ಭಟ್ಕಳ: ಪ್ರತಿಯೊಬ್ಬರೂ ಸರಕಾರದ ನಿಯಮ ಪಾಲಿಸಿಕೊಂಡು ಕೋವಿಡ್-19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸುವುದು ಕಡ್ಡಾಯವಾಗಿದೆ ಎಂದು ಎಎಸ್‌ಪಿ ನಿಖೀಲ್ ಬಿ.ಹೇಳಿದರು.
ಅವರು ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ದೇವಸ್ಥಾನ, ಮಸೀದಿ, ಚರ್ಚ್ ಆಡಳಿತ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸರಕಾರದ ನಿರ್ದೇಶನದಂತೆ ಈಗಾಗಲೇ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇಲ್ಲಿ ಸರಕಾರ ಮಾರ್ಗಸೂಚಿಯ ಉಲ್ಲಂಘನೆ ಪ್ರಕರಣ ಕಂಡು ಬಂದಲ್ಲಿ ಆಡಳಿತ ಕಮಿಟಿ ಮೇಲೆ ಕ್ರಮ ಕೈಗೊಳ್ಳಬೇಕಾಗುವುದ ಎಂದು ಎಚ್ಚರಿಸಿದರು.
ಸಹಾಯಕ ಆಯುಕ್ತ ಭರತ್ ಎಸ್. ಮಾತನಾಡಿ ಪಟ್ಟಣದಲ್ಲಿ ಸೋಸಿಯಲ್ ರಿಪೋರ್ಟಿಂಗ್ ಹೆಚ್ಚಾಗಬೇಕಾಗಿದೆ. ಪಟ್ಟಣಕ್ಕೆ ಹೊಸಬರು ಯಾರೇ ಬಂದರೂ ಅಧಿಕಾರಿಗಳಿಗೆ ತಿಳಿಸಬೇಕಾಗಿದ್ದು ಹೋಮ್ ಕ್ವಾರಂಟೈನ್‌ನಲ್ಲಿದ್ದವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು ಎಂದರು.
ಭಟ್ಕಳದಲ್ಲಿ ಲಾಕಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಮುಂದೆ ಜನರ ಸಹಕಾರ ನೋಡಿ ಮತ್ತಷ್ಟು ಸಡಿಲಿಕೆ ಮಾಡಲಾಗುವುದು ಎಂದರು.
ವಕೀಲರ ಸಂಘದ ಕಾರ್ಯದರ್ಶಿ ಎಂ.ಜೆ. ನಾಯ್ಕ ಮಾತನಾಡಿ ಭಟ್ಕಳದಲ್ಲಿ ಕಂಟೈನ್ಮೆಂಟ್ ಝೋನ್ ಇದೆ ಎಂದು ನ್ಯಾಯಾಲಯಕ್ಕೆ ವಕೀಲರಿಗೂ ಹೋಗಲು ಬಿಡುತ್ತಿಲ್ಲ. ಕಂಟೈನ್ಮೆಂಟ್ ಝೋನ್ ಸಡಿಲಿಕೆ ಆಗಿದೆಯೇ ಎಂದು ಸ್ಪಷ್ಟಪಡಿಸಬೇಕು ಎಂದಾಗ ಸಹಾಯಕ ಆಯುಕ್ತರು ಭಟ್ಕಳದಲ್ಲಿ ಕಂಟೈನ್ಮೆಂಟ್ ಝೋನ್‌ನ್ನು ಸಡಿಲಿಕೆ ಮಾಡಲಾಗಿದೆ. ಕೆಲವೇ ಪ್ರದೇಶಗಳನ್ನು ಮಾತ್ರ ಕಂಟೈನ್ಮೆಂಟ್ ಎಂದು ಗುರುತಿಸಲಾಗಿದ್ದು, ಈ ಬಗ್ಗೆ ಅಧಿಕೃತ ಆದೇಶ ನೀಡುವ ಭರವಸೆ ನೀಡಿದರು.
ತಂಝೀಂ ಮುಖಂಡ ಇನಾಯತುಲ್ಲಾ ಶಾಬಂದ್ರಿ, ವಿಶ್ವ ಹಿಂದೂ ಪರಿಷತ್ತಿನ ಶಂಕರ ಶೆಟ್ಟಿ , ತಂಝೀಂ ಅಧ್ಯಕ್ಷ ಎಸ್.ಎಂ. ಪರ್ವೇಜ್, ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಆರ್. ನಾಯ್ಕ ಮಾತನಾಡಿದರು. ತಹಶೀಲ್ದಾರ್ ರವಿಚಂದ್ರ, ಸಿಪಿಐ ದಿವಾಕರ ಸೇರಿದಂತೆ ದೇವಸ್ಥಾನ, ಚರ್ಚ, ಮಸೀದಿಗಳ ಮುಖಂಡರು ಪಾಲ್ಗೊಂಡಿದ್ದರು.