Advertisement
ಬೆಳ್ತಂಗಡಿ : ಇಲ್ಲಿನ ಹಿರಿಯ ಶಿಕ್ಷಣ ಪ್ರೇಮಿಗಳು ಬಡ ಮಕ್ಕಳ ಜ್ಞಾನ ದಾಹ ತಣಿಸಲು 1905ರಲ್ಲಿ ಗುರುವಾಯನಕೆರೆ ಸಮೀಪ ಕೋಂಟುಪಲ್ಕೆಯಲ್ಲಿ ಮುಳಿ ಹುಲ್ಲಿನ ಛಾವಣಿಯಲ್ಲಿ ಆರಂಭಿಸಿದ ಗುರುವಾಯನಕೆರೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆಗೆ ಇದೀಗ 114 ವರ್ಷ. 1927ರಲ್ಲಿ ಹಂಚಿನ ಕಟ್ಟಡಕ್ಕೆ ಸ್ಥಳಾಂತರಗೊಂಡ ಶಾಲೆ 1969ರಿಂದ 90ರ ವರೆಗೆ ಬೋರ್ಡ್ ಶಾಲೆಯಾಗಿ ಪರಿಗಣಿಸಲ್ಪಟ್ಟು, ಅನಂತರ ಸರಕಾರಿ ಶಾಲೆಯಾಗಿ ಪರಿವರ್ತನೆಗೊಂಡಿತ್ತು.
2006ರಲ್ಲಿ ಶಾಲೆ ಬೆಳ್ಳಿಹಬ್ಬ ಆಚರಿಸಿತು. ಪ್ರಸಕ್ತ 1ರಿಂದ 7ರ ವರೆಗೆ 127 ಮಕ್ಕಳಿದ್ದು, 4 ಶಿಕ್ಷಕರು, 1 ಅತಿಥಿ ಶಿಕ್ಷಕರನ್ನು ಹೊಂದಿದೆ. 1905 1934ರ ಅವಧಿಯಲ್ಲಿ ಅನೇಕ ಶಿಕ್ಷಕರು ಸೇವೆ ಸಲ್ಲಿಸಿದ್ದು, ಬಳಿಕ ಮುಖ್ಯೋಪಾಧ್ಯಾಯರಾಗಿ ವೇಣುಗೋಪಾಲ್ ರಾವ್ 30 ವರ್ಷ ಸೇವೆ ಸಲ್ಲಿಸಿದ್ದರು. ಸಿಸಿಲಿಯಾ ಡಿ’ಸೋಜಾ, 1969ರಲ್ಲಿ ನಮಿರಾಜ ಹೆಗ್ಡೆ ಮಲ್ಲಿಪಾಡಿ ಮುಖ್ಯೋಪಾಧ್ಯಾಯರಾಗಿ ಸತತ 25 ವರ್ಷ ಸೇವೆ ಸಲ್ಲಿಸಿದ್ದಾರೆ. 1994ರಿಂದ ಎಂ.ಜಿ. ಶ್ರೀಧರ ರಾವ್, ಬಿ. ಕಮಲಾಕ್ಷ ಆಚಾರ್, ಬ್ರಿಜಿತ್ ಫೆರ್ನಾಂಡಿಸ್, ಕಸ್ತೂರಿ ಬಾಯಿ ಸಹಿತ ಅನೇಕರು ಸೇವೆ ಸಲ್ಲಿಸಿದ್ದು, ಪ್ರಸಕ್ತ 2013ರಿಂದ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸಿಸಿಲಿಯಾ ಪಾçಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Related Articles
1 ಎಕ್ರೆ 11 ಸೆಂಟ್ಸ್ ಸ್ಥಳದಲ್ಲಿ ಶಾಲಾ ಕಟ್ಟಡ ಹಾಗೂ ಆಟದ ಮೈದಾನ ಹೊಂದಿದ್ದು, ಶಾಸಕರ ಮುತುವರ್ಜಿಯಿಂದ ಎಂ.ಆರ್.ಪಿ.ಎಲ್., ಸಿ.ಎಸ್.ಆರ್. ಫಂಡ್‌ನಿಂದ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ. 1,400 ಪುಸ್ತಕ ಹೊಂದಿರುವ ಗ್ರಂಥಾಲಯ, ವಿಶಾಲ ರಂಗಮಂದಿರ ಹೊಂದಿದೆ. ಸುತ್ತಮುತ್ತ ಈ ಪರಿಸರದಲ್ಲಿ ಪಿಲಿಚಾಮುಂಡಿಕಲ್ಲು ಸ.ಹಿ.ಪ್ರಾ. ಶಾಲೆ, ಕುವೆಟ್ಟು ಉ.ಹಿ.ಪ್ರಾ. ಶಾಲೆ, ಗುರುವಾಯನಕೆರೆ ಪ್ರೌಢಶಾಲೆ, ಓಡಿಲಾ°ಳ ಹಿ.ಪ್ರಾ. ಶಾಲೆ, ಕಟ್ಟದಬೈಲು ಸ.ಹಿ.ಪ್ರಾ. ಶಾಲೆಗಳಿವೆ. 5 ಕಂಪ್ಯೂಟರ್ ಇದ್ದರೂ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸುಸಜ್ಜಿತ ಕೊಠಡಿ, ಆವರಣ ಗೋಡೆ ಶಾಲೆಗೆ ಅವಶ್ಯವಿದೆ. 1975, 1978, 1979, 1998 ಮತ್ತು 2002ರಲ್ಲಿ 7ನೇ ತರಗತಿಯಲ್ಲಿ 5 ಬಾರಿ ಶೇ. 100 ಫಲಿತಾಂಶ ದಾಖಲಿಸಿದೆ. 2012 13ರಲ್ಲಿ ಲಕ್ಷ್ಮೀ ಹಾಗೂ 2014 15ರಲ್ಲಿ ಹರ್ಷಿತಾ (ಮಳೆಕೊಯ್ಲು ವಿಜ್ಞಾನ ಮಾದರಿ ವಸ್ತುಪ್ರದರ್ಶನ) ರಾಜ್ಯಮಟ್ಟದಲ್ಲಿ ಇನ್‌ಸ್ಪೈರ್ ಅವಾರ್ಡ್ ಪಡೆದಿದ್ದಾರೆ.
Advertisement
ಹಳೆ ವಿದ್ಯಾರ್ಥಿಗಳುದಿಣ ಅಜ್ಜಿಪುಳ್ಳಿ ಬಾಬು ಶೆಟ್ಟಿ, ಉದ್ಯಮಿಗಳಾದ ಶಶಿಧರ್ ಶೆಟ್ಟಿ, ರಾಜೇಶ್ ಶೆಟ್ಟಿ, ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಸೋಮನಾಥ್ ನಾಯಕ್, ತಾ.ಪಂ. ಸದಸ್ಯ ಗೋಪಿನಾಥ್ ನಾಯಕ್, ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್ ಸಹಿತ ಇಲ್ಲಿನ ಅನೇಕ ಹಳೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ನಾನು 8 ವರ್ಷಗಳಿಂದ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರತಿವರ್ಷ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದುಕೊಡುತ್ತಿದ್ದಾರೆ. ಸರಕಾರಿ ಶಾಲೆಗೆ ಸೂಕ್ತ ಸೌಲಭ್ಯ ಒದಗಿಸಿದರೆ ಊರಿಗೆ ಮಾದರಿ ಶಾಲೆಯಾಗಬಲ್ಲದು.
- ಸಿಸಿಲಿಯಾ ಪಾçಸ್, ಪ್ರಭಾರ ಮುಖ್ಯ ಶಿಕ್ಷಕಿ. ಜೋಪಡಿಯಿಂದ 2 ಕೊಠಡಿಗಳಲ್ಲಿ ಆರಂಭವಾದ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿ ಗಳು ವಿದ್ಯಾರ್ಜನೆ ಮಾಡಿದ್ದಾರೆ. 1952ರಲ್ಲಿ ನಾನು ಶಾಲೆಗೆ ಸೇರಿದ್ದೆ. ಈಗಲೂ ಶಾಲೆಯ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಿ ಭಾಗಿಯಾಗುತ್ತಿದ್ದೇನೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಉತ್ತೇಜನ ನೀಡಬೇಕು.
- ಪೂವಪ್ಪ ಭಂಡಾರಿ,
ಹಳೆ ವಿದ್ಯಾರ್ಥಿ -ಚೈತ್ರೇಶ್ ಇಳಂತಿಲ