ರಾಜ್ಯದಲ್ಲಿ ಭೌತಿಕ ತರಗತಿ ಆರಂಭಿಸಲು ದಿನಾಂಕ ನಿಗದಿ ಮಾಡಿದ್ದು ಮಾತ್ರವಲ್ಲದೆ, ಸುರಕ್ಷಿತ ವಾತಾವರಣದಲ್ಲಿ ನಿರಂತರ ಕಲಿಕೆಗೆ ಅನುಕೂಲವಾಗುವಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ)ವನ್ನು ಬಿಡುಗಡೆ ಮಾಡಲಾಗಿದೆ. ಆ.23ರಿಂದ ಪ್ರೌಢಶಾಲೆ ಹಾಗೂ ಪಿಯು ತರಗತಿಯ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರಲಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶಾಲಾ ಕೊಠಡಿಗಳಲ್ಲಿದ್ದು, ಕಲಿಕೆ ಮುಂದುವರಿಸಲಿದ್ದಾರೆ. ಕಳೆದ ಐದಾರು ತಿಂಗಳಿನಿಂದ ಮನೆಯಲ್ಲೇ ಆನ್‌ಲೈನ್ ಅಥವಾ ಪೂರ್ವಮುದ್ರಿತ ವೀಡಿಯೋ ತರಗತಿಗಳ ಮೂಲಕ ಕಲಿಕೆಯಲ್ಲಿದ್ದ ವಿದ್ಯಾರ್ಥಿಗಳು ಈಗ ಶಾಲಾ ಕಾಲೇಜಿಗೆ ಬರಲು ಸಜ್ಜಾಗಿದ್ದಾರೆ.
ಭೌತಿಕ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳ ಸುರಕ್ಷತೆಗೆ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶಾಲಾ ಕಾಲೇಜು ಆವರಣದ ಸ್ವತ್ಛತೆ, ದಿಢೀರ್ ಅಸ್ವಸ್ಥಗೊಳ್ಳುವ ಮಕ್ಕಳಿಗೆ ಐಸೊಲೇಶನ್ ಕೊಠಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಕಾರಿಯಾಗಲು 3ರಿಂದ ಆರು ಅಡಿ ಅಂತರದಲ್ಲಿ ಬೆಂಚ್‌ಗಳ ಜೋಡಣೆ, ಪ್ರತಿ ವಿದ್ಯಾರ್ಥಿಯ ದೇಹದ ಉಷ್ಣಾಂಶ ಪರೀಕ್ಷೆ, ಶೌಚಾಲಯ ಸ್ವತ್ಛತೆ ಸೇರಿದಂತೆ ವಿದ್ಯಾರ್ಥಿಗಳು ಸುರಕ್ಷಿತ ವಾತಾವರಣದಲ್ಲಿ ಕಲಿಕೆ ಮುಂದುವರಿಸಲು ಬೇಕಿರುವ ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ.
ಆದರೆ ಕೊರೊನಾ ಸಂಪೂರ್ಣ ಹೋಗಿಲ್ಲ ಮತ್ತು ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವ ಬಗ್ಗೆಯೂ ತಜ್ಞರು ಈಗಾಗಲೇ ವಿಶ್ಲೇಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಕ, ಪೋಷಕರು ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯೂ ಅತೀ ಮುಖ್ಯವಾಗಿದೆ. ವಿದ್ಯಾರ್ಥಿಯ ಕಲಿಕೆ ಎಷ್ಟು ಮುಖ್ಯವೋ ಕೊರೊನಾ ವಿರುದ್ಧ ಹೋರಾಟ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ.
ಹೀಗಾಗಿ ಹೆತ್ತವರು ತಮ್ಮ ಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸುವಾಗ ಮನೆಯಿಂದಲೇ ಹೆಚ್ಚು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸಿ ಕಳುಹಿಸುವುದು ಒಳ್ಳೆಯದು. ಮಾಸ್ಕ್ ಧರಿಸುವುದು ಕಡ್ಡಾಯ. ಆದರೂ ವಿದ್ಯಾರ್ಥಿಗಳು ಅನೇಕ ಬಾರಿ ಅರಿವಿದ್ದು ಅಥವಾ ಇಲ್ಲದೆಯೋ ಸರಿಯಾಗಿ ಮಾಸ್ಕ್ ಧರಿಸದೇ ಇರಬಹುದು. ಮನೆಯಿಂದಲೇ ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿ ಕಳುಹಿಸುವುದು, ಸ್ನೇಹಿತರೊಂದಿಗೆ ವ್ಯವಹರಿಸುವ ಸಂದರ್ಭದಲ್ಲೂ ಜಾಗೃತಿ ವಹಿಸುವಂತೆ ತಿಳಿ ಹೇಳುವುದು, ಮನೆಯಿಂದ ಶಾಲೆಗೆ ಹೋಗುವಾಗ ಅಥವಾ ವಾಪಸ್ ಮನೆಗೆ ಬರುವಾಗ ಅತ್ಯಂತ ಎಚ್ಚರ ವಹಿಸುವುದು. ಅರ್ಧ ದಿನಕ್ಕೆ ಬೇಕಾಗುವಷ್ಟು ಬಿಸಿ ನೀರು, ಲಘು ಉಪಹಾರ ಇತ್ಯಾದಿಗಳನ್ನು ಮನೆಯಿಂದಲೇ ಸಿದ್ಧಪಡಿಸಿ ನೀಡಬೇಕು. ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಸೇರಿದಂತೆ ದಿಢೀರ್ ಅಸ್ವಸ್ಥತೆ ಕಾಣಿಸಿಕೊಂಡಲ್ಲಿ, ಶಾಲೆಗೆ ಕಳುಹಿಸದೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ಇದರ ಜತೆಗೆ ಮನೆಯಲ್ಲಿ ಯಾರಿಗಾದರೂ ಜ್ವರ, ಶೀತ ಅಥವಾ ಕೊರೊನಾ ಲಕ್ಷಣ ಕಾಣಿಸಿಕೊಂಡರೂ ಮಕ್ಕಳ ಸುರಕ್ಷತೆಗೆ ಗಮನ ನೀಡಬೇಕು. ಇದೆಲ್ಲದರ ಜತೆಗೆ ಲಭ್ಯವಾದಾಗ ಆದಷ್ಟು ಬೇಗ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಹೆತ್ತವರು ಶೀಘ್ರ ಲಸಿಕೆ ಹಾಕಿಸಿಕೊಂಡರೆ, ಮಕ್ಕಳಿಗೆ ಅನುಕೂಲ ಹೆಚ್ಚಿದೆ.
ಶಾಲೆಯಲ್ಲಿ ಭೌತಿಕ ತರಗತಿ ಆರಂಭವಾಗುತ್ತಿದೆಯಾದರೂ ಕೊರೊನಾ ಇನ್ನು ಹೋಗಿಲ್ಲ. ಹೀಗಾಗಿ ಸುರಕ್ಷತೆಗೆ ಆದ್ಯತೆ ನೀಡುತ್ತಾ, ನಿಯಮಗಳನ್ನು ಶಾಲೆ, ಮನೆ ಹಾಗೂ ಸುತ್ತಲಿನ ಪರಿಸರದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವ ಕಡೆಗೂ ವಿಶೇಷ ಗಮನ ನೀಡಬೇಕು.