Advertisement

ಒಂದೇ ವಿನ್ಯಾಸದ ಆಯುಷ್ಮಾನ್‌ ಭಾರತ ಕಿಯೋಸ್ಕ್ ಸ್ಥಾಪನೆಗೆ ಸರಕಾರ ಆದೇಶ

09:33 PM Mar 03, 2024 | Team Udayavani |

ಬೆಂಗಳೂರು: ಆಯುಷ್ಮಾನ್‌ ಭಾರತ ಪ್ರಧಾನಮಂತ್ರಿ ಜನಾರೋಗ್ಯ-ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯ (ಎಬಿ-ಪಿಎಂಜೆಎವೈ-ಸಿಎಂ ಎಆರ್‌ಕೆ) ಮಾಹಿತಿ ಬಗ್ಗೆ ಆಸ್ಪತ್ರೆಗೆ ಬರುವ ಎಲ್ಲರಿಗೂ ಕಾಣುವ ಹಾಗೆ ಒಂದೇ ವಿನ್ಯಾಸದ ಕಿಯೋಸ್ಕ್ ಸ್ಥಾಪನೆ ಮಾಡುವಂತೆ ಸರಕಾರ ಆದೇಶ ಹೊರಡಿಸಿದೆ.

Advertisement

ಮಾ.15ರ ಒಳಗಾಗಿ ರಾಜ್ಯದ ಎಲ್ಲ ಜಿಲ್ಲಾ, ಸಾರ್ವಜನಿಕ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಮಹಾವಿದ್ಯಾನಿಲಯದ ಆಸ್ಪತ್ರೆಗಳಲ್ಲಿ ಎಬಿ-ಪಿಎಂಜೆಎವೈ-ಸಿಎಂ ಎಆರ್‌ಕೆ ಮಾಹಿತಿ ಸಿಗಬೇಕೆನ್ನುವ ನಿಟ್ಟಿನಲ್ಲಿ ಕಿಯೋಸ್ಕ್ ಸ್ಥಾಪಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಹೊರರೋಗಿಗಳ ವಿಭಾಗವನ್ನು 8/8/8 ಅಳತೆಯಲ್ಲಿ ಸ್ಥಾಪಿಸಲಾಗುತ್ತದೆ. ವಿದ್ಯುತ್‌ ಮತ್ತು ಅಂತರ್ಜಾಲ ಸಂಪರ್ಕ ಕಲ್ಪಿಸಬೇಕು. ಪ್ರಧಾನಮಂತ್ರಿ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಅನುಮೋದಿತ ಭಾವಚಿತ್ರಗಳನ್ನು ಒಳಗೊಂಡಿರಬೇಕು. ಮಾಹಿತಿ ಒದಗಿಸಲು ಆರೋಗ್ಯ ಮಿತ್ರ ಕ್ಲೇಮ್‌ ಎಕ್ಸಿಕ್ಯೂಟಿವ್‌ ಅಥವಾ ಎಬಿ-ಪಿಎಂಜೆಎವೈ-ಸಿಎಂ ಎಆರ್‌ಕೆ ಬಗ್ಗೆ ತಿಳಿದಿರುವ ಸಿಬಂದಿ ಸದಾಕಾಲ ಕಿಯೋಸ್ಕ್ನಲ್ಲಿ ಉಪಸ್ಥಿತರಿರುವಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಕಿಯೋಸ್ಕ್ ನಿಂದ ಕರಪತ್ರ, ಮಡಿಕೆ ಪತ್ರ ಮುಂತಾದ ಮಾಹಿತಿ ಹಾಗೂ ಸಾರ್ವಜನಿಕ ಅರಿವು ಮೂಡಿಸುವ ಐಇಸಿ ಸಾಮಗ್ರಿ ಒದಗಿಸಲಾಗುತ್ತದೆ. ರೋಗಿಗಳ ಅರ್ಹತೆ ಪರೀಕ್ಷಿಸಿ, ಪರಿಶೀಲಿಸಿ ಮಾರ್ಗದರ್ಶನ ನೀಡುವುದು, ಒಳರೋಗಿ ಫಲಾನುಭವಿಗಳ ದಾಖಲಾತಿ ಮತ್ತು ಪೂರ್ವ ನೋಂದಣಿಯನ್ನು ವಿಶ್ವಸ್ಥ ಮಂಡಳಿಯ ಜಾಲತಾಣದಲ್ಲಿ ನಮೂದಿಸುವುದು. ಕಿಯೋಸ್ಕ್ ಸ್ಥಾಪನೆಗೆ ಅಗತ್ಯವಿರುವ ವೆಚ್ಚವನ್ನು ಎಬಿ-ಪಿಎಂಜೆಎವೈ-ಸಿಎಂ ಎಆರ್‌ಕೆ ಮರುಪಾವತಿಯಾದ ಚಿಕಿತ್ಸಾ ನಿಧಿಯಿಂದ ಭರಿಸಲು ತಿಳಿಸಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next