Advertisement

ಕೊಡಂಗೆ ಸರಕಾರಿ ಹಿ.ಪ್ರಾ. ಶಾಲೆಗೆ ಮರುಜೀವ ನೀಡಿದ ಸ್ಮಾರ್ಟ್‌ ಕ್ಲಾಸ್‌

09:12 PM Jun 13, 2019 | mahesh |

ಬಂಟ್ವಾಳ: ಹಳೆ ವಿದ್ಯಾರ್ಥಿಗಳು ಸೇರಿ ಪರ್ಲಿಯಾ ಎಜುಕೇಶನ್‌ ಟ್ರಸ್ಟ್‌ ಕೊಡಂಗೆ ಸ್ಥಾಪಿಸಿ ಮುಚ್ಚುವ ಹಂತದಲ್ಲಿದ್ದ ಕೊಡಂಗೆ ಸ. ಹಿ.ಪ್ರಾ. ಶಾಲೆಗೆ ಮತ್ತೆ ವಿದ್ಯಾರ್ಥಿಗಳು ಬರುವಂತೆ ಮಾಡಿದ್ದಾರೆ. ಇಲ್ಲಿನ ಸ್ಮಾರ್ಟ್‌ ಕ್ಲಾಸ್‌ ಆಕರ್ಷಣೀಯವಾಗಿದೆ.

Advertisement

5 ತಿಂಗಳ ಹಿಂದೆ ಪರ್ಲಿಯಾ ಎಜುಕೇಶನ್‌ ಟ್ರಸ್ಟ್‌ ಕೊಡಂಗೆ ಸ್ಥಾಪಿಸಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್‌ ರೂಂ ಮಾಡಿಸಿ, ಮನೆ ಮನೆ ಭೇಟಿ ಕೊಟ್ಟ ಟ್ರಸ್ಟ್‌ ಪದಾಧಿಕಾರಿಗಳು ಶಾಲೆಗೆ 46 ವಿದ್ಯಾರ್ಥಿಗಳ ಸೇರ್ಪಡೆ ಮಾಡಿಸಿದ್ದಾರೆ. 45 ವರ್ಷಗಳ ಹಿಂದೆ ಕೊಡಂಗೆ, ಪರ್ಲಿಯಾ, ಅಲೆತ್ತೂರು, ನಂದರಬೆಟ್ಟು, ಅಜ್ಜಿಬೆಟ್ಟು ಭಾಗದ ಮಕ್ಕಳು

ಅಜ್ಜಿಬೆಟ್ಟು ಸರಕಾರಿ ಶಾಲೆ ಇಲ್ಲವೇ ಮೊಡಂಕಾಪು ಖಾಸಗಿ ಅನುದಾನಿತ ಶಾಲೆಗೆ ಹೋಗ ಬೇಕಾಗಿತ್ತು. ರಸ್ತೆಯೂ ಸಮರ್ಪಕ ವಾಗಿರಲಿಲ್ಲ. ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗ ಬೇಕು. ಈ ಸಮಸ್ಯೆ ಪರಿಹಾರಕ್ಕಾಗಿ 1975ರಲ್ಲಿ ಹಾಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಕೊಡಂಗೆಯಲ್ಲಿ ಸರಕಾರಿ ಶಾಲೆ ಸ್ಥಾಪಿಸಬೇಕು ಎಂದು ದಿ| ಅಬ್ದುಲ್ಲಾ ಹಾಜಿ, ದಿ| ಅಬ್ದುಲ್‌ ಖಾದರ್‌ ಕಡೆಪಿಕರಿಯ, ಹಮ್ಮಬ್ಬ ಮಾಸ್ತರ್‌, ಡಾ| ಕೆ. ಮಹಮ್ಮದ್‌ ಸರಕಾರಕ್ಕೆ ಮನವಿ ಸಲ್ಲಿಸಿ ಅಧಿಕೃತವಾಗಿ ಶಾಲೆ ತೆರೆಯಲು ಒಪ್ಪಿಗೆ ಪಡೆದರು.

ಹೊಸ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಜಾಸ್ತಿಯಾಗ ತೊಡಗಿತು. ಒಂದು ಹಂತದಲ್ಲಿ ಒಂದನೇ ತರಗತಿಯಿಂದ 7ನೇ ತರಗತಿವರೆಗೆ ಒಂದು ಸಾವಿರಕ್ಕಿಂತ ಜಾಸ್ತಿ ವಿದ್ಯಾರ್ಥಿಗಳಿದ್ದರು. ಅನಂತರ ಖಾಸಗಿ ಆಂಗ್ಲ ಮಾಧ್ಯಮಗಳ ಅಬ್ಬರಕ್ಕೆ ಈ ಊರಿನ ಜನರು ಮನಸೋತು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸತೊಡಗಿದರು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಾಗ ಊರಿನ ಶಾಲೆ ಮುಚ್ಚುವ ಹಂತಕ್ಕೆ ಬಂತು.

ಎಚ್ಚೆತ್ತ ಹಳೆ ವಿದ್ಯಾರ್ಥಿಗಳು
ಎಚ್ಚೆತ್ತುಕೊಂಡ ಅಲ್ಲಿನ ಹಳೆ ವಿದ್ಯಾರ್ಥಿ ಗಳು ಝಾಕೀರ್‌ ಹುಸೈನ್‌ ಅಧ್ಯಕ್ಷತೆ ಮತ್ತು ಪಿ. ಹಂಝ ಗೌರವಾಧ್ಯಕ್ಷತೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿ, ತಂಡ ಮಾಡಿ ಶಾಲೆಗೆ ಬೇಕಾಗುವ ಮೂಲ ಸೌಕರ್ಯ ಪಟ್ಟಿ ಮಾಡಿ ಮೊದಲಿಗೆ ಸ್ಮಾರ್ಟ್‌ ಕ್ಲಾಸ್‌ ರೂಂ, ಶೌಚಾಲಯ ನಿರ್ಮಾಣ, ಶಾಲೆಗೆ ಪೈಂಟಿಂಗ್‌ , ಅತಿಥಿ ಉಪನ್ಯಾಸಕರು ಹೀಗೆ ಹಲವು ಸೌಲಭ್ಯಗಳನ್ನು ದೊರಕಿಸಿದರು.

Advertisement

ಕಳೆದ ಸಾಲಿನಲ್ಲಿ 1ನೇ ತರಗತಿಯಲ್ಲಿ 40 ವಿದ್ಯಾರ್ಥಿಗಳಿದ್ದು, ಈ ವರ್ಷ ಸ್ಮಾರ್ಟ್‌ ಕ್ಲಾಸ್‌ಗೆ 46 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ತರಗತಿ ಕೋಣೆ ಚಿಕ್ಕದಾಗಿದ್ದು , ಅದಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗಿದೆ. ಈ ಶಾಲೆಯಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸಲಾಗುತ್ತಿದೆ. ಅದಕ್ಕಾಗಿ ಶಿಕ್ಷಕಿಯರನ್ನೂ ನೇಮಿಸಲಾಗಿದೆ.

ಸ್ಮಾರ್ಟ್‌ ಕ್ಲಾಸ್‌, ಕೈತೋಟ
ಶಾಲಾ ಸಾಮಗ್ರಿಗಳನ್ನಿಡುವ ಸುಮಾರು 300 ಚದರ ಅಡಿ ವಿಸ್ತೀರ್ಣದ 2 ಕೊಠಡಿಗಳನ್ನು ಸ್ಮಾರ್ಟ್‌ ಕ್ಲಾಸ್‌ ರೂಂ ಆಗಿ ಪರಿವರ್ತಿಸಲಾಗಿದೆ. ನೆಲದಲ್ಲಿ ಬಗೆ ಬಗೆಯ ಟೈಲ್ಸ್‌ ಆಳವಡಿಕೆ, ಗೋಡೆಯಲ್ಲಿ ಆಟೋಟಕ್ಕೆ ಪೂರಕ ವಾತಾವರಣಕ್ಕಾಗಿ ಚಿತ್ತಾರಗಳು, ಜಾರುಬಂಡಿ, ತರಗತಿ ಕೋಣೆಯಲ್ಲಿಯೂ ಟೈಲ್ಸ್‌  ಬೆಂಚು-ಡೆಸ್ಕ್ ಹೊಂದಿಸಿದ್ದಾರೆ. ಸುಮಾರು 82 ಸೆಂಟ್ಸ್‌ ಜಾಗ ಹೊಂದಿರುವ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಸಜ್ಜಿತ ಕಾಂಪೌಂಡ್‌ ಹೊಂದಿದೆ.

ಸಿಸಿ ಕೆಮರಾ ಅಳವಡಿಸಿದ್ದು, ವಿಶಾಲ ಶಾಲಾ ಮೈದಾನ ಹೊಂದಿದೆ. ಮಕ್ಕಳು ಕಲಿಕೆಯ ಜತೆಗೆ ಕ್ರೀಡಾಕೂಟದಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಬಿಸಿಯೂಟಕ್ಕೆ ತಾಜಾ ತರಕಾರಿಗಳನ್ನು ಮಕ್ಕಳು ಕೈತೋಟದಲ್ಲಿ  ಬೆಳೆಯುತ್ತಿದ್ದಾರೆ.

ಶಾಲೆ ದತ್ತು
ಸರಕಾರಿ ಶಾಲೆಯನ್ನು ಉಳಿಸಬೇಕಾದುದು ನಮ್ಮ ಕರ್ತವ್ಯ, ಸ್ನೇಹಿತರನ್ನೆಲ್ಲ ಸೇರಿಸಿಕೊಂಡು ಈ ಶಾಲೆಗೆ ಈಗ 5 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್‌, ಶೌಚಾಲಯ, ಪೈಟಿಂಗ್‌ ಮಾಡಿಸಿದ್ದೇವೆ. ಮಕ್ಕಳಿಗೆ ಬೇಕಾಗುವ ಅನುಕೂಲಗಳನ್ನು ಈಡೇರಿಸಿದ್ದೇವೆ. ಮುಂದಿನ ದಿನಗಳಲ್ಲಿ ಟ್ರಸ್ಟ್‌ ಮುಖಾಂತರ ಶಾಲೆಯನ್ನು ದತ್ತು ಪಡೆದು ಇನ್ನೂ ಅಭಿವೃದ್ಧಿ
ಮಾಡಲು ಬಯಸಿದ್ದೇವೆ.
– ಝಾಕೀರ್‌ ಹುಸೈನ್‌
ಅಧ್ಯಕ್ಷರು, ಪರ್ಲಿಯಾ , ಎಜುಕೇಶನ್‌ ಟ್ರಸ್ಟ್‌, ಕೊಡಂಗೆ

 ಕೈತೋಟ
ಸ್ಮಾರ್ಟ್‌ ಕ್ಲಾಸ್‌ನಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಶಾಲೆಗೆ ಹೆಚ್ಚುವರಿ ಕೋಣೆ ನಿರ್ಮಾಣಕ್ಕೆ ಸರಕಾರದ ಸಹಾಯಧನ ಅಗತ್ಯವಿದೆ. ಶಾಲೆಯಲ್ಲಿ ವಿಶಾಲ ಮೈದಾನವಿದೆ. ಮಕ್ಕಳಿಂದಲೇ ನಿರ್ಮಾಣ ಮಾಡಿದ ಕೈತೋಟ ಇದೆ. ಬಿಸಿಯೂಟಕ್ಕೆ ಬೇಕಾದಷ್ಟು ತರಕಾರಿ ತೆಗೆದು ಹೆಚ್ಚಿನ ತರಕಾರಿಯನ್ನು ಮಾರುಕಟ್ಟೆಗೆ ಕೊಟ್ಟು ಅದರ ಉಳಿಕೆ ಹಣದಿಂದ ಶಾಲಾ ಅಭಿವೃದ್ಧಿಗೆ ವಿನಿಯೋಗಿಸುತ್ತೇವೆ.
 - ಬಿ.ಎಂ. ಇಸ್ಮಾಯಿಲ್‌, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next