Advertisement

ಶತಮಾನದ ಶಾಲೆಗೆ ದುಸ್ಥಿತಿಯ ಶೌಚಾಲಯ

08:24 PM Oct 03, 2021 | Team Udayavani |

ಬಂಟ್ವಾಳ: 127 ವರ್ಷಗಳ ಇತಿಹಾಸ ಹೊಂದಿರುವ ಬಾಳೆಪುಣಿ ಮುದುಂಗಾರುಕಟ್ಟೆ ಸರಕಾರಿ ಹಿ.ಪ್ರಾ. ಶಾಲೆಯ ಇತರ ವ್ಯವಸ್ಥೆಗಳು ಉತ್ತಮ ವಾಗಿದ್ದರೂ ಶೌಚಾಲಯ ಇನ್ನೂ ದುಸ್ಥಿತಿಯಲ್ಲಿದೆ.

Advertisement

ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿರುವ ಈ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಒಟ್ಟು 170 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ವರ್ಷ 14 ವಿದ್ಯಾರ್ಥಿಗಳ ಹೆಚ್ಚಳವಾಗಿದೆ. 1 ಹಾಗೂ 2ನೇ ತರಗತಿಗೆ ಆಂಗ್ಲ ಮಾಧ್ಯಮ ಮಂಜೂರುಗೊಂಡಿದೆ. ಹೀಗಾಗಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ. ಶಾಲೆಯಲ್ಲಿ 1ರಿಂದ 8ನೇ ತರಗತಿಯ ಜತೆಗೆ ಎಲ್‌ಕೆಜಿ-ಯುಕೆಜಿಗಳು ಕೂಡ ಕಾರ್ಯಾ ಚರಿಸುತ್ತಿದ್ದು, ಒಟ್ಟು 6 ಮಂದಿ ಖಾಯಂ ಶಿಕ್ಷಕರಿದ್ದಾರೆ.

ಹಿಂದಿನ ಶೈಲಿಯ ಶೌಚಾಲಯ
ಅಂದಾಜಿನ ಪ್ರಕಾರ ಸುಮಾರು 3 ದಶಕಗಳ ಹಿಂದಿನ ಶೌಚಾಲಯ ಇದಾಗಿದ್ದು, ಹಿಂದಿನ ಶೈಲಿಯಲ್ಲೇ ನಿರ್ಮಾಣಗೊಂಡಿದೆ. ಅವುಗಳ ದುರವಸ್ಥೆಯಿಂದ ಮಕ್ಕಳು ಶೌಚಾಲಯಕ್ಕೆ ತೆರಳಲು ಹಿಂದೇಟು ಹಾಕುವ ಪರಿಸ್ಥಿತಿ ಇದೆ.

ಶೌಚಾಲಯಕ್ಕೆ ಸರಿಯಾದ ಹೊಂಡ, ಡ್ರೈನೇಜ್‌ ವ್ಯವಸ್ಥೆ ಇಲ್ಲದೇ ಇರುವುದರಿಂದ ಅದರ ಕೊಳಚೆ ಹೊರಭಾಗದಲ್ಲೇ ಹರಿದು ದುರ್ನಾತ ಬೀರುವ ಪರಿಸ್ಥಿತಿ ಇದೆ. ಶೌಚಾಲಯಕ್ಕೆ ತಾ.ಪಂ.ನಿಂದ ಅನುದಾನ ಇರಿಸಲಾಗಿದೆ ಎನ್ನಲಾಗುತ್ತಿದ್ದು, ಕಾಮಗಾರಿ ಶೀಘ್ರ ಆರಂಭಕ್ಕೆ ಬೇಡಿಕೆಯೂ ಕೇಳಿಬರುತ್ತಿದೆ. ತಾ.ಪಂ.ಜತೆಗೆ ಗ್ರಾ.ಪಂ.ನಲ್ಲೂ ಅನುದಾನ ಇರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸುಸಜ್ಜಿತ ಶೌಚಾಲಯ ನಿರ್ಮಾಣಗೊಳ್ಳಬೇಕಿದೆ.

ಇದನ್ನೂ ಓದಿ:ಗಂಗಾವತಿ : ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ

Advertisement

ಶಾಲೆಯಲ್ಲಿ ಉತ್ತಮ ರೀತಿಯ ಪೌಷ್ಟಿಕ ತೋಟವನ್ನೂ ನಿರ್ಮಿಸಲಾಗಿದೆ. ಅದರಲ್ಲಿ ಬಗೆ ಬಗೆಯ ಗಿಡಗಳು ಕಂಗೊಳಿಸುತ್ತಿವೆ. ಇಂತಹ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿರುವ ಶಾಲೆಗೆ ಸುಸಜ್ಜಿತ ಶೌಚಾಲಯವೂ ಅತಿ ಅಗತ್ಯವಾಗಿದೆ. ಸರಕಾರ ಖಾಸಗಿ ವ್ಯಕ್ತಿಗಳಿಗೆ ಶೌಚಾಲಯವನ್ನು ಕಡ್ಡಾಯಗೊಳಿಸುತ್ತಿದ್ದು, ಅದೇ ರೀತಿ ಸರಕಾರದ ವ್ಯಾಪ್ತಿಗೆ ಬರುವ ಶಾಲೆಗೂ ಉತ್ತಮ ರೀತಿಯ ಶೌಚಾಲಯ ಕಡ್ಡಾಯಗೊಳಿಸಬೇಕಿದೆ.

ಮೆಟ್ಟಿಲು ನಿರ್ಮಾಣಕ್ಕೆ ಬೇಡಿಕೆ
ಶಾಲೆಯ ತರಗತಿ ಕೋಣೆಯ ಕಟ್ಟಡಗಳು ಸುಸಜ್ಜಿತವಾಗಿದ್ದು, ಸುಣ್ಣ- ಬಣ್ಣಗಳೊಂದಿಗೆ ಕಂಗೊಳಿಸುತ್ತಿದೆ. ಕಟ್ಟಡ ಸೋರುತ್ತಿರುವ ಹಿನ್ನೆಲೆಯಲ್ಲಿ ಮಳೆಹಾನಿಯ 4 ಲಕ್ಷ ರೂ. ಅನುದಾನದಲ್ಲಿ ಮೇಲ್ಛಾಗದಲ್ಲಿ ಶೀಟ್‌ ಅಳವಡಿಸುವ ಕಾಮಗಾರಿಯೂ ಪೂರ್ಣಗೊಂಡಿದೆ. ಹೀಗಾಗಿ ಪ್ರಸ್ತುತ ಕಟ್ಟಡದ ಯಾವುದೇ ಸಮಸ್ಯೆಗಳಿಲ್ಲ.ಆದರೆ ಆರ್‌ಸಿಸಿ ಕಟ್ಟಡದ ಮೇಲ್ಭಾಗಕ್ಕೆ ಹೋಗಬೇಕಾದರೆ ಮೆಟ್ಟಿಲುಗಳ ವ್ಯವಸ್ಥೆ ಬೇಕು ಎಂಬ ಬೇಡಿಕೆ ಇದೆ. ಶಾಲಾ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕ್‌ ಮೇಲ್ಭಾಗದಲ್ಲಿದ್ದು, ಮುಖ್ಯವಾಗಿ ಅವುಗಳನ್ನು ತೊಳೆಯುವುದಕ್ಕೆ ಮೇಲೆ ಹೋಗಲೇಬೇಕು. ಪ್ರಸ್ತುತ ಮೇಲೆ ಹೋಗುವುದಕ್ಕೆ ಸಾಕಷ್ಟು ಸಂಕಷ್ಟ ಪಡಬೇಕಿದೆ. ಹೀಗಾಗಿ ಮೆಟ್ಟಿಲು ನಿರ್ಮಿಸುವಂತೆ ಬೇಡಿಕೆ ಕೇಳಿಬರುತ್ತಿದೆ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next