ಚಿಂಚೋಳಿ: ಸರ್ಕಾರ ಅನುಷ್ಠಾನಗೊಳಿಸುವ ಯೋಜನೆಗಳನ್ನು ತಕ್ಷಣ ಮನೆ ಬಾಗಿಲಿಗೆ ಮುಟ್ಟಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಕಂದಾಯ ಇಲಾಖೆ ಮಾತೃ ಇಲಾಖೆ ಆಗಿರುವುದರಿಂದ ಮಾದರಿ ತಾಲೂಕನ್ನಾಗಿ ಮಾಡಲು ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರ ಅಗತ್ಯವಾಗಿದೆ ಎಂದು ತಹಶೀಲ್ದಾರ್ ಅಂಜುಮ ತಬಸುಮ ಹೇಳಿದರು.
ತಾಲೂಕಿನ ಭಕ್ತಂಪಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಗ್ರಾಮ ಒನ್ ಯೋಜನೆ ಬರುತ್ತಿದೆ ಎಂದರು.
ತಾಪಂ ಇಒ ಅನಿಲಕುಮಾರ ರಾಠೊಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ತಾಲೂಕ ಪ್ರಥಮ ಸ್ಥಾನದಲ್ಲಿದೆ. ಹೊಲ, ನೀರು ಮತ್ತು ಮಣ್ಣು ಸಂರಕ್ಷಣೆ, ಕ್ಷೇತ್ರಬದು, ಕೃಷಿಹೊಂಡ, ತೋಟಗಾರಿಕೆ, ಅರಣ್ಯ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಬಹುದಾಗಿದೆ ಎಂದರು.
ವೆಂಕಟೇಶ ದುಗ್ಗನ, ಸಿಡಿಪಿಒ ಗುರುಪ್ರಸಾದ ಕವಿತಾಳ, ಎಇಇ ಶಿವಶರಣಪ್ಪ ಕೇಶ್ವರ, ಅಬಕಾರಿ ಇನ್ಸಪೆಕ್ಟರ್, ಬಿಇಒ ರಾಚಪ್ಪ ಭದ್ರಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರಭುಲಿಂಗ ಬುಳ್ಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶಾಂತವೀರಯ್ಯ ಹಿರೆಮಠ, ಎಇಇ ರವೀದ್ರನಾಥ ಕುಲಕರ್ಣಿ, ಟಿಎಚ್‌ಒ ಡಾ| ಮಹಮ್ಮದ ಗಫಾರ, ಡಾ|ಬೀರಪ್ಪ ಪೂಜಾರಿ, ಭೂದಾಖಲೆ ಸಹಾಯ ನಿರ್ದೇಶಕ ಗೋಪಾಲ ಇನ್ನಿತರ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಗರಗಪಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಮೊಗಲಪ್ಪ, ಉಪಾಧ್ಯಕ್ಷೆ ಪಾರ್ವತಿ ಗುಂಡಪ್ಪ ಹಾಗೂ ಸದಸ್ಯರು ಭಾಗವಹಿಸಿದ್ದರು. ವಿಧವಾ ವೇತನ, ಪಡಿತರ ಚೀಟಿ, ಪಹಣಿ, ಸುಕನ್ಯಾ ಯೋಜನೆ ಪ್ರಮಾಣ ಪತ್ರಗಳನ್ನು ನೀಡಲಾಯಿತು. ಪಿಡಿಒ ರಮೇಶ ತುಮಕುಂಟೆ ಸ್ವಾಗತಿಸಿದರು, ಮುಖ್ಯಶಿಕ್ಷಕ ಜಯಪ್ಪ ಚಾಪೆಲ ನಿರೂಪಿಸಿದರು ಮಗದೂಮ ವಂದಿಸಿದರು. ಸರಕಾರ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಅಧಿಕಾರಿಗಳ ಮತ್ತು ಸಾರ್ವಜನಿಕರ ಮನಸೂರೆಗೊಳಿಸಿತು.