Advertisement

ಮಾಹಿತಿ ನೀಡದ್ದರಿಂದಲೇ ಕೋವಿಡ್ 19 ಸೋಂಕು ಹೆಚ್ಚಳ?

02:27 AM Aug 01, 2020 | Hari Prasad |

ಮಂಗಳೂರು/ಉಡುಪಿ: ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಗ್ರಾ.ಪಂ. ಅಧಿಕಾರಿಗಳವರೆಗೆ ಎಲ್ಲರಿಗೂ ಕೋವಿಡ್ 19 ನಿಯಂತ್ರಿಸಲು ಜನರ ಸಹಕಾರ ಅಗತ್ಯ.

Advertisement

ಜನರು ನಿಯಮ ಪಾಲಿಸಿ ಎಚ್ಚರಿಕೆ ವಹಿಸುವುದು ಅಗತ್ಯ ಎನ್ನುತ್ತಿದ್ದಾರೆ.

ಆದರೆ ರಾಜ್ಯದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದಿರುವ ಮೂಲಕ ಸೋಂಕು ಹೆಚ್ಚುವುದಕ್ಕೆ ಅಧಿಕಾರಿಗಳೇ ಕಾರಣರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಕೋವಿಡ್ 19 ಕಾಣಿಸಿಕೊಂಡ ಆರಂಭದಲ್ಲಿ ಓರ್ವ ರೋಗಿಯ ಕೇಸ್‌ ಹಿಸ್ಟರಿಯನ್ನು ತಯಾರಿಸುತ್ತಿದ್ದುದಕ್ಕಿಂತ ಸುಧಾರಿತ ಮಾದರಿಯಲ್ಲಿ ಈಗ ತಯಾರಿಸಲಾಗುತ್ತಿದೆ. ಆದರೆ ಬರಬರುತ್ತಾ ಅಧಿಕಾರಿಗಳು ಬಹಿರಂಗಪಡಿಸುವ ಮಾಹಿತಿಯ ಪ್ರಮಾಣವನ್ನು ಮಾತ್ರ ಕಡಿಮೆ ಮಾಡುತ್ತಾ ಬಂದಿದ್ದಾರೆ.

ಆರಂಭದಲ್ಲಿ ಒಂದು ಪ್ರದೇಶದ ಓರ್ವ ವ್ಯಕ್ತಿಗೆ ಸೋಂಕು ತಗಲಿದರೆ ಕೂಡಲೇ ಆ ಬಗ್ಗೆ ವಿವರವಾದ ಮಾಹಿತಿ ನೀಡಲಾಗುತ್ತಿತ್ತು. ಇದರಿಂದ ಜನರೂ ಸ್ವಯಂ ಎಚ್ಚರಿಕೆಯಿಂದ ಇರುವುದು ಸಾಧ್ಯವಾಗುತ್ತಿತ್ತು. ಈಗಿನ ಪರಿಸ್ಥಿತಿಯೇ ಬೇರೆ. ಸ್ಥಳೀಯವಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿರುವರಾದರೂ ಬಹುತೇಕ ಕಡೆ, ಅದರಲ್ಲೂ ನಗರ ಪ್ರದೇಶದಲ್ಲಿ ಇದರ ಪಾಲನೆಯಾಗುತ್ತಿಲ್ಲ. ಇಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಗಣನೀಯವಾಗಿ ಏರುತ್ತಲೇ ಇವೆ.

Advertisement

ಜನರಿಗೆ ಮಾಹಿತಿ ಏಕೆ ಬೇಕು?
ಕಣ್ಣಿಗೆ ಕಾಣದ ವೈರಸ್‌ನಿಂದ ವೇಗವಾಗಿ ಹರಡುವ ರೋಗವನ್ನು ನಿಯಂತ್ರಿಸಲು ಜನರಿಗೆ ಕನಿಷ್ಠ ಮಾಹಿತಿಯಾದರೂ ಸಿಗಬೇಕಾಗುತ್ತದೆ. ಉದಾ: ನಗರ ಪ್ರದೇಶದ ಹೊಟೇಲ್‌ ಸಿಬಂದಿ, ಯಾವುದೋ ಅಂಗಡಿಯವರಿಗೆ, ಸಾರಿಗೆ ಸಿಬಂದಿಗೆ ಅಥವಾ ಯಾವುದೇ ಸೇವೆ ನೀಡುವ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಅದು ತತ್‌ಕ್ಷಣ ಸಾರ್ವಜನಿಕರಿಗೆ ಗೊತ್ತಾಗಬೇಕು ಆಗ ಮಾತ್ರ ಅವರು ಸ್ವಯಂಪ್ರೇರಿತವಾಗಿ ಜಾಗರೂಕರಾಗಲು ಸಾಧ್ಯ.

ಉದಾ: ಮೇಲೆ ತಿಳಿಸಿದ ಯಾವುದೇ ಒಂದು ವಿಭಾಗದವರಿಗೆ ಸೋಂಕು ದೃಢಪಟ್ಟದ್ದು ಎಲ್ಲರಿಗೂ ತಿಳಿದರೆ ಆಗ ಅವರ ಸಂಪರ್ಕ ಹೊಂದಿರಬಹುದಾದ ಎಲ್ಲರೂ ಎಚ್ಚರಿಕೆ ವಹಿಸಲು ಸಾಧ್ಯ. ಆದರೆ ಈಗ ಸರಕಾರಿ ಮೂಲಗಳಿಂದ ಬಹಿರಂಗಗೊಳ್ಳುತ್ತಿರುವ ವರದಿಯಲ್ಲಿ ಕೇವಲ ಜಿಲ್ಲೆಯ ಎಷ್ಟು ಮಂದಿಗೆ ಸೋಂಕು ತಗಲಿದೆ ಎಂಬುದು ಮಾತ್ರ ಇರುತ್ತದೆ. ಮುಖ್ಯವಾಗಿ ನಗರ ಪ್ರದೇಶದವರಿಗೆ ಅವರು ಎಲ್ಲಿಯವರು, ಏನು ಎತ್ತ ಎಂಬುದು ತಿಳಿಯುವುದೇ ಇಲ್ಲ. ಆದುದರಿಂದ ಅವರು ಇಂತಹ ಪ್ರದೇಶಗಳಿಗೆ ಹೋಗಿ ಸೋಂಕು ತಗಲಿದ್ದರೂ ತಮಗೆ ತಿಳಿಯದಂತೆ ನೂರಾರು ಮಂದಿಗೆ ಪಸರಿಸಿಯಾಗಿರುತ್ತದೆ. ಇದುವೇ ಈಗ ಹೆಚ್ಚಾಗುತ್ತಿರುವ ‘ಮೂಲ ಪತ್ತೆಯಾಗದ ಕೇಸುಗಳು’. ಇದು ನಿಜಕ್ಕೂ ಆತಂಕಕಾರಿ.

ಎಲ್ಲಿದೆ ಚೈನ್‌?
ಲಾಕ್‌ಡೌನ್‌, ಸೀಲ್‌ಡೌನ್‌ ಉದ್ದೇಶ ಕೋವಿಡ್ 19 ಸಂಪರ್ಕವನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸುವುದು. ಅಂದರೆ ಕೋವಿಡ್ 19 ಲಿಂಕ್‌ ಬ್ರೇಕ್‌ ಮಾಡುವುದು. ಇದಕ್ಕೆ ‘ಬ್ರೇಕ್‌ದ ಚೈನ್‌’ ಎನ್ನಲಾಗುತ್ತಿದೆ. ಆದರೆ ಈಗಚೈನ್‌ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಹೀಗಾದರೆ ಅದನ್ನು ಬ್ರೇಕ್‌ ಮಾಡುವುದಾದರೂ ಹೇಗೆ?

ಮುಚ್ಚಿಟ್ಟಷ್ಟು ಅಪಾಯ ಹೆಚ್ಚು
ಮೊದಲೇ ಕಣ್ಣಿಗೆ ಕಾಣದ ವೈರಸ್‌ ಇದಾಗಿದ್ದು, ಜನರಿಗೆ ಮಾಹಿತಿ ಸಿಗದಿದ್ದರೆ ಕಣ್ಣಿಗೆ ಬಟ್ಟೆ ಕಟ್ಟಿ ಹೋರಾಡಿ ಅಂದಂತಾಗುತ್ತದೆ. ಒಂದುವೇಳೆ ಇಂತಹ ಕಡೆ ಸೋಂಕು ಪೀಡಿತರು ಇದ್ದಾರೆ ಎಂಬುದು ಜನರಿಗೆ ಗೊತ್ತಾದರೆ, ತತ್‌ಕ್ಷಣಕ್ಕೆ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ಜತೆಗೆ ಆ ಪರಿ ಸರಕ್ಕೆ ಓಡಾಟ ಕಡಿಮೆ ಮಾಡಬಹುದು.
ಆ ಮೂಲಕ ಕೋವಿಡ್ 19 ಸೋಂಕು ವ್ಯಾಪಿಸುವುದನ್ನು ಒಂದು ಹಂತದವರೆಗೆ ನಿಯಂತ್ರಿಸುವುದಕ್ಕೂ ಅನುಕೂಲವಾಗುತ್ತದೆ. ಅದು ಬಿಟ್ಟು, ಮಾಹಿತಿಯನ್ನು ಮುಚ್ಚಿಟ್ಟರೆ ಸೋಂಕು ಮತ್ತಷ್ಟು ಹರಡಲು ಸಹಾಯ ಮಾಡಿದಂತಾಗುತ್ತದೆ.

ಮಂಗಳೂರಿನ ಶೇ. 40ರಷ್ಟು ಪ್ರದೇಶಗಳಲ್ಲಿ ಸೋಂಕು ಹರಡುತ್ತಿದೆ. ವ್ಯಕ್ತಿ ಸೋಂಕಿಗೊಳಗಾದರೆ ವಾಸ್ತವ್ಯ ವ್ಯಾಪ್ತಿಯಲ್ಲಿ ಜನರಿಗೆ ತಿಳಿ ಹೇಳಿ ಕಂಟೈನ್‌ಮೆಂಟ್‌ ವಲಯ ಮಾಡಲಾಗುತ್ತದೆ. ಸದ್ಯ ಸೋಂಕು ಹೆಚ್ಚುತ್ತಿರುವುದರಿಂದ ಮತ್ತು ಇಲಾಖೆಯಲ್ಲಿ ಸಿಬಂದಿ ಕಡಿಮೆ ಇರುವುದರಿಂದ ಎಲ್ಲ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು ಸಾಧ್ಯವಾಗುತ್ತಿಲ್ಲ.
– ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ರೋಗಲಕ್ಷಣ ಇಲ್ಲದಿರಬಹುದು; ಆದರೆ ಪಾಸಿಟಿವ್‌ ಇದ್ದು, ತಿರುಗಾಡುತ್ತಿದ್ದರೆ ರೋಗಾಣು ಹಬ್ಬಿಸುತ್ತಲೇ ಇರುತ್ತಾರೆ. ಜನ ಸ್ವಯಂ ಪ್ರೇರಿತರಾಗಿ ಸೀಲ್‌ಡೌನ್‌ ಮಾಡಿಸಬೇಕಾಗಿದೆ. ಆರೋಗ್ಯ ಮತ್ತು ಕಂದಾಯ ಇಲಾಖೆಯಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
– ಡಾ| ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next