Advertisement
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಶನಿವಾರ ರಾತ್ರಿಯಿಂದಲೇ ನಿರಂತರವಾಗಿ, ಡಾ.ರಾಜ್‌ಕುಮಾರ್ ಅವರ ಕುಟುಂಬ ಹಾಗೂ ಅಂಬರೀಶ್ ಕುಟುಂಬ ಸದಸ್ಯರ ಜತೆ, ಪೊಲೀಸ್ ಅಧಿಕಾರಿಗಳು ಹಾಗೂ ಇತರೆ ಹಿರಿಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದು, ಕಾನೂನು ಸುವ್ಯವಸ್ಥೆ ಸೇರಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡರು. ಅಂಬರೀಶ್ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಹಾಗೂ ಅಂತ್ಯಕ್ರಿಯೆ ವಿಚಾರದಲ್ಲಿ ತೀರ್ಮಾನ ಕೈಗೊಂಡರು.
ಆಸ್ಪತ್ರೆಯಿಂದ ತಡರಾತ್ರಿ ಅಂಬರೀಶ್ ಅವರ ಜೆಪಿ ನಗರ ನಿವಾಸಕ್ಕೆ ಪಾರ್ಥಿವ ಶರೀರ ಕೊಂಡೊಯ್ದು, ಭಾನುವಾರ ಬೆಳಗ್ಗೆ ಕಂಠೀರವ ಕ್ರೀಡಾಂಗಣಕ್ಕೆ ತರಲಾಯಿತು. ನಂತರ ಮಂಡ್ಯ ಹಾಗೂ ಮೈಸೂರು ಭಾಗದಿಂದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಬೆಂಗಳೂರಿನತ್ತ ಬರಬಹುದೆಂದು ಗುಪ್ತಚರ ವಿಭಾಗದ ಮಾಹಿತಿ ಹಾಗೂ ಮಂಡ್ಯಕ್ಕೆ ಪಾರ್ಥಿವ ಶರೀರ ತರಲೇಬೇಕೆಂಬ ಅಭಿಮಾನಿಗಳ ಬೇಡಿಕೆ ಹಿನ್ನೆಲೆಯಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ತೀರ್ಮಾನಿಸಲಾಯಿತು. ಅದಕ್ಕೂ ಮುನ್ನ ಎಚ್.ಡಿ.ದೇವೇಗೌಡರ ಸೂಚನೆ ಮೇರೆಗೆ ಸೇನಾ ಹೆಲಿಕಾಪ್ಟರ್‌ಗಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಹೆಲಿಕಾಪ್ಟರ್ ವ್ಯವಸ್ಥೆಗಾಗಿ ಮನವಿ ಮಾಡಿದರು. ಅಂಬರೀಶ್ ಕೇಂದ್ರದ ಮಾಜಿ ಸಚಿವರೂ ಆಗಿದ್ದರಿಂದ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿರುವ ಸೇನಾ ವಿಭಾಗದ ಮುಖ್ಯಸ್ಥರನ್ನು ಸಂಪರ್ಕಿಸಿ ವ್ಯವಸ್ಥೆ ಮಾಡುವಂತೆ ಸೂಚಿಸಿ ಒಪ್ಪಿಗೆ ನೀಡಿದರು. ಆ ನಂತರ ಕುಮಾರಸ್ವಾಮಿ ಅಧಿಕೃತವಾಗಿ ಮಂಡ್ಯಕ್ಕೂ ಪಾರ್ಥಿವ ಶರೀರ ಬರಲಿದೆ ಎಂದು ಘೋಷಿಸಿದರು.
Related Articles
ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲು ಖುದ್ದು ಸಿಎಂ ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್ ಸಹಿತ ಸಚಿವರು ಹಾಜರಿದ್ದು, ಅಚ್ಚುಕಟ್ಟಾದ ವ್ಯವಸ್ಥೆ ಆಗುವಂತೆ ನೋಡಿಕೊಂಡರು. ಗಣ್ಯರಿಗೆ, ಅತಿ ಗಣ್ಯರಿಗೆ, ಸಾರ್ವಜನಿಕರು ಹಾಗೂ ಅಭಿಮಾನಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರಿಂದ ಅಲ್ಲಿಯೂ ನೂಕು ನುಗ್ಗಲು ಅಥವಾ ಇತರೆ ಅಹಿತಕರ ಘಟನೆಗಳಿಗೆ ಅವಕಾಶ ಇಲ್ಲದಂತಾಯಿತು.
Advertisement
ಮದ್ಯ ಮಾರಾಟ ನಿಷೇಧ:ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಭಾನುವಾರ ಬೆಳಗ್ಗೆಯಿಂದ ಸೋಮವಾರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಮುಖ್ಯ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳು ಕಂಠೀರವ ಸ್ಟುಡಿಯೋ ಆವರಣದಲ್ಲಿ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆ ಹಾಗೂ ಜಾಗ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಭಾವೋದ್ವೇಗಕ್ಕೆ ಒಳಗಾಗಬೇಡಿ: ಸಿಎಂ ಮನವಿ
ಮದ್ದೂರಿನಲ್ಲಿ ಅಂಬರೀಶ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಹಿನ್ನೆಲೆಯಲ್ಲಿ, ಕಂಠೀರವ ಕ್ರೀಡಾಂಗಣದಲ್ಲಿದ್ದ ಸಿಎಂ ಕುಮಾರಸ್ವಾಮಿ ಅವರು ಆ ಕ್ಷಣದಲ್ಲೇ ಭಾವೋದ್ವೇಗಕ್ಕೆ ಒಳಗಾಗದಂತೆ ಜನತೆಗೆ ಮನವಿ ಮಾಡಿಕೊಂಡರು. ಮಾಧ್ಯಮಗಳ ಮೂಲಕ ಸಂದೇಶ ರವಾನಿಸಿದ ಅವರು, ಅಭಿಮಾನಿಗಳು ಯಾರೂ ಭಾವೋದ್ವೇಗಕ್ಕೆ ಒಳಗಾಗಬೇಡಿ. ನಿಮ್ಮ ಅಮೂಲ್ಯ ಜೀವ ಕಳೆದುಕೊಂಡು ಪೋಷಕರಿಗೆ ನೋವು ಕೊಡಬೇಡಿ ಎಂದು ಮನವಿ ಮಾಡಿದರು. ನಿಮ್ಮೆಲ್ಲರ ಒತ್ತಾಯಕ್ಕೆ ಗೌರವ ನೀಡಿ ಮಂಡ್ಯದಲ್ಲೇ ಅಂಬರೀಶ್ ಅವರ ಪಾರ್ಥಿವ ಶರೀರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಯಾವುದೇ ಅತಿರೇಕದ ಹೆಜ್ಜೆ ಇಡಬೇಡಿ, ಅಂಬಿಗೆ ಗೌರವಪೂರ್ಣ ವಿದಾಯ ಹೇಳ್ಳೋಣ. ಅದು ನಮ್ಮ ಕರ್ತವ್ಯ ಎಂದು ಮನವಿ ಮಾಡಿದರು. ಮಂಡ್ಯಕ್ಕೆ ಪಾರ್ಥಿವ ಶರೀರ ಬಂದಾಗ ಸಾರ್ವಜನಿಕ ದರ್ಶನದ ನಂತರ ಮತ್ತೆ ಕಂಠೀರವ ಕ್ರೀಡಾಂಗಣಕ್ಕೆ ತರಲಾಗುವುದು. ಅಲ್ಲೇ ಅಂತ್ಯಕ್ರಿಯೆ ನಡೆಸಬೇಕೆಂದು ಯಾರೂ ಹಠ ಹಿಡಿಯಬಾರದು. ಅಂಬರೀಶ್ ಹೆಸರು ಶಾಶ್ವತವಾಗಿ ಉಳಿಯುವ ನಿಟ್ಟಿನಲ್ಲಿ ಸರ್ಕಾರ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನ ಕೈಗೊಂಡಿದೆ. ಇಲ್ಲಿ ಸ್ಮಾರಕವೂ ಆಗಲಿದೆ ಎಂದು ಪದೇಪದೆ ಮಾಧ್ಯಮಗಳ ಮೂಲಕ ಹೇಳಿದರು.