Advertisement

50 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶ

12:26 PM Aug 26, 2018 | |

ಬೆಂಗಳೂರು: ಸುದೀರ್ಘ‌ ಬಿಡುವಿನ ಬಳಿಕ ಮತ್ತೆ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿರುವ ಬೆಂಗಳೂರು ನಗರ ಜಿಲ್ಲಾಡಳಿತ, ನಾಲ್ಕು ಕಡೆ ಕಾರ್ಯಾಚರಣೆ ನಡೆಸಿ 50 ಕೋಟಿ ರೂ. ಮೌಲ್ಯದ 6.10 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆದಿದೆ.

Advertisement

ನಗರ ಜಿಲ್ಲಾಧಿಕಾರಿ ವಿಜಯ್‌ ಶಂಕರ್‌ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಅಧಿಕಾರಿಗಳು, ಬೆಂಗಳೂರು ಪೂರ್ವ ತಾಲೂಕಿನ ಸಿದ್ದಾಪುರ ಗ್ರಾಮದ ಸರ್ವೇ ಸಂಖ್ಯೆ 15ರಲ್ಲಿ ಒಂದು ಎಕರೆ, ಬಾಣಸವಾಡಿಯ ಸರ್ವೇ ಸಂ.7ರಲ್ಲಿ 10 ಗುಂಟೆ, ಹಿರಂಡಹಳ್ಳಿ ಸರ್ವೇ ಸಂ.39ರಲ್ಲಿ 4 ಎಕರೆ ಹಾಗೂ ನಾಗೊಂಡನಹಳ್ಳಿ ಸರ್ವೇ ಸಂ.120ರಲ್ಲಿ ಒಂದು ಎಕರೆ ಸೇರಿ ಒಟ್ಟು 6 ಎಕರೆ 10 ಗುಂಟೆ ಜಮೀನು ವಶಕ್ಕೆ ಪಡೆದಿದ್ದಾರೆ.

ರಾತ್ರೋರಾತ್ರಿ ಗಾನೈಟ್‌ ಶಿಫ್ಟ್: ಬಾಣಸವಾಡಿಯ 100 ಅಡಿ ರಸ್ತೆಯ ಪಕ್ಕದ 10 ಗುಂಟೆ ಸರ್ಕಾರಿ ಜಾಗಕ್ಕೆ ಕೃಷ್ಣಪ್ಪ ಎಂಬುವವರು ನಕಲಿ ದಾಖಲೆ ಸೃಷ್ಟಿಸಿ ರಾಮಕೃಷ್ಣಪ್ಪ ಎಂಬುವವರಿಗೆ ಬಾಡಿಗೆಗೆ ನೀಡಿದ್ದಾರೆ. ರಾಮಕೃಷ್ಣ ಎಂಬುವರು, ಗ್ರಾನೈಟ್‌ ವ್ಯಾಪಾರ ನಡೆಸುವ ಮತ್ತೂಬ್ಬ ವ್ಯಕ್ತಿಗೆ ಬಾಡಿಗೆಗೆ ನೀಡಿದ್ದರು.

ಜಿಲ್ಲಾಡಳಿತ ದಾಳಿ ನಡೆಸುವ ವಿಷಯ ತಿಳಿದ ವ್ಯಾಪಾರಿ, ಸ್ಥಳದಲ್ಲಿದ್ದ ಬಹುತೇಕ ಗ್ರಾನೈಟ್‌ ಉತ್ಪನ್ನಗಳನ್ನು ರಾತ್ರೋರಾತ್ರಿ ಬೇರೆಡೆಗೆ ರವಾನಿಸಿದ್ದಾರೆ. ಶನಿವಾರ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಗ್ರಾನೈಟ್‌ ಕಂಪನಿಯಲ್ಲಿ ಉಳಿದಿದ್ದ ಎಲ್ಲ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದು, “ಸರ್ಕಾರಿ ಜಮೀನು’ ಫ‌ಲಕ ಅಳವಡಿಸಿದ್ದಾರೆ. ಜತೆಗೆ ತಂತಿಬೇಲಿ ಅಳವಡಿಸುತ್ತಿದ್ದಾರೆ.

ನಿರ್ಮಾಣ ಸಂಸ್ಥೆಯಿಂದ ಒತ್ತುವರಿ: ಆದರ್ಶ ಡೆವಲಪರ್ ಎಂಬ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆ, ಸಿದ್ದಾಪುರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಒಂದು ಎಕರೆ ಜಮೀನನ್ನು ವಶಕ್ಕೆ ಪಡೆದ ಜಿಲ್ಲಾಡಳಿತ, ಜಮೀನಿಗೆ ತಂತಿಬೇಲಿ ಅಳವಡಿಸಿದೆ. ಒಂದು ಎಕರೆ ಜಾಗದಲ್ಲಿ ಸಂಸ್ಥೆಯು ಕಟ್ಟಡ ತ್ಯಾಜ್ಯ ವಿಲೇವಾರಿ ಮಾಡಿದ್ದು, ಕಟ್ಟಡ ನಿರ್ಮಿಸಲು ಹಾಕಿದ್ದ ಅಡಿಪಾಯವನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

Advertisement

ಅದೇ ರೀತಿ ಹಿರಂಡಹಳ್ಳಿ ಗ್ರಾಮದಲ್ಲಿ ಆದೂರು ಮುರಳಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದ 4 ಎಕರೆ ಜಮೀನು ಹಾಗೂ ನಾಗೊಂಡನಹಳ್ಳಿಯಲ್ಲಿ ಡಿ.ನಾರಾಯಣಪ್ಪ ಎಂಬುವವರು ಅತಿಕ್ರಮಿಸಿಕೊಂಡಿದ್ದ ಒಂದು ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್‌.ಸಿ. ನಾಗರಾಜ್‌, ತಹಶೀಲ್ದಾರ್‌ ರಾಮ್‌ಲಕ್ಷ್ಮಣ್‌ ಕಾರ್ಯಾಚರಣೆ ತಂಡದಲ್ಲಿದ್ದರು.

ಕ್ರಿಮಿನಲ್‌ ಕೇಸ್‌ ದಾಖಲಿಸಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಜಿಲ್ಲಾಧಿಕಾರಿ ವಿಜಯ್‌ ಶಂಕರ್‌, ಸರ್ಕಾರಿ ಜಮೀನು ಒತ್ತುವರಿಯನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆ.

ತಡೆಯಾಜ್ಞೆ ತೆರವು ಕುರಿತು ಸಭೆ: ನಗರ ಜಿಲ್ಲಾಡಳಿತದ ವ್ಯಾಪ್ತಿಯಲ್ಲಿ ನೂರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ನಡೆಸದಂತೆ ಒತ್ತುವರಿದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಕುರಿತು ಶನಿವಾರ ಹಿರಿಯ ಅಧಿಕಾರಿಗಳು ಹಾಗೂ ಹಿರಿಯ ವಕೀಲರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಆದಷ್ಟು ಬೇಗ ತಡೆಯಾಜ್ಞೆ ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next