ಚಿತ್ತಾಪುರ: ಮಹಾಮಾರಿ ಕೋವಿಡ್ ಸೋಂಕು ತಡೆಯುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 16.18 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲಿ ಮೊದಲ ಪ್ರಕರಣ ಕಲಬುರಗಿಯಲ್ಲೇ ಪತ್ತೆಯಾದ ನಂತರ ಜಿಲ್ಲೆಯಲ್ಲಿ ಟೆಸ್ಟಿಂಗ್ ಕೇಂದ್ರ ಸ್ಥಾಪನೆಗೆ ಕಾಂಗ್ರೆಸ್ ಶಾಸಕರೆಲ್ಲ ಸೇರಿ ಆಗ್ರಹಿಸಿದ್ದೆವು. 24 ಗಂಟೆಯಲ್ಲೆ ಸ್ಥಾಪಿಸುವುದಾಗಿ ಸದನದಲ್ಲಿ ಮುಖ್ಯಮಂತ್ರಿ ಹೇಳಿದ್ದರು.
ಆದರೆ ಭರವಸೆ ನೀಡಿ ಮೂರು ದಿನಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಕಲಬುರಗಿಯಲ್ಲಿ ಜೀಮ್ಸ್, ಜಯದೇವ ಹಾಗೂ ಇಎಸ್‌ಐ ಸೇರಿದಂತೆ ಹಲವಾರು ವೈದ್ಯಕೀಯ ಸುಸಜ್ಜಿತ ಸಂಸ್ಥೆಗಳು ಇವೆ. ಆದರೆ ಕನಿಷ್ಠ ಪ್ರಮಾಣದಲ್ಲಿ ಮಾದರಿಗಳ ಟೆಸ್ಟಿಂಗ್ ನಡೆಯುತ್ತಿದೆ. ಮನಸ್ಸು ಮಾಡಿದರೆ ದಿನವೊಂದಕ್ಕೆ 700ಕ್ಕೂ ಅಧಿಕ ಟೆಸ್ಟಿಂಗ್ ಮಾಡಬಹುದು. ಸರ್ಕಾರದ ನಿರ್ಲಕ್ಷ್ಯತನ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಪಿಸಿಯಿಂದ ಹಿಡಿದು ಡಿಸಿ ವರೆಗೆ ಎಲ್ಲ ಹಂತದಲ್ಲೂ ರೇಟ್ ಕಾರ್ಡ್ ಫಿಕ್ಸ್ ಆಗಿದೆ ಎಂದು ಆರೋಪಿಸಿದರು.
ಪ್ರಿಯಾಂಕ್ ಖರ್ಗೆ ಕಂಡರೆ ಬಿಜೆಪಿ ನಾಯಕರಿಗೆ ಅಲರ್ಜಿಯಾಗಿದೆ. ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ 228 ಕೋಟಿ ರೂ. ತಡೆ ಹಿಡಿದಿದ್ದಾರೆ. ಆದರೆ ಅವರ ಯಾವ ಪ್ರಯತ್ನಗಳನ್ನು ಯಶಸ್ವಿಯಾಗಲು ಬಿಡೋದಿಲ್ಲ ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರಪತಿ ಆಗಲಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ, ಜಿಪಂ ಸದಸ್ಯ ಶಿವಾನಂದ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿ.ಪಂ ಸದಸ್ಯ ಶಿವರುದ್ರ ಭೀಣಿ, ತಾ.ಪಂ ಅಧ್ಯಕ್ಷ ಜಗಣ್ಣಗೌಡ, ಎಪಿಎಂಸಿ ಅಧ್ಯಕ್ಷ ಶಿವರೆಡ್ಡಿ ನಾಲವಾರ, ಪುರಸಭೆ ಸದಸ್ಯರಾದ ಚಂದ್ರಶೇಖರ ಕಾಶಿ, ರಸೂಲ್ ಮುಸ್ತಫಾ, ವಿನೋದ್ ಗುತ್ತೇದಾರ, ಶೀಲಾ ಕಾಶಿ, ಪಾಶಾ ಖುರೇಶಿ, ಮಲ್ಲಿಕಾರ್ಜುನ ಕಾಳಗಿ, ಗೋಪಾಲ ರಾಠೊಡ, ಸ್ವಪ್ನಾ ಪಾಟೀಲ ಮತ್ತಿತರರು ಇದ್ದರು.
ಬಿಜೆಪಿ ಶಾಸಕರು, ಮಾಜಿ ಶಾಸಕರ ಇಚ್ಛೆ ಹಾಗೂ ಪ್ರತಿಷ್ಠೆಯನ್ನಾಗಿ ಮಾಡಿಕೊಂಡು ಚಿತ್ತಾಪುರ ತಾಲೂಕಿನ ಹಳ್ಳಿಗಳನ್ನು ಶಹಾಬಾದ ಹಾಗೂ ಕಾಳಗಿಗೆ ಅವೈಜ್ಞಾನಿಕವಾಗಿ ಹಂಚಲಾಗಿದೆ. ಇದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ಆಡಳಿತಾತ್ಮಕವಾಗಿ ಅಭಿವೃದ್ಧಿಗೆ ನನ್ನ ಸಹಮತವಿದೆ. ಜನರ ಸಭೆ ಕರೆದು, ಅವರ ಅಭಿಪ್ರಾಯ ಪಡೆದು ನಿಯಮಗಳ ಪ್ರಕಾರ ಹಳ್ಳಿಗಳನ್ನು ಹಂಚಲಿ. –
ಪ್ರಿಯಾಂಕ್ ಖರ್ಗೆ, ಶಾಸಕ