Advertisement

ಗೋವಾ ಶೈಲಿಯ ಬೀಚ್‌ ಶ್ಯಾಕ್‌ಗಳ ನಿರ್ಮಾಣಕ್ಕೆ ಸರಕಾರ ಅನುಮತಿ

05:03 PM Jun 28, 2020 | Suhan S |

ಮುಂಬಯಿ, ಜೂ. 27: ಮಹಾರಾಷ್ಟ್ರದಲ್ಲಿ ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ರಾಜ್ಯ ಸರಕಾರವು ಗೋವಾ ಮತ್ತು ಇತರ ಅಂತಾರಾಷ್ಟ್ರೀಯ ಕಡಲತೀರಗಳ ಮಾದರಿಯಂತೆ ರಾಜ್ಯದಲ್ಲಿ ಬೀಚ್‌ ಶ್ಯಾಕ್‌ಗಳ (ಕಡಲತೀರದ ತಾತ್ಕಾಲಿಕ ಗುಡಿಸಲು) ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಪ್ರಾಯೋಗಿಕ ಯೋಜನೆಯಾಗಿ 8 ಕಡಲತೀರಗಳಲ್ಲಿ ಬೀಚ್‌ ಶ್ಯಾಕ್‌ಗಳ ಸ್ಥಾಪನೆಗೆ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.

Advertisement

ಪ್ರವಾಸೋದ್ಯಮ ವೆಬ್‌ಸೈಟ್‌ ಮೂಲಕ ಅರ್ಜಿ :  ರತ್ನಗಿರಿಯ ಗುಹಾಗರ್‌ ಮತ್ತು ಅರೆವರೆ, ಸಿಂಧುದುರ್ಗದ ಕುಂಕೇಶ್ವರ ಮತ್ತು ತಾರ್ಕರ್ಲಿ, ರಾಯಗಢದ ವೆಸೋìಲಿ ಮತ್ತು ದಿವೇಗರ್‌ ಹಾಗೂ ಪಾಲ್ಘರ್‌ ಜಿಲ್ಲೆಯ ಕೇಳ್ವೆ ಮತ್ತು ಬೋರ್ಡಿ ಕಡಲತೀರಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಠಾಕ್ರೆ ಹೇಳಿದ್ದಾರೆ. ಇಂತಹ ತಾತ್ಕಾಲಿಕ ಶ್ಯಾಕ್‌ಗಳನ್ನು ಸ್ಥಾಪಿಸಲು ಆಸಕ್ತಿ ಇರುವವರು 2021ರ ಆರ್ಥಿಕ ಸಾಲಿಗಾಗಿ ರಾಜ್ಯ ಪ್ರವಾಸೋದ್ಯಮ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಇತರ ಕಡಲ ತೀರಗಳಲ್ಲಿ ಈ ನೀತಿಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದವರು ನುಡಿದಿದ್ದಾರೆ.

3 ವರ್ಷಗಳ ಪರವಾನಿಗೆ :  ಮಹಾರಾಷ್ಟ್ರ ಕರಾವಳಿ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅನುಮೋದನೆಯೊಂದಿಗೆ ಪ್ರವಾಸೋದ್ಯಮ ಇಲಾಖೆಯಿಂದ ಗೊತ್ತುಪಡಿಸಿದ ಭೂಮಿಯಲ್ಲಿ ತಾತ್ಕಾಲಿಕ ಅಥವಾ ಕಾಲೋಚಿತ ಸ್ಥಳಗಳಿಗೆ 3 ವರ್ಷಗಳವರೆಗೆ ಪರವಾನಿಗೆ ನೀಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಅರ್ಜಿ ಶುಲ್ಕ 15,000 ರೂ. ಹಾಗೂ ಮರುಪಾವತಿಸಲಾಗುವ 30,000 ರೂ.ಗಳ ಭದ್ರತಾ ಠೇವಣಿಯೊಂದಿಗೆ ಯೋಜನೆಗೆ ಅನುಮತಿ ಪಡೆಯುವ ಉದ್ಯಮಿಯೊಬ್ಬರು ಇಂತಹ ಗರಿಷ್ಠ 10 ಬೀಚ್‌ ಶ್ಯಾಕ್‌ಗಳನ್ನು ನಿರ್ಮಿಸಬಹುದು, ಪ್ರತಿಯೊಂದೂ 15×15 ವಿಸ್ತೀರ್ಣ ಮತ್ತು 12 ಅಡಿ ಎತ್ತರ, ಆಸನಕ್ಕಾಗಿ ಅನುಮತಿಸಲಾದ 20×15 ಅಡಿ ಛಾವಣಿ ವ್ಯವಸ್ಥೆಗಳನ್ನು ಹೊಂದಿರತಕ್ಕದ್ದು ಎಂದು ಅಧಿಕಾರಿ ತಿಳಿಸಿದ್ದಾರೆ. ಶ್ಯಾಕ್‌ಗಾಗಿ ಸರಕಾರಕ್ಕೆ ಪಾವತಿಸಬೇಕಾದ ವಾರ್ಷಿಕ ಶುಲ್ಕವು ಮೊದಲ ವರ್ಷದಲ್ಲಿ 45,000 ರೂ., ಎರಡನೇ ವರ್ಷದಲ್ಲಿ 50,000 ರೂ. ಮತ್ತು ಒಪ್ಪಂದದ ಅಂತಿಮ ವರ್ಷದಲ್ಲಿ 55,000 ರೂ. ಆಗಿರಲಿದೆ. ಶೇ. 80ರಷ್ಟು ಹಂಚಿಕೆಗಳನ್ನು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಲು ಮೀಸಲಿಡಲಾಗುವುದು ಮತ್ತು ಬೆಳಗ್ಗೆ 7ರಿಂದ ಸಂಜೆ 7ರ ವರೆಗೆ ಕಾರ್ಯಾಚರಣೆ, ಧ್ವನಿ ಮಿತಿಗಳು, ಸಿಸಿಟಿವಿ ಕೆಮೆರಾಗಳ ಅಳವಡಿಕೆ ಮುಂತಾದ ಷರತ್ತುಗಳು ಅನ್ವಯವಾಗಲಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪ್ರವಾಸೋದ್ಯಮ ಸಂಬಂಧಿತ ಯೋಜನೆಗಳ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಲಿಮಿಟೆಡ್‌ (ಎಂಟಿಡಿಸಿ) ಒಡೆತನದ ಆಸ್ತಿಗಳನ್ನು ಖಾಸಗೀಕರಣಗೊಳಿಸುವ ನೀತಿಗೂ ರಾಜ್ಯ ಸರಕಾರವು ತಾತ್ವಿಕ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಇದು ವಾರ್ಷಿಕ ಬಾಡಿಗೆಗಳೊಂದಿಗೆ ಸೀಮಿತ ಅವಧಿಗೆ ಉಪ-ಗುತ್ತಿಗೆಗೆ ಮಾಥೆರಾನ್‌, ಮಹಾಬಲೇಶ್ವರ, ಗಣಪತಿಫ‌ುಲೆ, ಹರಿಹರೇಶ್ವರ, ತಡೋಬಾ, ಫ‌ರ್ದಾಪುರದಲ್ಲಿರುವ ಎಂಟಿಡಿಸಿ ರೆಸಾರ್ಟ್‌ಗಳನ್ನು ಒಳಗೊಂಡಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next