ಬೆಂಗಳೂರು: ಜಿಲ್ಲಾ ಮಟ್ಟದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ರಾಜ್ಯ ಸರ್ಕಾರ ಪಣ ತೊಟ್ಟಿದ್ದು, ಮುಂದಿನ 5 ವರ್ಷದಲ್ಲಿ ಗುರಿ ಸಾಧನೆಗೆ ಪೂರಕ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ವಿಧಾನ ಸೌಧದಲ್ಲಿ ಸೋಮವಾರ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಮಾರಕವಾಗಿರುವ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಾಲಕಾರ್ಮಿಕ ಪದ್ಧತಿ ಹೊಗಲಾಡಿಸಲು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದೇವೆ ಹಾಗೂ ಬಾಲ ಕಾರ್ಮಿಕರಿಗೆ ನೀಡುವ ಶಿಕ್ಷಣ ಸೌಲಭ್ಯ ಸೇರಿದಂತೆ ಸಮಗ್ರ ಮಾಹಿತಿ ಒಳಗೊಂಡಿರುವ ಜಿಪಿಎಸ್ ಆಧಾರಿತ ಸಾಫ್ಟ್‌ವೇರ್ ಕೂಡ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿ ನೀಡಿದರು.
ಕೇಂದ್ರ ಸರ್ಕಾರವು ಬಾಲ ಕಾರ್ಮಿಕ ನಿರ್ಮೂಲನ ಕಾಯೆxಗೆ ತಿದ್ದುಪಡಿ ಮಾಡಿ, 15ರಿಂದ 18 ವರ್ಷದ ಕಿಶೋರ ಕಾರ್ಮಿಕರು ಈ ಕಾಯ್ದೆ ವ್ಯಾಪ್ತಿಗೆ ಬರಲಿದ್ದಾರೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 2.16 ದಶಲಕ್ಷ ಬಾಲಕಾರ್ಮಿಕರಿದ್ದಾರೆ. ಇದರಲ್ಲಿ 5 ರಿಂದ 14ವರ್ಷದವರು ಶೇ.19.4ರಷ್ಟು ಮತ್ತು 15 ರಿಂದ 18ವರ್ಷದವರು ಶೇ. 80.6ರಷ್ಟಿದ್ದಾರೆ.
2001ರಲ್ಲಿ ಗ್ರಾಮೀಣ ಭಾಗದಿಂದ ನಗರಕ್ಕೆ ಬಂದ ಬಾಲಕಾರ್ಮಿಕರ ವಲಸೆ ಪ್ರಮಾಣ ಶೇ.2.1ರಷ್ಟಿದ್ದು, 2011ರಲ್ಲಿ ಶೇ.2.9ರಷ್ಟಾಗಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಶೇ.5.9ರಿಂದ ಶೇ.4.3ಕ್ಕೆ ಇಳಿದಿದೆ ಎಂದು ವಿವರಿಸಿಸದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಜಿ.ಪದ್ಮಾವತಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಕೃಪಾ ಅಮರ್ ಆಳ್ವ, ಕಾರ್ಮಿಕ ಇಲಾಖೆಯ ಆಯುಕ್ತ ಆರ್.ಆರ್.ಜನ್ನು ಉಪಸ್ಥಿತರಿದ್ದರು.
ತಂತ್ರಾಂಶ ಅಭಿವೃದ್ಧಿಪಡಿಸುವ ಸಂಬಂಧ ರಾಜ್ಯದ ಬಾಲಕಾರ್ಮಿಕರ ಸಂಖ್ಯೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 20 ಜಿಲ್ಲೆಗಳ ಮಾಹಿತಿ ಲಭ್ಯವಿದ್ದು, ಉಳಿದ 10 ಜಿಲ್ಲೆಗಳ ಮಾಹಿತಿ ಇನ್ನಷ್ಟೇ ಪಡೆಯಬೇಕಿದೆ. ಸಂಪೂರ್ಣ ಮಾಹಿತಿ ಲಭ್ಯವಾದ ಬಳಿಕ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
-ಸಂತೋಷ್ ಲಾಡ್, ಕಾರ್ಮಿಕ ಸಚಿವ