Advertisement

70ರ ಸಂಭ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಕಟ್ಕರೆ

04:44 PM Apr 17, 2017 | |

ಕುಂದಾಪುರ: ಮೇಲ್ಕಟ್ಕರೆ ಸರಕಾರಿ ಹಿ.ಪ್ರಾ. ಶಾಲೆ ಪ್ರಸ್ತುತ 70ರ ಸಂಭ್ರಮದಲ್ಲಿದೆ. ಈ ಸಂಭ್ರಮದಲ್ಲಿ ಶಾಲೆ ಹತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಒಂದು ಕಾಲದಲ್ಲಿ  ಸಾಕಷ್ಟು ಸಂಖ್ಯೆಗಳ ವಿದ್ಯಾರ್ಥಿಗಳು  ಇದ್ದ ಈ ಶಾಲೆ  ದಶಕದ ಈಚೆಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ತೀವ್ರವಾಗಿ ಕುಸಿಯುತ್ತಿದೆ. ಇದನ್ನು  ಗಮನಿಸಿದ ಮೇಲ್ಕಟ್ಕರೆ ಶಾಲೆಯ ಹಳೆ ವಿದ್ಯಾರ್ಥಿಗಳು ಅದೆಷ್ಟೋ ನಮ್ಮೂರ ಮಕ್ಕಳಿಗೆ ವಿದ್ಯೆ ನೀಡಿ ಬದುಕು ಕೊಟ್ಟ ನಮ್ಮೂರ ಶಾಲೆಯನ್ನು ಉಳಿಸಿ ಬೆಳೆಸಬೇಕೆಂಬ ಸಂಕಲ್ಪ ತೊಟ್ಟಿದ್ದಾರೆ. ಈ ಸಂಕಲ್ಪದ ಯಶಸ್ಸಿಗಾಗಿ ಹಾಕಿಕೊಂಡ ಒಂದು ಕಾರಣವೇ ಶಾಲಾ70 ರ ಸಂಭ್ರಮ.

Advertisement

ನಡೆದು ಬಂದ ದಾರಿ ಮೇಲ್ಕಟ್ಕರೆ, ಕುಂದಾಪುರ ತಾಲೂಕಿನ ಕೋಣಿ ಗ್ರಾಮಕ್ಕೆ ಸೇರಿದ ಊರು. ಈ ಊರ ಮಕ್ಕಳ  ವಿದ್ಯಾಭ್ಯಾಸಕ್ಕಾಗಿ ದಿ| ಕೃಷ್ಣಪ್ಪ ಶೆಟ್ಟಿ ಕಟ್ಕರೆ ಮತ್ತು ಕಟ್ಕರೆ ಅಧಿಕಾರಿಮನೆ ಕೃಷ್ಣಪ್ಪ ಶೆಟ್ಟಿ ಅವರ  ಶ್ರಮದ ಫಲವಾಗಿ 1946ರಲ್ಲಿ ಮೇಲ್ಕಟ್ಕರೆಗೆ ಸರಕಾರದಿಂದ ಪ್ರಾಥಮಿಕ ಶಾಲೆ ಮಂಜೂರಾಗುತ್ತದೆ.  

ಆರಂಭದಲ್ಲಿ 1ರಿಂದ 5ನೇ ತರಗತಿ ತನಕ ಮಂಜೂರಾತಿ ದೊರಕಿದ್ದು  1975-76 ರಲ್ಲಿ 6ನೇ ತರಗತಿ ಮತ್ತು 1976-77ರಲ್ಲಿ 7ನೇ ತರಗತಿಗೆ ಸರಕಾರದಿಂದ ಮಂಜೂರಾತಿ ದೊರೆತಿತ್ತು. ಶಾಲೆ ಆರಂಭಗೊಂಡಂದಿನಿಂದ ಮಕ್ಕಳ ದಾಖಲಾತಿ ವರ್ಷದಿಂದ ವರ್ಷಕ್ಕೆ ತೀವ್ರಗತಿಯಲ್ಲಿ ಏರಿಕೆಯನ್ನು ಕಂಡಿದೆ. ಹೀಗೆ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆಯಲ್ಲಿ  ದಶಕದ ಹಿಂದೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಜತೆಗೆ ಸಾಕಷ್ಟು ತರಗತಿ ಕೋಣೆಗಳು ಇದ್ದವು. ದಶಕದ ಈಚೆಗೆ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ತೀವ್ರವಾಗಿ ಕುಸಿಯುತ್ತಿದೆ.

ಶಾಲೆಯ ಅಭಿವೃದ್ಧಿಗೆ  ಯೋಜನೆ  
ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಪರಿಸರದ ಮಕ್ಕಳ ಹೆತ್ತವರನ್ನು ಭೇಟಿ ಮಾಡಿ ಅವರಿಗೆ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ತಮ್ಮ ಮಕ್ಕಳನ್ನು ಮೇಲ್ಕಟ್ಕರೆ ಸರಕಾರಿ ಶಾಲೆಗೆ ದಾಖಲಿಸುವಂತೆ ಮನವೂಲಿಸಲಾಗುತ್ತಿದೆ. ತಾವು ಹಾಕಿಕೊಂಡ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ತೊಡಕು ಉಂಟಾಗಬಾರದೆಂದು ಆರ್ಥಿಕ ಸಂಪನ್ಮೂಲದ ಕ್ರೋಡೀಕರಣಕ್ಕೆ ಹೆಚ್ಚಿನ ಗಮನ ವಹಿಸಲಾಗಿದೆ. ಸಂಗ್ರಹಿಸಿದ ಸಂಪನ್ಮೂಲ ಬಳಸಿಕೊಂಡು ಶಾಲೆಗೆ ಅಗತ್ಯವಿರುವ ಎಲ್ಲ ಶೈಕ್ಷಣಿಕ ಸೌಲಭ್ಯಗಳನ್ನು  ಒದಗಿಸಿ ಸುಂದರ ಶಾಲೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ.  ಈ ನೆಲೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸಂಘಟಿಸುವಲ್ಲಿ ಸ್ಥಳೀಯ ಯುವಶಕ್ತಿ ಯುವಕ ಮಂಡಲದ ಸರ್ವ ಸದಸ್ಯರು  ಕ್ರಿಯಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

ಹಲವು ಯೋಜನೆಗಳು
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ  ಉತ್ತಮ ಪ್ರಗತಿ ಕಾಣಲೇಬೇಕೆಂಬುದು ಸಂಭ್ರಮ ಸಮಿತಿಯವರ ಹೆಬ್ಬಯಕೆ. ಅದಕ್ಕಾಗಿ ಅತ್ಯಂತ ಸಮರ್ಥ ಇಂಗ್ಲಿಷ್‌ ಭಾಷಾ ಶಿಕ್ಷಕರನ್ನು ಶಾಲೆಗೆ ಒದಗಿಸುವುದರೊಂದಿಗೆ ವಿದ್ಯಾರ್ಥಿಗಳು ಇಂಗ್ಲಿಷ್‌ ಭಾಷೆಯನ್ನು  ಲೀಲಾಜಾಲವಾಗಿ ಬಳಸುವಂತೆ ಮಾಡಲು ಆದ್ಯತೆ ನೀಡುವುದು, ದೂರದ ವಿದ್ಯಾರ್ಥಿಗಳಿಗೆ ಉಚಿತ ವಾಹನ ಸೌಕರ್ಯ ಒದಗಿಸುವುದು, ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಕಂಪ್ಯೂಟರ್‌ ಶಿಕ್ಷಣ ನೀಡುವುದು ಹೀಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಲಾಗಿದೆ.

Advertisement

ಎ. 23ರಂದು 70ರ ಸಂಭ್ರಮ
ಶಾಲಾ 70ರ ಸಂಭ್ರಮ ಎ. 23ರಂದು ಜರಗಲಿದ್ದು, ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪಚಂದ್ರ ಶೆಟ್ಟಿ,  ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವಾ, ರಾಮೀ ಹೊಟೇಲ್ಸ್‌ ದುಬೈ ಮಾಲಕ ವರದರಾಜ ಎಂ. ಶೆಟ್ಟಿ ಕಾಳಾವರ, ವಿದ್ಯಾಂಗ ಉಪನಿರ್ದೇಶಕ  ದಿವಾಕರ ಶೆಟ್ಟಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next