ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ತಿಂಗಳಿಂದ ಸಿಡಿಲು-ಗುಡುಗು, ಮಿಂಚಿನ ಮತ್ತು ಬಿರುಗಾಳಿಯಿಂದ ಕೂಡಿದ ಅಬ್ಬರದ ಮಳೆಯಿಂದ ಪಟ್ಟಣದ ಅನೇಕ ಸರಕಾರಿ ಇಲಾಖೆ ಕಟ್ಟಡಗಳು ಮಳೆನೀರಿನಿಂದ ಸೋರುತ್ತಿವೆ. ಇದರಿಂದ ಕಚೇರಿಗಳಲ್ಲಿ ಸಿಬ್ಬಂದಿ ಕುಳಿತುಕೊಳ್ಳಲು ತೊಂದರೆಪಡುವಂತಹ ಪರಿಸ್ಥಿತಿ ಉಂಟಾಗಿದೆ.
ತಾಲೂಕಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಸರಕಾರಿ ಕಟ್ಟಡಗಳಲ್ಲಿ ಮಳೆನೀರು ಜಿಟಿಜಿಟಿಯಾಗಿ ಹನಿಗಳು ಕೋಣೆಗಳಲ್ಲಿ ಬೀಳುತ್ತಿರುವುದರಿಂದ ಸಿಬ್ಬಂದಿ ಕುಳಿತುಕೊಂಡು ಕರ್ತವ್ಯ ನಿರ್ವಹಿಸಲು ತೊಂದರೆಯಾಗಿದೆ. ಚಂದಾಪುರ ಪಟ್ಟಣದಲ್ಲಿರುವ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ, ಸಣ್ಣ ನೀರಾವರಿ ಇಲಾಖೆ, ತಾಪಂ, ಚಂದ್ರಂಪಳ್ಳಿ ನೀರಾವರಿ ಯೋಜನೆ ಕಚೇರಿ, ಜೆಸ್ಕಾಂ ಕಚೇರಿ, ಪಶು ಸಂಗೋಪನಾ ಇಲಾಖೆ, ತಹಸೀಲ್ ಕಚೇರಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಕಟ್ಟಡ, ವಲಯ ಅರಣ್ಯ ಇಲಾಖೆ ಕಟ್ಟಡ, ಶಿಕ್ಷಣ ಇಲಾಖೆ, ಬಿಆರ್‌ಸಿ ಇಲಾಖೆ ಕಟ್ಟಡಗಳು ಮಳೆಯಿಂದ ಸೋರುತ್ತಿರುವುದರಿಂದ ಕಚೇರಿಯಲ್ಲಿದ್ದ ಅಗತ್ಯ ದಾಖಲೆಗಳು ಮಳೆ ನೀರಿನಿಂದ ನೆನೆದು ಹಾನಿಗೊಂಡಿವೆ.
ಮಾಜಿ ಸಿಎಂ ದಿ| ವೀರೇಂದ್ರ ಪಾಟೀಲರು ಎಸ್.ನಿಜಲಿಂಗಪ್ಪನವರ ಸಂಪುಟದಲ್ಲಿ ವಿದ್ಯುತ್, ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದಾಗ 1966-67ರಲ್ಲಿ ನಿರ್ಮಿಸಿದ ಎಲ್ಲ ಕಟ್ಟಡಗಳು ಇದೀಗ ತುಂಬಾ ದುಸ್ಥಿತಿಯಲ್ಲಿವೆ. ತಾಪಂ ಕಚೇರಿ ಪ್ರತಿಯೊಂದು ಕೋಣೆಗಳಲ್ಲಿ ಮಳೆಹನಿಗಳುನಿತ್ಯ ಸೋರುತ್ತಿವೆ. ವಿದ್ಯುತ್ ಸಂಪರ್ಕ ತಂತಿಗಳು ಕಡಿದು ಹೋಗುತ್ತಿವೆ. ಆಗಾಗ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗುತ್ತಿವೆ. ಮಳೆ ಸೋರಿಕೆಯಿಂದ ಕಬ್ಬಿಣ ಸಲಾಕೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ದುಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಸಿಬ್ಬಂದಿ ಜೀವದ ಭಯದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ.
ಬಿಇಒ ಕಚೇರಿಯಲ್ಲಿ ಕಪಾಟುಗಳು, ಅಲಮಾರಿಗಳು ತುಕ್ಕು ಹಿಡಿದು ಹೋಗಿವೆ. ತಹಸೀಲ್ ಕಚೇರಿಯಲ್ಲಿ ಅನೇಕ ದಾಖಲೆಗಳು ಮಳೆ ನೀರಿನ ಹನಿಗಳಿಂದ ಹಾಳಾಗುತ್ತಿವೆ. ಅಲ್ಲದೇ ತಾಪಂ ಕಚೇರಿ ಸಂಪೂರ್ಣ ದುಸ್ಥಿತಿಯಲ್ಲಿ ಅನೇಕ ವರ್ಷಗಳ ಹಳೆಯ ದಾಖಲೆಗಳು ಸಂಪೂರ್ಣ ಹಾನಿಯಾಗುತ್ತಿವೆ ಎಂದು ಸಿಬ್ಬಂದಿ ಹೇಳುತ್ತಾರೆ. ತಾಲೂಕಿನಲ್ಲಿ ಹಳೆ ಕಟ್ಟಡಗಳಲ್ಲಿಯೇ ಕಳೆದ ನಾಲ್ಕು ದಶಕಗಳಿಂದ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ.
ಜಿಪಂ (1982), ಸಣ್ಣ ನೀರಾವರಿ (1992), ತಾಪಂ ಕಚೇರಿ (1966), ಚಂದ್ರಂಪಳ್ಳಿ ಯೋಜನೆ ವಿಭಾಗ (1966), ಲೋಇ (1966), ಜೆಸ್ಕಾಂ (1967), ಪಶು ಇಲಾಖೆ (1967), ತಹಸೀಲ ಕಚೇರಿ (1993) ಕಟ್ಟಡಗಳು ಪ್ರಾರಂಭಿಸಲಾಗಿದೆ. ಆದರೆ ಇಲ್ಲಿವರೆಗೆ ಯಾವುದೇ ಇಲಾಖೆಯ ಹೊಸ ಕಟ್ಟಡ ಇನ್ನುವರೆಗೆನಿರ್ಮಿಸಿಲ್ಲವೆಂದು ಹೇಳಲಾಗುತ್ತಿದೆ. ಚುನಾಯಿತ
ಜನಪ್ರತಿನಿಧಿ ಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಸರಕಾರಕ್ಕೆ ಶಿಫಾರಸು ಮಾಡಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಟ್ಟಡವು ಸಂಪೂರ್ಣ ಹಾಳಾಗಿ ಹೋಗಿದೆ. ರಸ್ತೆ ಮೇಲಿನ ಎಲ್ಲ ಮಳೆನೀರು ಕಚೇರಿಯೊಳಗೆ ಬರುತ್ತದೆ. ಕಟ್ಟಡವು 40 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ದಾಖಲೆಗಳು ಇಟ್ಟಿಕೊಳ್ಳಲು ತೊಂದರೆ ಆಗಿದೆ. ಹೊಸ ಕಟ್ಟಡ ಅವಶ್ಯಕತೆ ಇದೆ. –
ಮಹ್ಮದ ಅಹೆಮದ ಹುಸೇನ, ಜಿಪಂ ಎಇಇ
ಶಾಮರಾವ ಚಿಂಚೋಳಿ