Advertisement

ಬೀಳಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅವ್ಯವಸ್ಥೆ ಆಗರ

09:55 AM Jun 28, 2019 | Suhan S |

ಬೀಳಗಿ: ಪಟ್ಟಣದ ಮಾದರಿ ಪ್ರಾಥಮಿಕ ಶಾಲೆ (ಎಂಪಿಎಸ್‌)ಯಲ್ಲಿ ಕುಡಿವ ನೀರಿಲ್ಲದೆ, ಶೌಚಾಲಯಯಿಲ್ಲದೆ ಅವ್ಯವಸ್ಥೆ ಆಗರವಾಗಿದೆ.

Advertisement

ಗುಣಮಟ್ಟದ ಶಿಕ್ಷಣ ಬೇಕಿದೆ: ನಗರದ ಡಾ|ಅಂಬೇಡ್ಕರ್‌ ವೃತ್ತದ ಕೂಗಳತೆ ದೂರಲ್ಲಿರುವ ಎಂಪಿಎಸ್‌ ಶಾಲೆ ಎಂದರೆ ಎಲ್ಲರಿಗೂ ಚಿರಪರಿಚಿತ. ಏಕೆಂದರೆ, ಹಳೆಯ ಕಾಲದ ಸರಕಾರಿ ಶಾಲೆ. ಈ ಶಾಲೆಯಲ್ಲಿ ಅಕ್ಷರ ಕಲಿತವರು ಅದೆಷ್ಟೋ ಜನ ಉನ್ನತ ಹುದ್ದೆಯಲ್ಲಿ ಹೆಸರು ಮಾಡಿದ್ದಾರೆ. ಆದರೆ, ಈ ಶಾಲೆಯ ಹಣೆಬರಹ ಮಾತ್ರ ಬದಲಾಗಿಲ್ಲ. 1ರಿಂದ 7 ನೇ ತರಗತಿಯ ಈ ಶಾಲೆಯಲ್ಲಿ 300 ಮಕ್ಕಳು ಕಲಿಯುತ್ತಿದ್ದಾರೆ. 12 ಜನ ಶಿಕ್ಷಕರಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಲ್ಲಿನ ಶಿಕ್ಷಕರ ಪರಿಸರ ಕಾಳಜಿಯಿಂದಾಗಿ ಶಾಲೆಯ ಆವರಣದಲ್ಲಿ ಹಸಿರು ಕಂಗೊಳಿಸುವಂತಾಗಿದೆ. ಆವರಣ ಶುಚಿಯಾಗಿದೆ. ಆದರೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಹೆಚ್ಚು ಆಸಕ್ತಿ ವಹಿಸಬೇಕಿದೆ.

ಮಕ್ಕಳ ಸುರಕ್ಷತೆ ಅಗತ್ಯ: ಇಲ್ಲಿನ ಎಂಪಿಎಸ್‌ ಶಾಲೆಯಲ್ಲಿ ನಲಿ-ಕಲಿ ವಿಭಾಗದಲ್ಲಿ ಓದುವ ಮಕ್ಕಳಿಗೆ ಮಾತ್ರ ಉತ್ತಮ ಶಿಕ್ಷಣ ವ್ಯವಸ್ಥೆ ಸಿಗುತ್ತಿಲ್ಲ. ಮಕ್ಕಳ ಬಗ್ಗೆ ಶಿಕ್ಷಕರು ಜಾಗೃತಿ ವಹಿಸುತ್ತಿಲ್ಲ. ಪರಿಣಾಮ, ಸಣ್ಣ ಮಕ್ಕಳು ಶಿಕ್ಷಕರಿಗೆ ಗೊತ್ತಾಗದ ಹಾಗೆ ಮನೆಗೆ ಹೋಗುತ್ತವೆ. ಮುಖ್ಯರಸ್ತೆ ದಾಟಿ ಹೋಗಬೇಕಿರುವ ಮಕ್ಕಳಿಗೆ ಏನಾದರೂ ಅವಘಡ ಸಂಭವಿಸಿದರೆ ಹೊಣೆ ಯಾರು? ಮಕ್ಕಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಕಲಿಸದಿದ್ದರೆ, ಸರಕಾರಿ ಕನ್ನಡ ಶಾಲೆಗೆ ಮಕ್ಕಳನ್ನು ಏಕೆ ಕಳುಹಿಸಬೇಕು ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಾರೆ.

ನೀರಿಲ್ಲ, ಶೌಚಾಲಯವಿಲ್ಲ: ಎಂಪಿಎಸ್‌ ಶಾಲೆಯಲ್ಲಿ ಸುಸಜ್ಜಿತ ಶೌಚಾಲಯವಿಲ್ಲ. ಮಕ್ಕಳಿಗೆ ಕುಡಿವ ನಿರಿನ ವ್ಯವಸ್ಥೆಯಿಲ್ಲ. ಹೆಣ್ಣು ಮಕ್ಕಳು ಶೌಚಲಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಈ ಶಾಲೆಯ ಆವರಣದಲ್ಲಿರುವ ಶಿಥಿಲಗೊಂಡ ಕಟ್ಟಡ ತೆರವುಗೊಳಿಸದೆ ಇರುವ ಪರಿಣಾಮ ರಾತ್ರಿ ಹೊತ್ತಲ್ಲಿ ಹಾಗೂ ರಜೆ ದಿನಗಳಲ್ಲಿ ಈ ಕಟ್ಟಡ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ. ಕೂಡಲೇ ಎಂಪಿಎಸ್‌ ಶಾಲೆಗೆ ಶೌಚಾಲಯ, ಎತ್ತರದ ಸುರಕ್ಷಿತ ಕಂಪೌಂಡ್‌, ಕುಡಿವ ನೀರಿನ ವ್ಯವಸ್ಥೆ ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕಾಗಿ ಕ್ರಮ ಕೈಗೊಳ್ಳುವುದು ಅಗತ್ಯವಿದೆ.

ಶಿಕ್ಷಕರಿಗೆ ತರಬೇತಿ ಇರುವ ವೇಳೆ, ಮಕ್ಕಳ ಕಲಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುತ್ತದೆ. ಆದರೆ, ಮಕ್ಕಳು ಹೊರಗೆ ಹೋಗುತ್ತಿರುವ ವಿಷಯ ಗೊತ್ತಿಲ್ಲ. ಈ ಕುರಿತು ಕೂಡಲೇ ಶಿಕ್ಷಕರಿಗೆ ಸೂಚನೆ ನೀಡುತ್ತೇವೆ. ಶೌಚಾಲಯ, ಕುಡಿವ ನೀರು ವ್ಯವಸ್ಥೆಗೆ ಮನವಿ ಮಾಡಿಕೊಳ್ಳಲಾಗಿದೆ.•ಬಿ.ಎಸ್‌.ಗೋನಾಳ, ಮುಖ್ಯಗುರುಗಳು, ಎಂಪಿಎಸ್‌, ಬೀಳಗಿ

Advertisement

 

•ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next