Advertisement

ವಸತಿ ಶಾಲೆಗಳಲ್ಲಿ ʼಹುದ್ದೆʼ ಭರ್ತಿಗೆ ಸರಕಾರದ ನಿರಾಸಕ್ತಿ

10:58 AM Mar 02, 2024 | Team Udayavani |

ಮಂಗಳೂರು: ರಾಜ್ಯದ ವಸತಿ ಶಾಲೆಗಳು ತೀವ್ರವಾದ ಸಿಬಂದಿ ಕೊರತೆಯಿಂದ ಬಳಲುತ್ತಿದ್ದು, ವಿದ್ಯಾ ರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಪರಿಶಿಷ್ಟ ಜಾತಿ 503, ಪರಿಶಿಷ್ಟ ವರ್ಗದ 156 ಹಾಗೂ ಹಿಂದುಳಿದ ವರ್ಗದ 174 ಸೇರಿ ಒಟ್ಟು 833 ವಸತಿ ಶಾಲೆ/ಕಾಲೇಜುಗಳಿವೆ. ಅವುಗಳಿಗೆ 19,094 ಹುದ್ದೆ ಗಳು ನಿಯಮಾನುಸಾರ ಮಂಜೂರಾ ಗಿದ್ದರೆ ಈಗ ಭರ್ತಿ ಯಾಗಿರುವುದು ಕೇವಲ 6,525 ಮಾತ್ರ; ಅಂದರೆ ಬರೋಬ್ಬರಿ 12,569 ಹುದ್ದೆ ಖಾಲಿ. 8,909 ಬೋಧಕ ಹುದ್ದೆಯ ಪೈಕಿ 3,512 ಹುದ್ದೆ ಖಾಲಿ. ಬೋಧಕೇತರವೂ 1,088 ಹುದ್ದೆಗಳು ಭರ್ತಿಯಾಗಿಲ್ಲ. ಇನ್ನೂ ವಿಶೇಷವೆಂದರೆ “ಡಿ’ ಗ್ರೂಪ್‌ ನಲ್ಲಿ 7,973 ಹುದ್ದೆಗಳ ಪೈಕಿ ಕೇವಲ 4 ಹುದ್ದೆ ಮಾತ್ರ ಭರ್ತಿಯಾಗಿರುವುದು.

“ಅತಿಥಿಗಳೇ ಆಸರೆ

833 ಶಾಲೆಗಳಿಗೆ 482 ಕನ್ನಡ ಶಿಕ್ಷಕರು, 467 ಇಂಗ್ಲಿಷ್‌ ಶಿಕ್ಷಕರು, 300 ಹಿಂದಿ ಶಿಕ್ಷಕರು, 298 ಗಣಿತ ಶಿಕ್ಷಕರು, 303 ವಿಜ್ಞಾನ ಶಿಕ್ಷಕರು, 316 ಸಮಾಜ ಶಿಕ್ಷಕರು, 243 ಕಂಪ್ಯೂಟರ್‌ ಸೈಯನ್ಸ್‌ ಶಿಕ್ಷಕರು, 290 ದೈಹಿಕ ಶಿಕ್ಷಣ ಶಿಕ್ಷಕರು, 379 ಚಿತ್ರ ಕಲಾ ಶಿಕ್ಷಕರು, 278 ಸಂಗೀತ ಶಿಕ್ಷಕರು ಬೇಕಾಗಿದ್ದಾರೆ. ಸದ್ಯ ಈ ಎಲ್ಲ ಹುದ್ದೆಗಳು “ಅತಿಥಿ’ ಶಿಕ್ಷಕರ ಮೂಲಕವೇ ನಡೆಯುತ್ತಿವೆ.

ಕಂಪ್ಯೂಟರ್‌ ಲ್ಯಾಬ್‌ ಇಲ್ಲ

Advertisement

833 ವಸತಿ ಶಾಲೆ/ಕಾಲೇಜುಗಳ ಪೈಕಿ 641 ವಸತಿ ಶಾಲೆಗಳು ಮಾತ್ರ ಸ್ವಂತ ಕಟ್ಟಡ ಹೊಂದಿವೆ. ಉಳಿದವು ಬಾಡಿಗೆಯಲ್ಲಿವೆ. ಸ್ವಂತ ಕಟ್ಟಡದಲ್ಲಿರುವ ಶಾಲೆಗಳ ಪೈಕಿ ಕೇವಲ 116 ವಸತಿ ಶಾಲೆಗಳಲ್ಲಿ ಮಾತ್ರ ಕಂಪ್ಯೂಟರ್‌ ಲ್ಯಾಬ್‌ ಇದೆ. ಉಳಿದ ಶಾಲೆಗಳಿಗೆ ಆ ಭಾಗ್ಯವೂ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಅನುದಾನ ಪ್ರಸ್ತಾವವಾಗಿದೆ. ಆದರೆ ಯಾವಾಗ ಶಾಲೆಯವರೆಗೆ ತಲುಪುತ್ತದೆ ಎಂಬುದನ್ನು ಕಾದುನೋಡಬೇಕಷ್ಟೆ.

ಕರಾವಳಿಯಲ್ಲಿವೆ 22 ಶಾಲೆಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ಪರಿಶಿಷ್ಟ ಜಾತಿ, 5 ಹಿಂದುಳಿದ ವರ್ಗ ಸೇರಿ ಒಟ್ಟು 12 ಹಾಗೂ ಉಡುಪಿ ಜಿಲ್ಲೆಯಲ್ಲಿ 1 ಪರಿಶಿಷ್ಟ ವರ್ಗ, 3 ಪರಿಶಿಷ್ಟ ಜಾತಿ ಹಾಗೂ 6 ಹಿಂದುಳಿದ ವರ್ಗ ಸಹಿತ 10 ವಸತಿ ಶಾಲೆ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಶೇ. 60ಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ. ಪೂರ್ಣಾವಧಿ ಹುದ್ದೆ ಭರ್ತಿಯಾಗದಿದ್ದರೆ ನಿರ್ವಹಣೆ ಕಷ್ಟ ಸಾಧ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯ.

ರಾಜ್ಯದ ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜಿಲ್ಲಾ ಮಟ್ಟದಲ್ಲಿ ಆಯ್ಕೆ ಸಮಿತಿ ಮೂಲಕ ನಿಯಮಾನುಸಾರ ಅತಿಥಿ ಶಿಕ್ಷಕರ ಸೇವೆ ಪಡೆಯಲಾಗುತ್ತಿದೆ. ಬೋಧಕೇತರ ಸಿಬಂದಿಯನ್ನು ಜಿಲ್ಲಾ ಮಟ್ಟದಲ್ಲಿಯೇ ಸಂಪನ್ಮೂಲ ಏಜೆನ್ಸಿ ಮೂಲಕ ಪಡೆಯಲಾಗುತ್ತಿದೆ. – ಡಾ| ಎಚ್‌.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು (ವಿಧಾನಸಭಾ ಅಧಿವೇಶನದ ಉತ್ತರ) ­

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next