ಯಾದಗಿರಿ: ರಾಜ್ಯ ಸರ್ಕಾರ ರೈತರ ಏಳ್ಗೆಗಾಗಿ 2018ರಲ್ಲಿ ರೈತ ಉತ್ಪಾದಕರ ಸಂಸ್ಥೆಗಳ ನೀತಿ ರೂಪಿಸಿ ವಿವಿಧ ಅಭಿವೃದ್ಧಿ ಇಲಾಖೆಗಳ ಮೂಲಕ ರೈತ ಉತ್ಪಾದಕರ ಸಂಸ್ಥೆ ಉತ್ತೇಜಿಸುತ್ತಿದೆ ಎಂದು ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಡಾ| ರವಿಕುಮಾರ್ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ರೈತ ಮೋರ್ಚಾ ವತಿಯಿಂದ ರೈತ ಉತ್ಪಾದಕರ ಸಂಸ್ಥೆಗಳ ಪ್ರಚಾರ ಆಂದೋಲನ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮದು ಕೃಷಿ ಪ್ರಧಾನ ರಾಜ್ಯ. ಬಹುಪಾಲು ರೈತರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಾಗಿದ್ದು ಆಧುನಿಕ ತಂತ್ರಜ್ಞಾನ ಅಳವಡಿಕೆ, ಗುಣಮಟ್ಟದ ಪರಿಕರಗಳ ಖರೀದಿ ಮತ್ತು ಉತ್ಪನ್ನಗಳಿಗೆ ಯೋಗ್ಯ ಬೆಲೆ ಪಡೆಯುವಲ್ಲಿ ಹಲವಾರು ಸವಾಲು ಎದುರಿಸುತ್ತಿದ್ದು ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ 2013ರಲ್ಲಿ 1956ರ ಕಂಪನಿ ಕಾಯ್ದೆಗೆ ವಿಭಾಗ 9ಎರಲ್ಲಿ ತಿದ್ದುಪಡಿ ತಂದು ಕಂಪನಿ ಕಾಯ್ದೆಯಡಿ ರೈತ ಉತ್ಪಾದಕರ ಸಂಸ್ಥೆ ನೋಂದಾಯಿಸಲು ಅವಕಾಶ ನೀಡಿದೆ ಎಂದು ವಿವರಿಸಿದರು.
ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಟ್ಟುಗೂಡಿಸಿ ಅವರ ಉತ್ಪಾದನೆ ಹಾಗೂ ಮಾರುಕಟ್ಟೆ ಸಾಮರ್ಥ್ಯ ವೃದ್ಧಿಸಲು ರೈತ ಉತ್ಪಾದಕರ ಸಂಸ್ಥೆ ರಚಿಸುವುದು ಹೆಚ್ಚು ಸೂಕ್ತವೆಂದು ಪರಿಗಣಿಸಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸುಮಾರು 500 ರೈತ ಉತ್ಪಾದಕರ ಸಂಸ್ಥೆ ರಚಿಸಿದ್ದು, ವಿವಿಧ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗಪ್ಪಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ತುತ್ತು ಸವಿಯುವಾಗ ದೇವರಿಗಿಂತ ಮೊದಲು ರೈತರನ್ನು ನೆನೆಯೋಣ. ಕಾಂಗ್ರೆಸ್ ಪಕ್ಷ ಒಂದು ಬಾರಿ ಸಾಲ ಮನ್ನಾ ಮಾಡಿ ಅದೇ ದೊಡ್ಡ ಸಾಧನೆ ಎಂದು ಹೇಳುತ್ತಿದೆ. ರೈತರಿಗೋಸ್ಕರ ಯಾವುದೇ ರೀತಿ ಯೋಜನೆ ತಂದಿಲ್ಲ. ಮೋದಿ ಸರ್ಕಾರ ಬಂದ ಮೇಲೆ ರೈತರಿಗಾಗಿ ಅನೇಕ ಹೊಸ ಯೋಜನೆ ಅನುಷ್ಠಾನಗೊಳಿಸಿದೆ ಎಂದರು.
ಈ ವೇಳೆ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರಡ್ಡಿ ನಾಯ್ಕಲ್, ದೇವೇಂದ್ರನಾಥ ನಾದ್, ವೆಂಕಟರೆಡ್ಡಿ ಅಬ್ಬೆತುಮಕೂರು, ಲಲಿತಾ ಅನಪುರ, ಧರ್ಮಣ್ಣ ದೊಡ್ಡಮನಿ, ಮರೆಪ್ಪ ಪ್ಯಾಟಿ, ಶಶಿಕುಮಾರ್, ಶರಣುಗೌಡ ಮದರಕಲ್, ಶಕುಂತಲಾ ಗುಜಲೂರ, ಶ್ರೀದೇವಿ ಶೆಟ್ಟಳ್ಳಿ ಇತರರಿದ್ದರು.