Advertisement

ಅತ್ಯಂತ ಗ್ರಾಮೀಣ ಭಾಗದ ಯರ್ಲಪಾಡಿ ಸರಕಾರಿ ಹಿ.ಪ್ರಾ. ಶಾಲೆ

11:10 PM Nov 11, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಅಜೆಕಾರು: ಸರಕಾರಿ ಹಿ.ಪ್ರಾ. ಶಾಲೆ ಯರ್ಲಪಾಡಿ 108 ವರ್ಷಗಳನ್ನು ಕಳೆದು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಯರ್ಲಪಾಡಿ ಪರಿಸರದ ಆಸುಪಾಸಿನಲ್ಲಿ ಶಾಲೆಗಳಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡ ಸ್ಥಳೀಯರು 1911ರಲ್ಲಿ ಮುಳಿಹುಲ್ಲಿನ ಕಟ್ಟಡದಲ್ಲಿ  ಪ್ರಾಥಮಿಕ ಶಾಲೆಯನ್ನು ಆರಂಭಿಸಿದರು.

ಯರ್ಲಪಾಡಿಯ ಲಕ್ಷ್ಮೀಮತಿ ಅಮ್ಮನರು ಶಾಲೆಯನ್ನು ತೆರೆಯಲು ಜಾಗವನ್ನು ದಾನವಾಗಿ ನೀಡಿದ್ದರು. ಶಾಲೆ ಆರಂಭವಾದ ದಿನಗಳಲ್ಲಿ ಹೆಪ್ಪಳ, ಚಿಕ್ಕಲ್‌ಬೆಟ್ಟು, ಗೊಂದೂರು, ಕಾಂತರಗೋಳಿ, ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಈಗ ಈ ವ್ಯಾಪ್ತಿಯಲ್ಲಿ ಇತರ 5 ಶಾಲೆಗಳು ಆರಂಭಗೊಂಡಿವೆ.

ಗುಣಮಟ್ಟದ ಶಿಕ್ಷಣ
ಗುಣಮಟ್ಟದ ಶಿಕ್ಷಣ ಶತಮಾನಗಳಿಂದ ನಿರಂತರ ನೀಡುತ್ತಾ ಬಂದಿರುವ ಪ್ರತಿಫ‌ಲವಾಗಿ ಇಂದಿಗೂ ಶಾಲೆಯಲ್ಲಿ ಮಕ್ಕಳ ಕಲರವ ಇರುವಂತಾಗಿದೆ.

ಪ್ರಸ್ತುತ ಸಂಯುಕ್ತ ಪ್ರೌಢಶಾಲೆಯಾಗಿ ಪರಿವರ್ತನೆಗೊಂಡಿದ್ದು 10ನೇ ತರಗತಿವರೆಗೆ ಒಳಗೊಂಡಿದೆ. ಪ್ರಸ್ತುತ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 59 ವಿದ್ಯಾರ್ಥಿಗಳಿದ್ದಾರೆ.ಶಾಲೆಯ ಮುಖ್ಯ ಶಿಕ್ಷಕಿಯಾಗಿ ಶಶಿಕಲಾ ದೇವಿ ಕಾರ್ಯನಿರ್ವಹಿಸುತ್ತಿದ್ದು ಸಹಶಿಕ್ಷಕರು 3, ಅತಿಥಿ ಶಿಕ್ಷಕರು 1, ಗೌರವ ಶಿಕ್ಷಕರು 1 ಮಂದಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಸಾಧಕ ಹಳೆವಿದ್ಯಾರ್ಥಿಗಳು
ಶಾಲೆಯು ಸುಮಾರು 0.64 ಎಕ್ರೆ ಜಾಗವನ್ನು ಒಳಗೊಂಡಿದೆ. 9 ಸೆಂಟ್ಸ್‌ ದಾನವಾಗಿ ಇದ್ದರೆ 56 ಸೆಂಟ್ಸ್‌ ಸರಕಾರಿ ಜಾಗವಾಗಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ , ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದು ಶಾಲೆಯ ಹೆಸರನ್ನು ಅಜರಾಮರಗೊಳಿಸಿದ್ದಾರೆ. ಹಲವು ಮಂದಿ ಡಾಕ್ಟರ್, ಎಂಜಿನಿಯರ್, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹಳಷ್ಟು ಮಂದಿ ಖ್ಯಾತ ಉದ್ಯಮಿಗಳಾಗಿದ್ದಾರೆ.

ಶಾಲೆಯು 2011ನೇ ಸಾಲಿನಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸಿದ್ದು ಈ ಸಂದರ್ಭವನ್ನು ಸ್ಮರಣೀಯವಾಗಿಡಲು ದಾನಿಗಳ ಸಹಕಾರದಿಂದ ರಂಗಮಂದಿರ, ಶಾಲಾ ನೂತನ ಕಟ್ಟಡ, ಹಾಗೂ ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಿಕೊಡಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ ಶಾಲೆ ಒಳಗೊಂಡಿದೆ. ಪ್ರಸಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜತೆಗೆ ಪಠ್ಯೇತರ ವಿಷಯಗಳಾದ ವಾಚನಾಲಯ, ಕ್ರೀಡಾ ಉಪಕರಣಗಳು ಈ ಶಾಲೆಯಲ್ಲಿದ್ದು ವಿದ್ಯಾರ್ಥಿಗಳ ಭವಿಷ್ಯದ ಉಜ್ವಲಕ್ಕಾಗಿ, ಭಾರತ ಸೇವಾದಳ, ಯೋಗಾಭ್ಯಾಸ ಗಳನ್ನು ಕಲಿಸಲಾಗುತ್ತಿದೆ. ಶಾಲೆ ಶತಮಾನ ಕಂಡಿದ್ದರು ಸೂಕ್ತ ಆಟದ ಮೈದಾನದ ಕೊರತೆಯಿಂದಾಗಿ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಹಿನ್ನಡೆ ಉಂಟಾಗುತ್ತಿದೆ.

ಯರ್ಲಪಾಡಿ ಪರಿಸರದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗು ತ್ತಿರುವುದನ್ನು ಮನಗಂಡ ಹಿರಿಯರು ಶಾಲೆಯನ್ನು ಆರಂಭಿಸಿದ್ದರು. ಶಾಲೆ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಜೀವನದ ಬೆಳಕಾಗಿದೆ. ಗುಣಮಟ್ಟದ ಶಿಕ್ಷಣದಿಂದಾಗಿ ಶಾಲೆಯು ಇಂದಿಗೂ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದ್ದು ಪ್ರೌಢಶಾಲಾ ವಿಭಾಗವು ದಶಮಾನದ ಸಂಭ್ರಮದಲ್ಲಿದೆ.
-ಜಯರಾಮ್‌ ಶೆಟ್ಟಿ,ನಿವೃತ್ತ ಮುಖ್ಯ ಶಿಕ್ಷಕರು,ಹಳೆ ವಿದ್ಯಾರ್ಥಿ

ಯರ್ಲಪಾಡಿ ಸರಕಾರಿ ಹಿ.ಪ್ರಾ. ಶಾಲೆಯು ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದೊಂದಿಗೆ ಶತಮಾನ ಕಂಡು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರಂತರ ಶ್ರಮಿಸಲಾಗುತ್ತಿದೆ.
-ಶಶಿಕಲಾ ದೇವಿ , ಪ್ರಭಾರ ಮುಖ್ಯ ಶಿಕ್ಷಕಿ

-ಜಗದೀಶ ಅಜೆಕಾರು

Advertisement

Udayavani is now on Telegram. Click here to join our channel and stay updated with the latest news.

Next