ಬೆಂಗಳೂರು: ಹೊಸದಾಗಿ ರಚನೆಯಾಗಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯಕ್ಕೆ ಬೆಂಗಳೂರು ವಿವಿಯಿಂದ ಆರ್ಥಿಕ, ಭೌತಿಕ ಹಾಗೂ ಮಾನವ ಸಂಪನ್ಮೂಲ ವರ್ಗಾಯಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ವಿಶ್ವವಿದ್ಯಾಲಯಗಳ (ತಿದ್ದುಪಡಿ)ಅಧಿನಿಯಮ 2015ರಂತೆ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ. ಹೊಸದಾಗಿ ರಚನೆಯಾಗಿರುವ ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರ ವಿವಿಯ ಪ್ರಾದೇಶಿಕ ವ್ಯಾಪ್ತಿಯನ್ನು ಈಗಾಗಲೇ ನಿಗಧಿ ಪಡಿಸಲಾಗಿದೆ. ಎರಡು ವಿಶ್ವವಿದ್ಯಾಲಯಕ್ಕೂ ಪ್ರಥಮ ಕುಲಪತಿ ನೇಮಕ ಪೂರ್ಣಗೊಂಡಿದೆ.
ನೂತನ ವಿವಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ವರ್ಗಾಯಿಸಬೇಕಾದ ಅಗತ್ಯ ಮೂಲ ಸೌಕರ್ಯ, ಅನುದಾನ, ಸಿಬ್ಬಂದಿ, ಭೂಮಿ ಹಂಚಿಕೆ ಸಂಬಂಧ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಶಿಫಾರಸ್ಸಿನಂತೆ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ವಿವಿಗೆ ಆರ್ಥಿಕ, ಭೌತಿಕ ಮತ್ತು ಮಾನವ ಸಂಪನ್ಮೂಲ ಒದಗಿಸಲು 7 ಪ್ರಮುಖ ಅಂಶಗಳನ್ನು ಸರ್ಕಾರ ಉಲ್ಲೇಖೀಸಿ ಆದೇಶ ಹೊರಡಿಸಿದೆ.
ಬೆಂಗಳೂರು ವಿಶ್ವವಿದ್ಯಾಲಯದಿಂದ ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸೇವೆಗೆ ಸೇರಲು ಇಚ್ಛಿಸುವ ಬೋಧಕ, ಬೋಧಕೇತರ ಸಿಬ್ಬಂದಿಯ ಅಭಿಮತ ಪಡೆಯಲು ತಿಳಿಸಿದೆ. ಸೆಂಟ್ರಲ್ ಕಾಲೇಜು ಆವರಣದ ಜಮೀನು ಮತ್ತು ಕಟ್ಟಡಗಳನ್ನು ಬೆಂಗಳೂರು ಕೇಂದ್ರ ವಿವಿಗೆ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರ ಆವರಣದ ಜಮೀನು ಮತ್ತು ಕಟ್ಟಡಗಳನ್ನು ಬೆಂಗಳೂರು ಉತ್ತರ ವಿವಿಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ವರ್ಗಾಯಿಸಲು ಬೆಂವಿವಿಗೆ ಸೂಚಿಸಿದೆ.
ಬೆಂವಿವಿ ವ್ಯಾಪ್ತಿಯಲ್ಲಿ ಅಧ್ಯಯನ ಮಾಡುತ್ತಿರುವ 700ಕ್ಕೂ ಅಧಿಕ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಗಳನ್ನು ನಡೆಸಲು ಭದ್ರತೆಯ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು ಕೋರ್ಸ್ ಪೂರೈಸುವವರೆಗೂ ಸೆಂಟ್ರಲ್ ಕಾಲೇಜು ಆವರಣದ ನ್ಯಾಚುರಲ್ ಸೈನ್ಸ್ ಬ್ಲಾಕ್ ಕಟ್ಟಡವನ್ನು ಬೆಂವಿವಿಯಲ್ಲೇ ಉಳಿಸಿಕೊಳ್ಳಲು ನಿರ್ದೇಶಿಸಿದೆ.
ಆರಂಭಿಕ ಅಗತ್ಯ ಪೂರೈಸಲು ಬೆಂವಿವಿಯಿಂದ ಬೆಂಗಳೂರು ಉತ್ತರ ವಿವಿಗೆ 15 ಕೋಟಿ ರೂ. ಹಾಗೂ ಬೆಂಗಳೂರು ಕೇಂದ್ರ ವಿವಿಗೆ 10 ಕೋಟಿ ರೂ. ಹಂತಹಂತವಾಗಿ ವರ್ಗಾಯಿಸಲು ತಿಳಿಸಿದೆ. 2017-18ನೇ ಸಾಲಿಗೆ ಸಂಗ್ರಹವಾಗುವ ಸಂಯೋಜನಾ ಶುಲ್ಕವನ್ನು ಸಂಯೋಜನಾ ವೆಚ್ಚ ಕಡಿತಗೊಳಿಸಿ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ವಿವಿಗಳ ಪ್ರಾದೇಶಿಕ ವ್ಯಾಪ್ತಿಗೆ ಒಳಪಡುವ ಸಂಯೋಜಿತ ಕಾಲೇಜಿನ ಸಂಖ್ಯೆಗೆ ಅನುಗುಣವಾಗಿ ಎರಡು ವಿವಿಗೂ ಹಂಚಿಕೆ ಮಾಡಬೇಕು.
ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಮಂಜೂರಾಗುವ ವೇತನ ಹಾಗೂ ಪಿಂಚಣಿ ಅನುದಾನವನ್ನು ಸಿಬ್ಬಂದಿ ವರ್ಗಾವಣೆ ಪ್ರಮಾಣ ಅನುಸಾರ ಎರಡು ವಿವಿಗೂ ಬೆಂವಿವಿಯಿಂದಲೇ ವರ್ಗಾಯಿಸಬೇಕು. ಕೋಲಾರ ಸ್ನಾತಕೋತ್ತರ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ತ್ವರಿತವಾಗಿ ಪೂರ್ಣಗೊಳಿಸಿ ಗುತ್ತಿಗೆದಾರರಿಗೆ ಹಣ ಪಾವತಿಸಲು ಸರ್ಕಾರ ತಿಳಿಸಿದೆ.