Advertisement

ದಾಖಲಾತಿಯಲ್ಲಿ ಭಾರೀ ಹೆಚ್ಚಳ; ಸೌಕರ್ಯ ಸಾಲುತ್ತಿಲ್ಲ

09:05 PM Oct 05, 2021 | Team Udayavani |

ಉಪ್ಪುಂದ: ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈ ವರ್ಷ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಳವಾದಂತೆ ಮೂಲ ಸೌಕರ್ಯಗಳ ವೃದ್ಧಿಗೆ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಪ್ರಮುಖ ಆದ್ಯತೆ ನೀಡಬೇಕಿದೆ.

Advertisement

78 ಮಕ್ಕಳ ದಾಖಲಾತಿ
ಶಾಲೆಯು 1934ರಲ್ಲಿ ಪ್ರಾರಂಭಗೊಂಡಿದೆ. ಕಳೆದ ಸಾಲಿನಲ್ಲಿ 253 ವಿದ್ಯಾರ್ಥಿಗಳು ಇದ್ದರೆ ಈ ವರ್ಷ 132 ಹುಡುಗರು ಹಾಗೂ 152 ಹುಡುಗಿಯರನ್ನೊಳಗೊಂಡಂತೆ ಒಟ್ಟು 285 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ ಒಟ್ಟು 78 ಮಕ್ಕಳು ದಾಖಲಾತಿ ಪಡೆದುಕೊಂಡಿದ್ದಾರೆ. 1ನೇ ತರಗತಿಗೆ 45 ಮಕ್ಕಳು ಸೇರ್ಪಡೆಗೊಂಡಿರುವುದು ಈ ಸರಕಾರಿ ಶಾಲೆಯ ವಿಶೇಷವಾಗಿದೆ.

ಶಾಲೆಯಲ್ಲಿ ಒಟ್ಟು 10 ಶಿಕ್ಷಕರಿದ್ದಾರೆ. 2ನೇ ತರಗತಿಯಲ್ಲಿ 47, 3ನೇ ತರಗತಿಯಲ್ಲಿ 44, 4ನೇ ತರಗತಿಯಲ್ಲಿ 33, 5ನೇ ತರಗತಿಯಲ್ಲಿ 37, 6ನೇ ತರಗತಿಯಲ್ಲಿ 49 ವಿದ್ಯಾರ್ಥಿ ಗಳಿದ್ದು ಕನ್ನಡ ಮತ್ತು ಇಂಗ್ಲಿಷ್‌ ವಿಭಾಗಗಳಿವೆ. 7ನೇ ತರಗತಿಯಲ್ಲಿ ಎ, ಬಿ ವಿಭಾಗಗಳಿದ್ದು 30 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. 136 ವಿದ್ಯಾರ್ಥಿಗಳಿಗೆ ನಾಲ್ಕು ಘಟಕಗಳಲ್ಲಿ ನಲಿಕಲಿ ತರಗತಿಯನ್ನು ನಡೆಸಲಾಗುತ್ತಿದೆ. ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ 60 ಮಕ್ಕಳಿದ್ದಾರೆ. ಇವರಿಗೆ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಇಬ್ಬರು ಗೌರವ ಶಿಕ್ಷಕರು ಹಾಗೂ ಒಬ್ಬರು ಆಯಾ (ಮೇಲ್ವಿಚಾರಕಿ) ನೇಮಕ ಮಾಡಲಾಗಿದೆ.

ಮೈದಾನದಲ್ಲಿ ನೀರಿನ ಟ್ಯಾಂಕ್‌, ವಿದ್ಯುತ್‌ ಲೈನ್‌
ಶಾಲೆಯ ಮೈದಾನದಲ್ಲಿ ಕುಡಿಯುವ ನೀರಿನ ಬೃಹತ್‌ಟ್ಯಾಂಕ್‌ ಇದೆ. ಇದು ನಿರುಪಯುಕ್ತವಾಗಿದ್ದು ಇದನ್ನು ತೆರವುಗೊಳಿಸಬೇಕಿದೆ. ಮೈದಾನದ ಸುತ್ತ ವಿದ್ಯುತ್‌ ತಂತಿ ಹಾದು ಹೋಗಿದೆ. ಅಲ್ಲದೆ ಟ್ರಾನ್ಸ್‌ಫಾರ್ಮರನ್ನೂ ಅಳವಡಿಸಿದ್ದು ಮಕ್ಕಳ ಆಟೋಟಕ್ಕೆ ಅಪಾಯಕಾರಿಯಾಗಿದೆ. ಬೀದಿ ನಾಯಿ ಕಾಟ ಇರುವುದರಿಂದ ಮಕ್ಕಳ ಸುರಕ್ಷತೆಗಾಗಿ ಸುತ್ತಲು ಕಾಂಪೌಡ್‌ ನಿರ್ಮಿಸುವುದು ಅಗತ್ಯವಾಗಿದೆ.ಪ್ರೊಜೆಕ್ಟರ್‌ಗಳು, ಶುದ್ಧ ಕುಡಿಯುವ ನೀರಿನ ಘಟಕ, ಪ್ರಯೋಗಾಲಯ ಹಾಗೂ ರಂಗಮಂದಿರ ಅಗತ್ಯವಿದೆ.ಸುಸಜ್ಜಿತವಾದ ಗ್ರಂಥಾಲಯ ಇದ್ದು ಇದಕ್ಕೆ ತಗಡಿನ ಮಾಡು ಮಾಡಲಾಗಿದೆ. ಇದಕ್ಕೆ ಹೆಂಚು ಅಥವಾ ಸಿಮೆಂಟ್‌ನ ತಾರಸಿ ಅಗತ್ಯವಿದೆ.

ಇದನ್ನೂ ಓದಿ:ದಾಂಡೇಲಿ:ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ರಸ್ತೆ

Advertisement

ರಾಜ್ಯದಲ್ಲೇ ಪ್ರಥಮ
ಹಳೆ ವಿದ್ಯಾರ್ಥಿಗಳ, ಎಸ್‌ಡಿಎಂಸಿ ಹಾಗೂ ದಾನಿಗಳ ಸಹಕಾರದಿಂದ ಸರಕಾರಿ ಶಾಲೆಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದ ಹೆಗ್ಗಳಿಕೆ ಹೊಂದಿದೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಹಳೆ ವಿದ್ಯಾರ್ಥಿಗಳ ಸಂಘ ವಹಿಸಿಕೊಂಡಿದೆ. ಅಮೃತ ಮಹೋತ್ಸವದ ಅಂಗವಾಗಿ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಅಮೃತ ಭವನ ಹಾಗೂ ಕಂಪ್ಯೂಟರ್‌ ಕಟ್ಟಡ ಕಲ್ಪಿ ಸ ಲಾಗಿದೆ. ಶಿಕ್ಷಕರ ವಿಶೇಷ ಪ್ರಯತ್ನಗಳಿಂದ ಶಾಲೆಯು ಸಂಶೋಧನ ಸ್ಪರ್ಧೆಯಲ್ಲಿ ಕಳೆದ ಬಾರಿ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಈ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.

ಅಪಾಯಕಾರಿ ಕಟ್ಟಡ
ಶಾಲೆಯಲ್ಲಿ ಒಟ್ಟು 14 ತರಗತಿ ಕೊಠಡಿ ಇದೆ. ಉದ್ದವಾದ ಒಂದು ಕಟ್ಟಡದಲ್ಲಿ 7 ಕೊಠಡಿಗಳಿದ್ದು ಇದು ಬಳಕೆಗೆ ಯೋಗ್ಯವಾಗಿಲ್ಲ. ಎಂಜಿನಿಯರ್‌ ಪರಿಶೀಲನೆ ನಡೆಸಿ ಇದು ಅಪಾಯದ ಸ್ಥಿತಿಯಲ್ಲಿರುವುದಾಗಿ ಸೂಚಿಸಿದ್ದಾರೆ. ತರಗತಿಗಳನ್ನು ನಡೆಸಲು 7 ಕೋಣೆ ಹಾಗೂ ಮುಖ್ಯ ಶಿಕ್ಷಕರ ಕೊಠಡಿಯು ಅಗತ್ಯವಾಗಿದೆ. ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ.

ಅಗತ್ಯ ಸೌಕರ್ಯ ಕಲ್ಪಿಸಿ
ಗುಣಮಟ್ಟದ ಶಿಕ್ಷಣಕ್ಕಾಗಿ ಅಗತ್ಯಕ್ಕೆ ತಕ್ಕಂತೆ ಭೌತಿಕ ವ್ಯವಸ್ಥೆ ಹಾಗೂ ಕಲಿಕಾ ಸಾಮಗ್ರಿಗಳನ್ನು ಸರಕಾರ ಒದಗಿಸುವುದು ಅಗತ್ಯ.
– ಸತ್ಯಾನಾ ಕೊಡೇರಿ, ಮುಖ್ಯಶಿಕ್ಷಕಿ

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next