ಹೊಸದಿಲ್ಲಿ : ಪ್ರತೀ ತಿಂಗಳು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸುವ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರ ಕೈಬಿಡುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಇಂದು ಗುರುವಾರ ತಿಳಿಸಿವೆ.
ಕಳೆದ ಹದಿನೇಳು ತಿಂಗಳಲ್ಲಿ, 19 ಕಂತುಗಳಲ್ಲಿ, ಒಟ್ಟು 76.5 ರೂ.ಗಳನ್ನು ಅಡುಗೆ ಅನಿಲ ಸಿಲಿಂಡರ್ ಮೇಲೆ ಏರಿಸಿದ ಬಳಿಕ ರಾಷ್ಟ್ರೀಯ ತೈಲ ಕಂಪೆನಿಗಳು ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಮಾಸಿಕ ದರ ಪರಿಷ್ಕರಣೆಯನ್ನು ತಪ್ಪಿಸಿದ್ದವು.
2018ರೊಳಗೆ ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಪೂರ್ತಿಯಾಗಿ ನಿವಾರಿಸುವ ನಿಟ್ಟಿನಲ್ಲಿ ಕಳೆದ ವರ್ಷ ಜುಲೈ 1ರಿಂದ ಪ್ರತೀ ತಿಂಗಳ ಒಂದನೇ ತಾರೀಕಿನಂದು ಸರಕಾರಿ ಒಡೆತನದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಓಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ (ಬಿಪಿಸಿಎಲ್) ಮತ್ತು ಹಿಂದುಸ್ಥಾರ್ ಪೆಟ್ರೋಲಿಯಂ ಕಾರ್ಪೊರೇಶನ್ (ಎಚ್‌ಪಿಸಿಎಲ್) ಕಂಪೆನಿಗಳು ಅಡುಗೆ ಅನಿಲ ಬೆಲೆಯನ್ನು ಏರಿಸುತ್ತಲೇ ಬಂದಿದ್ದವು.
ಕಳೆದ ನ.1ರಂದು ಕೊನೆಯ ಬಾರಿ 4.50 ರೂ. ಹೆಚ್ಚಿಸಿ ತಲಾ ಸಿಲಿಂಡರ್ ಬೆಲೆಯನ್ನು 495.69 ರೂ.ಗೆ ಏರಿಸಲಾಗಿತ್ತು. ಈ ಬಗ್ಗೆ ಸರಕಾರಿ ಒಡೆತನದ ಸಂಸ್ಥೆಗಳು ಪ್ರಕಟನೆ ಹೊರಡಿಸಿದ್ದವು.
ಪ್ರತೀ ಮನೆಗೆ ವರ್ಷಕ್ಕೆ 14.2 ಕೆಜಿ ತೂಕದ ತಲಾ 12 ಸಿಲಿಂಡರ್‌ಗಳನ್ನು ಸರಕಾರ ಸಬ್ಸಿಡಿ ದರದಲ್ಲಿ ಪೂರೈಸುತ್ತಿದೆ. ಇದಕ್ಕೆ ಮೀರಿದ ಸಿಲಿಂಡರ್‌ಗಳನ್ನು ಗ್ರಾಹಕರು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗುತ್ತದೆ.