ಬೆಂಗಳೂರು: ಆಸ್ಪತ್ರೆಗಳಲ್ಲಿ ಉಂಟಾಗುವ ಔಷಧಿ ಕೊರತೆ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳೀಯವಾಗಿ ತುರ್ತು ಔಷಧಿ ಖರೀದಿಗೆ ಅನುದಾನ ಬಿಡುಗಡೆ ಮಾಡಲಾಗಿದ್ದು ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಔಷಧಿಯನ್ನು ಹೊರಗಡೆ ಖರೀದಿಸುವಂತೆ ಚೀಟಿ ಬರೆದುಕೊಡುವಂತಿಲ್ಲ.
ರಾಜ್ಯದ ಎಲ್ಲಾ ಹಂತದ ಆರೋಗ್ಯ ಕೇಂದ್ರಗಳಿಗೂ ಕರ್ನಾಟಕ ಡ್ರಗ್ಸ್ ಆ್ಯಂಡ್ ಲಾಜೆಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯು ಔಷಧಿ ಪೂರೈಕೆ ಮಾಡುತ್ತಿದೆ. ಆದರೆ, ಕೆಲವು ಔಷಧಿಗಳು ಸಕಾಲದಲ್ಲಿ ಪೂರೈಕೆ ಮಾಡಲು ಸಾಧ್ಯವಾಗದ ಹಿನ್ನೆಲೆ ವೈದ್ಯರು ಚಿಕಿತ್ಸೆ ನೀಡಲು ತೊಂದರೆಯಾಗುತ್ತಿರುವ ಕುರಿತು ವರದಿಯಾಗಿದೆ.
ಅಲ್ಲದೆ, ಉಚಿತ ಔಷಧಿ ನೀಡುವ ಸಂದರ್ಭದಲ್ಲಿ ದಾಸ್ತಾನು ಇಲ್ಲದೆ ಅನಿವಾರ್ಯ ಸಂದರ್ಭದಲ್ಲಿ ವೈದ್ಯರು ಹೊರಗಡೆ ಖರೀದಿಸುವಂತೆ ಚೀಟಿ ಬರೆದುಕೊಡುತ್ತಿದ್ದಾರೆ. ಇದನ್ನು ತಪ್ಪಿಸಿ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಡ್ರಗ್ಸ್ ಆ್ಯಂಡ್ ಲಾಜೆಸ್ಟಿಕ್ ವೇರ್ ಹೌಸಿಂಗ್ ಸೊಸೈಟಿಯಿಂದ ಲಭ್ಯವಾಗದ ಔಷಧಿಯನ್ನು ಸ್ಥಳೀಯವಾಗಿಯೇ ಖರೀದಿಸಿ ರೋಗಿಗಳಿಗೆ ವಿತರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಕೇಂದ್ರಗಳು ಹಾಗೂ ಆಸ್ಪತ್ರೆಗಳಿಗೆ ಔಷಧ ಖರೀದಿಗೆ ಅನುದಾನ ಬಿಡುಗಡೆಗೊಳಿಸಿದೆ.
ಈ ಅನುದಾನವನ್ನು ಉಪಯೋಗಿಸುವುದಕ್ಕೆ ಆರೋಗ್ಯ ಕೇಂದ್ರದಲ್ಲಿ ಮುಖ್ಯಸ್ಥರನ್ನು ಒಳಗೊಂಡ ಸಮಿತಿ ರಚಿಸಬೇಕು. ಆ ಸಮಿತಿಯ ನಿರ್ದೇಶನದಂತೆ ಆಸ್ಪತ್ರೆಯ ರೋಗಿಗಳಿಗೆ ಬೇಕಾದ ಯಾವುದೇ ಔಷಧಿಗಳನ್ನು ಖರೀದಿಸಬಹುದು. ಸಭೆ ಹಾಗೂ ಖರೀದಿಗೂ ಮುನ್ನ ಆಸ್ಪತ್ರೆಯ ಎಲ್ಲಾ ವೈದ್ಯರಿಂದ ಬೇಡಿಕೆ ಪಟ್ಟಿ ಪಡೆಯಬೇಕು.
ಯಾವುದೇ ಹೊಸ ಮಾದರಿಯ ಔಷಧಿ ಖರೀದಿಸಿದಾಗ ಕರ್ನಾಟಕ ಡ್ರಗ್ಸ್ ಅಂಡ್ ಲಾಜೆಸ್ಟಿಕ್ ವೇರ್ ಹೌಸಿಂಗ್ ಸೊಸೈಟಿ ಅಂತರ್ಜಾಲದಲ್ಲಿ ಅದನ್ನು ನಮೂದಿಸಬೇಕು. ಆರೋಗ್ಯ ಸಂಸ್ಥೆಗಳಿಗೆ ನೀಡಿರುವ ಅನುದಾನ ಹೆಚ್ಚಾಗಿದ್ದರೆ, ನೆರೆಯ ಅನುದಾನ ಕೊರತೆಯ ಆರೋಗ್ಯ ಕೇಂದ್ರದೊಂದಿಗೆ ಇಲಾಖೆಯ ಒಪ್ಪಿಗೆ ಪಡೆದು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನು ಔಷಧಿ ಖರೀದಿಸುವಾಗ ಸರ್ಕಾರ ಸೂಚಿಸಿರುವ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ.
ಯಾವುದಕ್ಕೆ ಎಷ್ಟು?
-ಜಿಲ್ಲಾಸ್ಪತ್ರೆಗೆ 25 ಲಕ್ಷ ರೂ.
-ತಾಲೂಕು ಆಸ್ಪತ್ರೆಗೆ 10 ಲಕ್ಷ ರೂ.
-ಸಮುದಾಯ ಆರೋಗ್ಯ ಕೇಂದ್ರಗಳಿಗೆ 3 ಲಕ್ಷ ರೂ.
-ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 50 ಸಾವಿರ ರೂ.