Advertisement

Telangana: ಸರ್ಕಾರಿ ಉದ್ಯೋಗಾಕಾಂಕ್ಷಿ ಆತ್ಮಹತ್ಯೆ- ರಾಜಕೀಯ ತಿರುವು ಪಡೆದುಕೊಂಡ ಪ್ರಕರಣ

09:24 PM Oct 14, 2023 | Team Udayavani |

ಹೈದರಾಬಾದ್‌: ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ರಾಜ್ಯಸರ್ಕಾರ ಮುಂದೂಡಿದ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಯೊಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಬೆನ್ನಲ್ಲೇ ರಾಜ್ಯಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿವೆ.

Advertisement

ನಗರದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ವಾರಂಗಲ್‌ ಮೂಲದ 23 ವರ್ಷದ ಯುವತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಸರ್ಕಾರ, ಗ್ರೂಪ್‌-2 ಪರೀಕ್ಷೆಯನ್ನು ಮುಂದೂಡಿತು. ಇದು 2ನೇ ಬಾರಿಗೆ ಪರೀಕ್ಷೆ ಮುಂದೂಡುತ್ತಿರುವುದರಿಂದ ಉದ್ಯೋಗ ಸಿಗಲು ವಿಳಂಬವಾಗುತ್ತಿರುವುದಕ್ಕೆ ಹತಾಶಳಾದ ಯುವತಿ, ಹಾಸ್ಟೆಲ್‌ನಲ್ಲೇ ಶುಕ್ರವಾರ ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಆಕೆ ಆತ್ಮಹತ್ಯೆಗೆ ಮುಂಚೆ ಪತ್ರವನ್ನೂ ಬರೆದಿಟ್ಟು ತನ್ನ ಪೋಷಕರಲ್ಲಿ ಕ್ಷಮೆಯಾಚಿಸಿದ್ದಾಳೆಂದು ಪೊಲೀಸರು ಹೇಳಿದ್ದಾರೆ.

ಯುವತಿ ಆತ್ಮಹತ್ಯೆ ವಿಚಾರ ಹೊರಬೀಳುತ್ತಿದ್ದಂತೆ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲಿ ಜಮಾಯಿಸಿ ತೀವ್ರ ಪ್ರತಿಭಟನೆ ನಡೆಸಿದ್ದಾರಲ್ಲದೆ, ಶವವನ್ನು ಆಸ್ಪತ್ರೆಗೆ ಸಾಗಿಸುವ ಪೊಲೀಸರ ಪ್ರಯತ್ನಕ್ಕೂ ಅಡ್ಡಿಪಡಿಸಿದ್ದಾರೆ. ನ.30ರಂದು ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವಂತೆಯೇ ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದೆ.

ರಾಹುಲ್‌ ಆಕ್ರೋಶ:
ಉದ್ಯೋಗಾಕಾಂಕ್ಷಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಖಂಡಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ. ಬಿಆರ್‌ಎಸ್‌ನಿಂದ ಕನಸುಗಳ ಮತ್ತು ನಿರೀಕ್ಷೆಗಳ ಕೊಲೆ ಎಂದು ಟ್ವೀಟ್‌ ಮಾಡಿದ್ದಾರೆ. ಹತ್ತು ವರ್ಷಗಳಿಂದ ಬಿಜೆಪಿ ರಿಷ್ತೇದಾರ್‌ ಸಮಿತಿ ಮತ್ತು ಕೇಂದ್ರದಲ್ಲಿನ ಬಿಜೆಪಿ ಜತೆಸೇರಿ ರಾಜ್ಯವನ್ನೇ ಹಾಳು ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಬರೆದಿಟ್ಟಿರುವ ಪತ್ರವನ್ನು ಪೊಲೀಸರು ಬಹಿರಂಗಪಡಿಸಬೇಕು ಎಂದು ಬಿಜೆಪಿ ನಾಯಕ ಕೆ.ಲಕ್ಷ್ಮಣ್‌ ಆರೋಪಿಸಿದ್ದಾರೆ.

Advertisement

ವರದಿ ಕೇಳಿದ ಗವರ್ನರ್‌:
ಘಟನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ರಾಜ್ಯ ಲೋಕಸೇವಾ ಆಯೋಗದ ಕಾರ್ಯದರ್ಶಿಗೆ ತೆಲಂಗಾಣ ರಾಜ್ಯಪಾಲರಾದ ತಮಿಳಿ ಸೈ ಸೌಂದರರಾಜನ್‌ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next