ಸುರಪುರ: ತಾಲೂಕಿನ ಕಕ್ಕೇರಾ ಹತ್ತಿರದ ನೀಲಕಂಠರಾಯನಗಡ್ಡಿಗೆ ನಗರದ ಜೆಎಂಎಫ್‌ಸಿ (ಸಿವಿಲ್) ನ್ಯಾಯಾಧೀಶ ವಿನೋದ ಬಾಳನಾಯ್ಕ ಶನಿವಾರ ಭೇಟಿ ನೀಡಿ, ಇಲ್ಲಿನ ಜನರು ಎದುರಿಸುತ್ತಿರುವ ಮೂಲಸೌಕರ್ಯಗಳ ಕೊರತೆ, ಸಮಸ್ಯೆ ಕಂಡು ಅಚ್ಚರಿ ವ್ಯಕ್ತಪಡಿಸಿದರು. ನಗರ ಮತ್ತು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನ್ಯಾಯಾಂಗ ಇಲಾಖೆ ಭೇಟಿ ನೀಡಿ,
ಇಲ್ಲಿನ ವಾಸ್ತವ ಸ್ಥಿತಿಗತಿ, ಮೂಲ ಸೌಕರ್ಯಗಳ ಕುರಿತು ಮಾಹಿತಿ ಸಂಗ್ರಹಿಸುವಂತೆ ಹೈಕೋರ್ಟ್ ನ್ಯಾಯಾಮೂರ್ತಿಗಳು ಆದೇಶ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಗಡ್ಡಿಗೆ ಭೇಟಿ ನೀಡಿದ್ದರು.
ನದಿ ತಟಾಕಿನಲ್ಲಿ ಅತ್ಯಂತ ಎತ್ತರ ಪ್ರದೇಶದಲ್ಲಿರುವ ಪುಟ್ಟ ದ್ವೀಪ ಕಂಡು ನ್ಯಾಯಾಧೀಶರು ನಿಬ್ಬೆರಗಾದರು. ಗ್ರಾಮ ಪ್ರವೇಶಿಸಿದ ನಂತರ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದ ಇಲ್ಲಿಯ ಜನಜೀವನ ಕಂಡು ಚಿಕಿತರಾದರು. ಪೊಲೀಸ್ ಸಿಬ್ಬಂದಿಯೊಂದಿಗೆ ನ್ಯಾಯಾಧೀಶರು
ಗ್ರಾಮಕ್ಕೆ ಆಗಮಿಸಿರುವುದನ್ನು ಕಂಡು ಗಡ್ಡಿ ಜನರಲ್ಲಿ ಆತಂಕ ಮೂಡಿತ್ತು. ಗ್ರಾಮಕ್ಕೆ ಪೊಲೀಸರು ಆಗಮಿಸಿದ್ದನ್ನು ಒಮ್ಮೆಯೂ ಕಾಣದ ಗಡ್ಡಿ ಜನರಲ್ಲಿ ಪೊಲೀಸರ ಆಗಮನ ಭಯ ಮೂಡಿಸಿತ್ತು. ಜೀವನದಲ್ಲಿ ಒಮ್ಮೆಯೂ ನ್ಯಾಯಾಧೀಶರನ್ನು ಕಾಣದ ಗಡ್ಡಿ ಜನರು ನ್ಯಾಯಾಧೀಶರ ಬಳಿ ಬರಲು ಹಿಂಜರಿದರು. ನಂತರ ಕೆಲವರು ನ್ಯಾಯಾಧೀಶರ ಬಳಿ ಬಂದು ಸಮಸ್ಯೆಗಳ ಸುರುಳಿಯನ್ನೇ ಬಿಚ್ಚಿಟ್ಟರು.
ಮೂಲ ಸೌಕರ್ಯಗಳ ಕೊರತೆ, ನಿತ್ಯ ಜೀವನಕ್ಕೆ ಬೇಕಾದ ಮತ್ತು ದಿನಬಳಕೆ ವಸ್ತುಗಳ ಖರೀದಿಗೆ ನದಿ ದಾಟಬೇಕಾದ ಅನಿವಾರ್ಯತೆ, ನದಿ ಇಬ್ಭಾಗವಾಗಿ ಹರಿಯುತ್ತಿರುವ ಸನ್ನಿವೇಶ, ಪ್ರವಾಹ ಉಂಟಾದಾಗ ಅಥವಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಬಿಟ್ಟಾಗ ತಿಂಗಳುಗಟ್ಟಲೆ ಜನಸಂಪರ್ಕ ಕಳೆದುಕೊಳ್ಳುತ್ತಿರುವ ಸಂಗತಿ, ರೋಗ ರುಜಿನ, ಹೆರಿಗೆ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸೇವೆಗಾಗಿ ನದಿ ಈಸಿ ಹೋಗುವುದು, ಸೂರುಗಳಿಲ್ಲದೆ ಗುಡಿಸಿಲುಗಳಲ್ಲೇ ವಾಸಿಸುತ್ತಿರುವುದು, ಸೌಲಭ್ಯಗಳ ಕೊರತೆಯಲ್ಲಿಯೇ ಜೀವನ ಸಾಗಿಸುತ್ತಿರುವುದು, ಮೇಕೆ, ಹಸು ಸಾಕಾಣಿಕೆ, ಕೃಷಿ ಚಟುವಟಿಕೆ, ನದಿಯಲ್ಲಿ ನೀರಿದ್ದಾಗ ಶಾಲೆಗೆ ಅಘೋಷಿತ ರಜೆ. ಇವೆಲ್ಲ ಸಮಸ್ಯೆಗಳನ್ನು ಕೇಳಿ ನ್ಯಾಯಾಧೀಶರು ದಿಗ್ಬ್ರಮೆಗೊಂಡರು. ನಂತರ ಮಾತನಾಡಿದ ನ್ಯಾಯಾಧೀಶರು, ಇಂಥ ದ್ವೀಪ ದೇಶದಲ್ಲಿ ಇರುವುದು ಅಚ್ಚರಿ ಸಂಗತಿ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ಗಡ್ಡಿ ಜನರಿಗೆ ಮೂಲಸೌಕರ್ಯ ಒದಗಿಸದಿರುವುದು ವಿಚಿತ್ರ ಸಂಗತಿ. ಇದಕ್ಕೆ ಸರಕಾರಗಳ ನಿರ್ಲಕ್ಷ್ಯವೇ ಕಾರಣ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಸ್ಥಳಾಂತರದ ಭರವಸೆ ಪಾದಚಾರಿ ಸೇತುವೆಯಿಂದ ಹೆಚ್ಚಿನ ಅನುಕೂಲ ಆಗುವುದಿಲ್ಲ. ಸುರಕ್ಷಿತವಾಗಿ ನಡೆದು ಹೋಗಬಹುದು. ಆದರೆ ಕೃಷಿ ಚಟುವಟಿಕೆ, ಸಂಚಾರ ಸಾಧ್ಯವಿಲ್ಲ. ಸ್ಥಳಾಂತರವಾದರೆ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ನಿಮ್ಮ ಆಸ್ತಿಗೇನು ಧಕ್ಕೆ ಇಲ್ಲ. ದಿನನಿತ್ಯ ಕೃಷಿ ಚಟುವಟಿಕೆ ಮುಗಿಸಿಕೊಡು ಮನೆ ಸೇರಬಹುದು. ಸ್ಥಳಾಂತರವಾಗಲು ಸಿದ್ಧರಿದ್ದರೆ ತಿಳಿಸಬೇಕು. ನ್ಯಾಯಾಂಗ ಇಲಾಖೆಯಿಂದ ಸರಕಾರಕ್ಕೆ ಮಾಹಿತಿ ಒದಗಿಸಿ ಸ್ಥಳಾಂತರಕ್ಕೆ ಶಿಫಾರಸು ಕಳುಹಿಸುವುದಾಗಿ ಸಿವಿಲ್ ನ್ಯಾಯಾಧೀಶ ವಿನೋದ ಬಾಳನಾಯ್ಕ ಭರವಸೆ ನೀಡಿದರು.