ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಸಾವಿರ ಫಾರ್ಮಸಿಸ್ಟ್‌ಗಳ ವೇತನ ಹೆಚ್ಚಳ, ಅಗತ್ಯಕ್ಕೆ ಅನುಸಾರವಾಗಿ ಹೆಚ್ಚುವರಿ ಹುದ್ದೆ ಸೃಷ್ಟಿ ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿಸ್ಟ್‌ಗಳ ಸಂಘ ಸರಕಾರವನ್ನು ಆಗ್ರಹಿಸಿದೆ.
1987ರ ಎಐಸಿಟಿಇ ಕಾಯ್ದೆ ಪ್ರಕಾರ ಫಾರ್ಮಸಿ ಕೋರ್ಸನ್ನು ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್‌ನಂತೆ ತಾಂತ್ರಿಕ ವಿದ್ಯಾರ್ಹತೆ ಎಂದು ಪರಿಗಣಿಸಿ ವೇತನ ಹೆಚ್ಚಳ ಮಾಡಬೇಕಾಗಿದೆ. ಕೇಂದ್ರ ಸರಕಾರ ಮತ್ತು ನೆರೆ ರಾಜ್ಯಗಳ ವೇತನಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಫಾರ್ಮಸಿಸ್ಟ್‌ಗಳ ವೇತನ ತುಂಬಾ ಕಡಿಮೆಯಿದೆ. ಹೀಗಾಗಿ ನೆರೆ ರಾಜ್ಯಗಳ ವೇತನ ಶ್ರೇಣಿಯನ್ನು ನಮ್ಮ ರಾಜ್ಯಕ್ಕೆ ವಿಸ್ತರಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆ ಸೃಷ್ಟಿಸಬೇಕು ಎಂದು ಸಂಘದ ಅಧ್ಯಕ್ಷ ಬಿ.ಎಸ್.ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ಸಂಘದ ವಿವಿಧ ಬೇಡಿಕೆಗಳ ಕುರಿತಂತೆ ಸರಕಾರದ ಗಮನ ಸೆಳೆದರು.
ವೃಂದ ಮತ್ತು ನೇಮಕಾತಿ ಬದಲಾಯಿಸಿ ಭಡ್ತಿಗೆ ಅವಕಾಶ ಕಲ್ಪಿಸುವುದು, ಸೇವಾನಿರತ ಫಾರ್ಮಸಿಸ್ಟ್‌ಗಳ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಸೀಟುಗಳನ್ನು ಮೀಸಲಿಡುವುದು, ಫಾರ್ಮಸಿಸ್ಟ್ ಹುದ್ದೆಯ ಪದನಾಮವನ್ನು ಫಾರ್ಮಸಿ ಅಧಿಕಾರಿ ಎಂದು ಬದಲಾವಣೆ ಮಾಡಬೇಕು ಎಂದವರು ಆಗ್ರಹಿಸಿದರು.
5 ಹಂತಗಳಲ್ಲಿ ಪ್ರತಿಭಟನೆ
ಸಂಘದ ಬೇಡಿಕೆಗಳ ಕುರಿತಂತೆ ಈಗಾಗಲೇ ಹಲವು ಬಾರಿ ಸರಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಜ. 2ರಿಂದ 12ರ ವರೆಗೆ ಸರಕಾರದ ನಿರ್ಲಕ್ಷ್ಯ ಧೋರಣೆ ವಿರುದ್ದ ಕಪ್ಪು ಬ್ಯಾಡ್ಜ್ ಧರಿಸಿ ಕಾರ್ಯನಿರ್ವಹಿಸಲಿದ್ದೇವೆ.
ಅನಂತರ ಸಮಸ್ಯೆ ಬಗೆಹರಿಯದಿದ್ದರೆ ಜ. 30ಕ್ಕೆ ಫ್ರೀಡಂ ಪಾರ್ಕ್‌ನಿಂದ ಆರೋಗ್ಯ ಇಲಾಖೆ ತನಕ ಶಾಂತಿಯುತ ಪ್ರತಿಭಟನಾ ಜಾಥಾ ನಡೆಸಲಾಗುವುದು. ಫೆ. 10ರಿಂದ 17ರ ತನಕ ರಾಷ್ಟ್ರೀಯ ಆರೋಗ್ಯ ಯೋಜನೆಗಳ ಕಾರ್ಯ ಸ್ಥಗಿತಗೊಳಿಸಲಾಗುತ್ತದೆ. ಮಾ.10ರಿಂದ 17ರ ತನಕ ಹೊರರೋಗಿಗಳ ವಿಭಾಗ ಬಂದ್ ಮಾಡುವುದಾಗಿ ಮತ್ತು ಎ. 10ರಿಂದ ರಾಜ್ಯಾದ್ಯಂತ ಫಾರ್ಮಾಸಿಸ್ಟ್‌ಗಳು ಸಾಮೂಹಿಕವಾಗಿ ಸೇವೆ ನಿಲ್ಲಿಸುವುದರ ಮೂಲಕ 5ಹಂತಗಳಲ್ಲಿ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿರುವುದಾಗಿ ದೇಸಾಯಿ ತಿಳಿಸಿದರು.