Advertisement

ಸರ್ಕಾರಿ ಸೌಲಭ್ಯ ನಿಮ್ಮ ಹಕ್ಕು: ನೀಲಮ್ಮ

12:08 PM Oct 05, 2018 | |

ಮುದ್ದೇಬಿಹಾಳ: ಸರ್ಕಾರಿ ಸೌಲಭ್ಯ ಪಡೆಯಲು ಇಚ್ಛಿಸುವ ಅರ್ಹರು ಬೇರೆಯವರ ಮಾತು ಕೇಳಬಾರದು. ಸೌಲಭ್ಯ ಪಡೆಯುವುದು ನಿಮ್ಮ ಹಕ್ಕು. ಅದನ್ನು ನೀವೇ ನೇರವಾಗಿ ಸಂಬಂಧಿಸಿದವರನ್ನು ಭೇಟಿ ಮಾಡಿ. ಇಲ್ಲವೇ ಆನ್‌ಲೈನ್‌ನಲ್ಲಿ ಅಗತ್ಯ ದಾಖಲೆ ಸಮೇತ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಸರ್ಕಾರದ ಯೋಜನೆಗಳ ಸದುಪಯೋಗ ಆಗಬೇಕು ಎಂದು ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಹೇಳಿದರು.

Advertisement

ತಾಲೂಕಿನ ರಕ್ಕಸಗಿ ಜಿಪಂ ಕ್ಷೇತ್ರ ವ್ಯಾಪ್ತಿಯ ತಂಗಡಗಿ ಗ್ರಾಪಂ ವ್ಯಾಪ್ತಿಯ ಅಮರಗೋಳ, ಆಲೂರು ಗ್ರಾಪಂನ ಹಡಗಲಿ ಮತ್ತು ಬೈಲಕೂರ ಗ್ರಾಮಗಳಲ್ಲಿ ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಜನಸಂಪರ್ಕ ಸಭೆ ನಡೆಸಿ ಅವರು ಮಾತನಾಡಿದರು.

ಆಯಾ ಸಭೆಗಳಲ್ಲಿ ಸ್ಥಳದಲ್ಲೇ ವಿಧವಾ, ವೃದ್ಧಾಪ್ಯ, ಸಂಧ್ಯಾ ಸುರಕ್ಷ ಮಾಸಾಶನ ಹಾಗೂ ಪಡಿತರ ಕಾರ್ಡ್‌ ಮಂಜೂರಾತಿ ಆದೇಶ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿದರು. ಗ್ರಾಮೀಣ ಜನರು ಸೌಲಭ್ಯ ಕೋರಿ ದೂರದ ವಿಜಯಪುರದಲ್ಲಿರುವ ಜಿಪಂ ಕಚೇರಿಗೆ ಬರುವ ಅವಶ್ಯಕತೆ ಇಲ್ಲ. ನಿಮ್ಮೂರಲ್ಲೇ ಇರುವ ಗ್ರಾಮ ಲೆಕ್ಕಾಧಿಕಾರಿ, ಗ್ರಾಪಂ ಪಿಡಿಒ, ಗ್ರಾಮ ಸಹಾಯಕ ಮುಂತಾದವರಿಗೆ ಸೂಕ್ತ ಹಾಗೂ ಅಗತ್ಯ ದಾಖಲೆ ಸಮೇತ ಅರ್ಜಿ ಸಲ್ಲಿಸಿದಲ್ಲಿ ಸೌಲಭ್ಯಗಳು ನಿಮ್ಮ ಮನೆ ಬಾಗಿಲಿಗೇ ಬರುವ ವ್ಯವಸ್ಥೆ ಇಂದು ಜಾರಿಗೊಂಡಿದೆ ಎಂದರು.

ಕೃಷ್ಣಾ ನದಿ ದಂಡೆಯ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಯಲಗೂರ ಗ್ರಾಮದಿಂದ ಅಯ್ಯನಗುಡಿ ಗ್ರಾಮದವರೆಗಿನ ಎಲ್ಲ ಗ್ರಾಮಗಳಲ್ಲಿ ಜೋತು ಬಿದ್ದಿರುವ ವಿದ್ಯುತ್‌ ತಂತಿ, ಜೀರ್ಣಾವಸ್ಥೆಯಲ್ಲಿರುವ ವಿದ್ಯುತ್‌ ಕಂಬ
ತೆರವುಗೊಳಿಸಿ ಹೊಸದಾಗಿ ತಂತಿ, ಕಂಬ ಅಳವಡಿಸಲು 2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಕೆಲವೇ ದಿನಗಳಲ್ಲಿ ಈ ಯೋಜನೆ ಕಾರ್ಯಾರಂಭಗೊಳ್ಳಲಿದೆ. ರೈತರ ಬೇಡಿಕೆಯಾಗಿರುವ ಬೆಳಿಗ್ಗೆ ಹೊತ್ತು ರೈತರ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್‌ ಪೂರೈಸಲು ಹೆಸ್ಕಾಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಅಮರಗೋಳಕ್ಕೆ ಉಚಿತ ವಸತಿ ಯೋಜನೆಯಡಿ 50 ಮನೆ ಮಂಜೂರಾಗಿದ್ದು, ಶೀಘ್ರ ಅರ್ಹರನ್ನು ಗುರುತಿಸಿ ಹಂಚಿಕೆ ಮಾಡಲಾಗುತ್ತದೆ. ತಂಗಡಗಿ ಗ್ರಾಪಂಗೆ 200, ಬಿಜೂರ, ಆಲೂರ, ಕೋಳೂರ ಗ್ರಾಪಂಗಳಿಗೆ ತಲಾ 100 ಮನೆಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡುವಂತೆ ಬೇಡಿಕೆ ಮಂಡಿಸಿದ್ದು ಶೀಘ್ರ ಅನುಮೋದನೆ ದೊರಕಲಿದೆ ಎಂದರು.

Advertisement

ಕಾಂಗ್ರೆಸ್‌ ಮುಖಂಡ, ಅಖೀಲ ಗೋವಾ ಕನ್ನಡಿಗರ ಹೋರಾಟ ಸಮಿತಿ ಗೌರವಾಧ್ಯಕ್ಷ ಸಿದ್ದಣ್ಣ ಮೇಟಿ ಮಾತನಾಡಿ, ಅಮರಗೋಳದಲ್ಲಿ 30 ಲಕ್ಷ ರೂ.ದ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕು. ಹಡಗಲಿ ಗ್ರಾಮಸ್ಥರ
ಬೇಡಿಕೆಯಂತೆ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲೂ ಕ್ರಮ ಕೈಕೊಳ್ಳಲಾಗುತ್ತದೆ. ಅಭಿವೃದ್ಧಿ ಕನಸು ನನಸು ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.

ತಹಶೀಲ್ದಾರ್‌ ಎಂ.ಎಸ್‌. ಬಾಗವಾನ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸುರೇಶ ಭಜಂತ್ರಿ, ತಂಗಡಗಿ ಗ್ರಾಪಂ ಪಿಡಿಒ ಖೂಬಾಸಿಂಗ್‌ ಜಾಧವ ಮಾತನಾಡಿದರು. ತಂಗಡಗಿ ಗ್ರಾಪಂ ಅಧ್ಯಕ್ಷ ಶಿವಾನಂದ ಮಂಕಣಿ, ಗ್ರಾಪಂ ಸದಸ್ಯರಾದ ಸಂಗಪ್ಪ ಬೇನಾಳ, ಶಾಂತಪ್ಪ ಕವಡಿಮಟ್ಟಿ, ಸಿದ್ದಪ್ಪ ಕವಡಿಮಟ್ಟಿ, ಕೆ.ಬಿ. ಕೊಂಗಲ್‌, ಆಹಾರ ನಿರೀಕ್ಷಕ ಎ.ಎಂ. ದಳವಾಯಿ, ವೈ.ಬಿ. ಮರೋಳ, ರೇಖಾ ಮರೋಳ, ಸಿ.ಎಸ್‌.ಡಮನಾಳ ಇದ್ದರು. ಹಡಗಲಿಯಲ್ಲಿ ಸಭೆ ನಡೆದ ಸಂದರ್ಭ ಗ್ರಾಮಸ್ಥರು ವಿವಿಧ ಬೇಡಿಕೆ ಮಂಡಿಸಿದರು.

ಇಂದು-ನಾಳೆಯೂ ಸಭೆ 
ಶುಕ್ರವಾರ ಮತ್ತು ಶನಿವಾರವೂ ಜನಸಂಪರ್ಕ ಸಭೆ ಮುಂದುವರಿಯಲಿದೆ. ಶುಕ್ರವಾರ ಬೆಳಿಗ್ಗೆ 10ಕ್ಕೆ ಮದರಿ, ಮಧ್ಯಾಹ್ನ 1ಕ್ಕೆ ಗರಸಂಗಿ ಹಾಗೂ ಶನಿವಾರ ಬೆಳಿಗ್ಗೆ 10ಕ್ಕೆ ಹುನಕುಂಟಿ, ಮಧ್ಯಾಹ್ನ 2ಕ್ಕೆ ಬಂಗಾರಗುಂಡ, ಸಂಜೆ 4ಕ್ಕೆ ಕಪನೂರ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಯಲಿದೆ. ಈಗಾಗಲೇ ಮಂಜೂರಾಗಿರುವ ಅರ್ಹ ಫಲಾನುಭವಿಗಳ ಮಾಸಾಶನ, ಪಡಿತರ ಕಾರ್ಡ್‌ ಆದೇಶ ಪತ್ರಗಳನ್ನು ಸ್ಥಳದಲ್ಲೇ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next