ಬೆಳಗಾವಿ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೂರು ತಿಂಗಳಾದರೂ ಇದುವರೆಗೆ ಅದರ ನಿಯಂತ್ರಣ ಮಾಡುವ ಯೋಜನೆ ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ. ಕೋವಿಡ್ ನಿಯಂತ್ರಣ ಮಾಡುವ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದ್ದು ಅದು ಈಗ ಹೊರಗಡೆ ಬಂದಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರ ಈ ಭ್ರಷ್ಟಾಚಾರದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೋರಾಟ ನಡೆಸಿದ್ದಾರೆ. ಸ್ವತಃ ಬಿಜೆಪಿ ಶಾಸಕರೇ ಹಗರಣದ ಬಗ್ಗೆ ಮಾತನಾಡುತ್ತಿದ್ದಾರೆ. ಕೋವಿಡ್ ನಿಯಂತ್ರಣ ಮಾಡಲು ಸರಿಯಾದ ಯೋಜನೆ ಇಲ್ಲ. ಇದರಿಂದ ರಾಜ್ಯದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್ ಪರೀಕ್ಷೆಗೆ ಪ್ರತಿಯೊಬ್ಬರಿಗೆ 4500 ರೂ. ನಿಗದಿ ಪಡಿಸಿದ್ದಾರೆ. ಶ್ರೀಮಂತರಿಗೇ ಟೆಸ್ಟ್ ಮಾಡಿಸಲು ಆಗುವುದಿಲ್ಲ. ಇನ್ನು ಬಡವರಿಗೆ ದೂರದ ಮಾತು. ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಸಂಘ ಸಂಸ್ಥೆಗಳಿಂದ 300ರಿಂದ 400 ಕೋಟಿ ರೂಪಾಯಿ ಬಂದಿದೆ. ಅದೇ ದುಡ್ಡನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಬೆಳಗಾವಿ ಸುವರ್ಣವಿಧಾಸೌಧಕ್ಕೆ ಜಿಲ್ಲಾ ಮಟ್ಟದ ಕಚೇರಿಗಳ ಸ್ಥಳಾಂತರ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲಾ ಮಟ್ಟದ ಕಚೇರಿಗಳು ಇಲ್ಲಿಯೇ ಇರಬೇಕು. ಅಲ್ಲಿಗೆ ಸ್ಥಳಾಂತರ ಮಾಡುವುದರಿಂದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಯಾವುದೇ ಸರ್ಕಾರ ಇದ್ದಾಗ ರಾಜ್ಯಮಟ್ಟದ ಕಚೇರಿಯನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಿದರೂ ಅಧಿಕಾರಿಗಳು ಬೆಂಗಳೂರು ಬಿಟ್ಟು ಹೊರಗೆ ಬರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.