ಉಡುಪಿ: ಸರಕಾರಿ ಉದ್ಯೋಗದಲ್ಲಿರುವ ಅಧಿಕಾರಿಗಳು ಸೇವೆಯ ನಿಮಿತ್ತ ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘ, ಮುನಿಯಾಲು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಎನ್‌ಎಸ್‌ಎಸ್ ಘಟಕ, ಜಿಲ್ಲಾ ರಕ್ತ ನಿಧಿ ಸಹಯೋಗದಲ್ಲಿ ಬುಧವಾರ ಮಿಷನ್ ಕಂಪೌಂಡ್ ಸಮೀಪ ಆಯೋಜಿಸಿದ್ದ 5ನೇ ವರ್ಷದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದಾನದಲ್ಲಿ ಅತ್ಯಂತ ಶ್ರೇಷ್ಠ ರಕ್ತದಾನ. ನಾವು ಮಾಡುವ ರಕ್ತದಾನ ಇನ್ನೊಬ್ಬರ ಜೀವವನ್ನು ಉಳಿಸುತ್ತದೆ. ಜಿಲ್ಲೆಯಲ್ಲಿ ರಕ್ತದಾನದ ಕುರಿತು ಸಾಕಷ್ಟು ಅರಿವು ಇದೆ. ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಕ್ತವನ್ನು ಸಂಗ್ರಹಿಸುವ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಗ್ರಾಮ ಲೆಕ್ಕಾಧಿಕಾರಿಗಳು ಇಂತಹ ಸಮಾಜಮುಖೀ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಉಡುಪಿ ತಾಲೂಕು ತಹಶಿಲ್ದಾರ್ ಪ್ರದೀಪ್ ಎಸ್. ಕುರುಡೇಕರ್, ಕಾಪು ತಾಲೂಕು ತಹಶೀಲ್ದಾರ್ ಮಹಮ್ಮದ್ ಇಸಾಕ್, ಜಿಲ್ಲಾಸ್ಪತ್ರೆ ಅಜ್ಜರಕಾಡು ರಕ್ತನಿಧಿ ವೈದ್ಯಾಧಿಕಾರಿ ಡಾ| ವೀಣಾ ಕುಮಾರಿ ಎಂ., ಮುನಿಯಾಲು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲ ಡಾ| ಸತ್ಯನಾರಾಯಣ ಬಿ. ಉಪಸ್ಥಿತರಿದ್ದರು. ಗ್ರಾಮಲೆಕ್ಕಾಧಿಕಾರಿಗಳ ಸಂಘದ ತಾಲೂಕು ಕಾರ್ಯದರ್ಶಿ ಕಾರ್ತಿಕೇಯ ಭಟ್ ವಂದಿಸಿದರು. ಮಾಳಪ್ಪ ಸ್ವಾಗತಿಸಿ ನಿರ್ವಹಿಸಿದರು.
ಜಾತಿ ಪ್ರಮಾಣಪತ್ರಕ್ಕೆ ಪರದಾಡಿದ್ದ ಡಿಸಿ!
ಹಿಂದೆ ವಿದ್ಯಾರ್ಥಿಯಾಗಿದ್ದ ಸಂದರ್ಭ ನಾನು ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಸಾಕಷ್ಟು ಕಷ್ಟ ಅನುಭವಿಸಿದ್ದೇನೆ. ಅಂದು ಅವರಿಗೂ ಗೊತ್ತಿರಲಿಲ್ಲ ನಾನು ಜಿಲ್ಲಾಧಿಕಾರಿಯಾಗುತ್ತೇನೆ ಅಂತ. ಕಚೇರಿಗೆ ಬರುವ ವ್ಯಕ್ತಿಯನ್ನು ಕಡೆಗಣಿಸುವುದು ಸರಿಯಲ್ಲ. ಗ್ರಾಮಲೆಕ್ಕಾಧಿಕಾರಿಗಳು ಗ್ರಾಮೀಣಾಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ ಎಂದರು.