ಣವಾಗಿ ಸದ್ಬಳಕೆಯಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಮೈಸೂರು ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್‌.ಸಿದ್ದರಾಮಪ್ಪ ಹೇಳಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ಮೈಸೂರು ನೆಹರು ಯುವ ಕೇಂದ್ರ, ತಿ.ನರಸೀಪುರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳು ಹಾಗೂ ನಯನ ನಾಟ್ಯ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಷಯಾಧಾರಿತ ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮ ಹಾಗೂ ಫಿಟ್‌ ಇಂಡಿಯಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾರತಮ್ಯ ತೊಲಗಲಿ: ಮಹಿಳೆಯರು ಸಮಾಜದ ಎಲ್ಲಾ ಸ್ಥರಗಳಲ್ಲಿಯೂ ಪುರುಷರಷ್ಟೇ ಶ್ರಮಿಸುತ್ತಿದ್ದಾರೆ. ತೋರಿಕೆಗಷ್ಟೇ ಸಭೆ-ಸಮಾರಂಭಗಳಲ್ಲಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುತ್ತಾರೆ. ಪತಿ, ಮಕ್ಕಳು ಹಾಗೂ ಮನೆಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕೌಟುಂಬಿಕವಾಗಿಯೂ ಸೈ ಎನಿಸಿಕೊಂಡಿದ್ದಾರೆ. ತಾರತಮ್ಯ ನಿವಾರಣೆಯಾಗಿ, ಸರ್ಕಾರದ ಯೋಜನೆಗಳು ಉಪಯೋಗವಾದಾಗ ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.

ಶಿಕ್ಷಣದ ಕಾರ್ಯಕ್ರಮ ಅಗತ್ಯ: ಭಾರತೀಯ ಸಂಸ್ಕೃತಿಯ ಪರಂಪರೆಯಲ್ಲಿ ಹೆಣ್ಣಿಗೆ ಪೂಜ್ಯನೀಯವಾದ ಸ್ಥಾನವಿದೆ. ಆಧುನಿಕತೆ ಸೋಗಿಗೆ ಮಹಿಳೆಯರು ಮಾರು ಹೋಗಿದ್ದರಿಂದ ದೇಸಿಯ ಆಚಾರ-ವಿಚಾರ ಅದಲು ಬದಲಾಗಿದೆ. ಅಲ್ಲದೆ ಆಹಾರ ಪದ್ಧತಿ ಕೂಡ ಬದಲಾದ ಪರಿಣಾಮ ಸಂಸ್ಕೃತಿ ಮತ್ತು ಆರೋಗ್ಯ ಎರಡು ಹಾಳಾಗಿವೆ. ಇಂಥ ಸನ್ನಿವೇಶದಲ್ಲಿ ವಿಷಯಾಧಾರಿತ ಜಾಗೃತಿ ಹಾಗೂ ಶಿಕ್ಷಣದ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಅಗತ್ಯವಿದೆ ಎಂದು ತಿಳಿಸಿದರು.

ಸಂಜೀವಿನಿ ಸಂಯೋಜಕಿ ರೂಪಾಶ್ರೀ, ಎಂ.ಸುರೇಶ್‌, ಎಚ್‌.ಟಿ.ಸ್ವಾಮಿ, ಎಂ.ಎನ್‌.ಮಹದೇವಸ್ವಾಮಿ, ಮೋಹನಕುಮಾರಿ, ಮಧುಶ್ರೀ, ಆರ್ಥಿಕ ಸಾಕ್ಷರತಾ ಅಧಿಕಾರಿ ಸೀತಾರಾಮ, ಮಹೇನ ನಾಟ್ಯ ಟ್ರಸ್ಟ್‌ ಅಧ್ಯಕ್ಷ ಕಿರಣ್‌ ಕುಮಾರ್‌, ನನ್ನವ್ವ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷ ವೈ.ಜಿ.ಮಹದೇವ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next