Advertisement
ಆರು ದಶಕಗಳ ಹಿಂದಿನ ಕಾರ್ಯಾಗಾರಕ್ಕೆ ಒಂದಿಷ್ಟು ದುರಸ್ತಿ ಭಾಗ್ಯ ದೊರೆಯಬೇಕಾಗಿದೆ. ಇದರ ದುರಸ್ತಿಗೆ ಆಗಾಗ ಸರಕಾರಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
Related Articles
Advertisement
ಬಹು ದೊಡ್ಡ ಕೇಂದ್ರವಿದು: ಈ ಕೇಂದ್ರದಲ್ಲಿ ಹಳೆಯ ಹಾಗೂ ಹೊಸ ಸೇರಿ 18 ವೃತ್ತಿ ಘಟಕಗಳು (ಟ್ರೇಡ್‌ಗಳು), ಇತ್ತೀಚೆಗೆ 3 ಸೇರಿ 21 ಟ್ರೇಡ್ ಗಳಿವೆ. ಒಂದು ವರ್ಷ, ಎರಡು ವರ್ಷದ ಕೋರ್ಸ್‌ಗಳು ಇರುವುದರಿಂದ ಪ್ರತಿ ವರ್ಷ ಕನಿಷ್ಠ 500-600 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇತರೆ ಎರಡು ಲ್ಯಾಬ್ ಇದ್ದರೂ ಬಹುತೇಕ ಟ್ರೇಡ್‌ಗಳ ಪ್ರಾಯೋಗಿಕ ತರಬೇತಿಗೆ ಇದೇ ಕಾರ್ಯಾಗಾರ ಬೇಕು. ಆರು ದಶಕ ಹಳೆಯದಾದ ಈ ಕಟ್ಟಡ ಇಂದಿಗೂ ಬಳಕೆ ಯೋಗ್ಯವಾಗಿದ್ದರೂ ದುರಸ್ತಿಯ ಕೊರತೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುವಂತಾಗಿದೆ.
ಹೊಸತನಕ್ಕಿರುವ ಕಾಳಜಿ ಹಳೆಯದಿಕ್ಕಿಲ್ಲ: ವಿದ್ಯಾರ್ಥಿಗಳಿಗೆ ಕೈಗಾರಿಕೆ ತರಬೇತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸರಕಾರ ಹೊಸ ಕಾಲೇಜುಗಳ ಆರಂಭಕ್ಕೆ ಹೆಚ್ಚು ಆಸಕ್ತಿ ತೋರುತ್ತದೆ. ನಾಲ್ಕೈದು ಟ್ರೇಡ್‌ಗಳಿದ್ದರೂ ಭೂಮಿ ಖರೀದಿ, ಹೊಸ ಕಟ್ಟಡ ನಿರ್ಮಾಣಕ್ಕೆ ಕಾಳಜಿ ತೋರುತ್ತಿವೆ. ದುರಸ್ತಿ, ಮೇಲ್ದರ್ಜಗೇರಿಸುವ ಕಾರ್ಯಕ್ಕೆ ಮೀಸಲಿಡುವ ಅನುದಾನವನ್ನು ಹೊಸ ಕೇಂದ್ರಗಳ ಆರಂಭಕ್ಕೆ ವರ್ಗಾಯಿಸುತ್ತಿರುವುದರಿಂದ ಅನುದಾನ ಕೊರತೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ಈ ಕೇಂದ್ರದ ಪ್ರಾಚಾರ್ಯರು ದುರಸ್ತಿ ಕೋರಿ ಪತ್ರಗಳನ್ನು ಬರೆದಿದ್ದಾರೆ. ಯಾವುದೂ ಫಲ ನೀಡದ ಪರಿಣಾಮ ಈ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ನೇರವಾಗಿ ಮನವಿ ಮಾಡಿದ್ದಾರೆ.
ಮೂಲ ಸೌಲಭ್ಯ ಕೊರತೆ: ಈಗಾಗಲೇ ಹಳೆಯ ಶೌಚಾಲಯ ಬಳಕೆ ಯೋಗ್ಯವಿಲ್ಲದಂತಾಗಿದ್ದು, ಹೊಸದಾಗಿ 15 ಶೌಚಾಲಯದ ಬೇಡಿಕೆಯಿದೆ. ನಿರ್ವಹಣೆಗೆ ಸರಕಾರದಿಂದ ಒಂದಿಷ್ಟು ಅನುದಾನವಿದ್ದರೂ ವಿದ್ಯುತ್ ಬಿಲ್, ದೂರವಾಣಿ ಬಿಲ್, ಆಸ್ತಿ ಕರ, ನೀರಿನ ಕರ ಹೀಗೆ ಎಲ್ಲವನ್ನೂ ಇದರಲ್ಲಿ ನಿರ್ವಹಿಸಬೇಕು. ಈ ಅನುದಾನ ಪ್ರತಿ ವರ್ಷ ಸಕಾಲಕ್ಕೆ ದೊರೆಯದ ಪರಿಣಾಮ ಕಟ್ಟಡ ದುರಸ್ತಿ ಇಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಈ ಎಲ್ಲಾ ಕಾರ್ಯಗಳು ಆಗಲಿವೆ ಎನ್ನುವ ಭರವಸೆ ಇಲ್ಲಿನ ವಿದ್ಯಾರ್ಥಿಗಳು, ಬೋಧಕರಲ್ಲಿದೆ.
ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಕಾರ್ಯಾಗಾರದ ಕಟ್ಟಡದ ದುರಸ್ತಿ ಕುರಿತು ಬೇಡಿಕೆ ಸಲ್ಲಿಸಿದ್ದಾರೆ. ಇದಕ್ಕೆ ತಗಲುವ ಅಂದಾಜು ವೆಚ್ಚದ ಕುರಿತು ವರದಿ ತಯಾರಿಸಿ ನೀಡುವಂತೆ ಸೂಚಿಸಿದ್ದೇನೆ. ಸಂಬಂಧಿಸಿದ ಇಲಾಖೆಯಿಂದ ಅನುದಾನ ಅಥವಾ ಇತರೆ ಯಾವುದಾದರೂ ಅನುದಾನದ ಮೂಲಕ ದುರಸ್ತಿ ಮಾಡಿಸುವ ಕೆಲಸ ಮಾಡಲಾಗುವುದು. –ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ.
ಹಳೆಯ ಕಾರ್ಯಾಗಾರ ಕಟ್ಟಡ ಸುಸ್ಥಿತಿಯಲ್ಲಿದ್ದು, ಸಣ್ಣ ಪುಟ್ಟ ದುರಸ್ತಿಯಿದೆ. ಇಲ್ಲಿ 18 ವೃತ್ತಿಪರ ಘಟಕಗಳ ತರಬೇತಿ ನಡೆಯುತ್ತಿವೆ. ಅಗತ ದುರಸ್ತಿ ಕುರಿತು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅಂದಾಜು ವೆಚ್ಚದ ಪಟ್ಟಿ ತಯಾರಿಸುವಂತೆ ಸೂಚಿಸಿದ್ದಾರೆ. ಆದಷ್ಟು ಶೀಘ್ರದಲ್ಲಿ ದುರಸ್ತಿಯಾಗುವ ಭರವಸೆಯಿದೆ. –ನಾಗರತ್ನಾ ಕೋಟೂರು, ಪ್ರಾಚಾರ್ಯರು, ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರ.
ಮಳೆ ಬಂದರೆ ಸಾಕು ಎಲ್ಲವೂ ನಮ್ಮ ಮೇಲೆ, ಇಲ್ಲಿರುವ ಯಂತ್ರಗಳ ಮೇಲೆ ಬೀಳುತ್ತದೆ. ಅಲ್ಲಲ್ಲಿ ಗೋಡೆ ಬಿರುಕು ಬಿಟ್ಟಿದೆ. ಒಂದಿಷ್ಟು ರಿಪೇರಿ ಮಾಡಿದರೆ ಯಾವುದೇ ಸಮಸ್ಯೆಯಿಲ್ಲ. ಸರಕಾರಿ ಕೈಗಾರಿಕೆ ತರಬೇತಿ ಕೇಂದ್ರ ಎನ್ನುವ ಕಾರಣಕ್ಕೆ ಅಧಿಕಾರಿಗಳು, ಎಂಎಲ್‌ಎ, ಮಿನಿಸ್ಟರ್‌ಗಳು ನಿರ್ಲಕ್ಷ್ಯ ಮಾಡಬಾರದು. –ಶಹಾಬುದ್ದಿನ್ ಬೇಪಾರಿ, ವಿದ್ಯಾರ್ಥಿ
-ಹೇಮರಡ್ಡಿ ಸೈದಾಪುರ