Advertisement

ಸರ್ಕಾರದ ಸೌಲಭ್ಯ ನಿರಾಶ್ರಿತರಿಗೆ ತಲುಪಿಸಲು ಕರೆ

10:02 AM May 23, 2019 | Suhan S |

ಚಿತ್ರದುರ್ಗ: ನಿರಾಶ್ರಿತರಿಗೆ ಸರ್ಕಾರ ನೂರಾರು ಸೌಲಭ್ಯಗಳನ್ನು ನೀಡಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌. ದಿಂಡಲಕೊಪ್ಪ ಹೇಳಿದರು.

Advertisement

ತಾಲೂಕಿನ ಗೋನೂರು ಸಮೀಪದ ಮುತ್ತಯ್ಯನಹಟ್ಟಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಿಗಾಗಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸ್ವಚ್ಛತೆ, ಗುಣಮಟ್ಟದ ಆಹಾರ ಸೇರಿದಂತೆ ಎಲ್ಲವನ್ನೂ ವ್ಯವಸ್ಥಿತ ರೀತಿಯಲ್ಲಿ ನೀಡಲಾಗುತ್ತಿದೆ. ಇಲ್ಲಿನ ಅಧಿಧೀಕ್ಷಕ ಮಹದೇವಯ್ಯನವರು ನಿಮ್ಮ ಮೇಲೆ ತೋರುತ್ತಿರುವ ಕಾಳಜಿಯೇ ಇದಕ್ಕೆ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪುಸ್ತಕ ಓದಿ ಗಳಿಸುವ ಜ್ಞಾನಾರ್ಜನೆಯಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಪುಸ್ತಕ ಓದುವ ಹವ್ಯಾಸ ತುಂಬಾ ಒಳ್ಳೆಯದು. ನಿಮಗೆ ಪುಸ್ತಕ ಓದುವ ಆಸಕ್ತಿಯಿದ್ದರೆ ಓದಿ. ಇಲ್ಲವೇ ಬೆರೆಯವರು ಓದಿ ಎಲ್ಲರಿಗೂ ವಿಚಾರಗಳನ್ನು ತಿಳಿಸಬಹುದು. ಇಲ್ಲಿನ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ನೆಮ್ಮದಿಯ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಎಂದರು.

ಹಿರಿಯ ನ್ಯಾಯವಾದಿ ಬಿ.ಕೆ. ರಹಮತ್‌ವುಲ್ಲಾ ಮಾತನಾಡಿ, ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರ ಸ್ವಚ್ಛತೆ ಸೇರಿದಂತೆ ಎಲ್ಲ ವಿಚಾರದಲ್ಲೂ ಹೈಟೆಕ್‌ ಆಗಿದೆ. ಇಲ್ಲಿ ನಿರಾಶ್ರಿತರಿಗೆ ದೊರೆಯುತ್ತಿರುವ ಸವಲತ್ತು ಯಾವ

Advertisement

ಅಧಿಕಾರಿಗಳಿಗೂ ಇಲ್ಲ ಎನ್ನುವುದು ಇಲ್ಲಿ ಬಂದು ನೋಡಿದಾಗ ತಿಳಿಯುತ್ತದೆ. ಸರ್ಕಾರ ಇಷ್ಟೊಂದು ಸೌಲಭ್ಯಗಳನ್ನು ನೀಡಿರುವುದು ನಿಮ್ಮ ಅದೃಷ್ಟ. ನಾನಾ ಕಾರಣಗಳಿಂದ ಕೆಲವರು ಇಲ್ಲಿ ಬಂದು ನಿರಾಶ್ರಿತರಂತೆ ಜೀವನ ಮಾಡುತ್ತಿರಬಹುದು. ಮನಸ್ಸಿನಲ್ಲಿರುವ ಕಲ್ಮಶ ತೆಗೆದು ಹಾಕಿ ಸಮಾಜದಲ್ಲಿ ಎಲ್ಲರಂತೆ ಗುರುತಿಸಿಕೊಂಡು ಜೀವನ ಮಾಡಿ ಎಂದು ಹಾರೈಸಿದರು.

ಚಿತ್ರದುರ್ಗ ವಕೀಲರ ಸಂಘದ ಕಾರ್ಯದರ್ಶಿ ಅನಿಲ್ಕುಮಾರ್‌ ಮಾತನಾಡಿ, ಪುಸ್ತಕಗಳನ್ನು ಓದಿದಷ್ಟೂ ಜ್ಞಾನ ವೃದ್ಧಿಯಾಗುತ್ತದೆ. ಪುಸ್ತಕ ಎಂದರೆ ಬಹುದೊಡ್ಡ ಸಂಪತ್ತು. ನಾನಾ ವಿಚಾರಗಳನ್ನು ತಿಳಿದುಕೊಳ್ಳಬಹುದು. ನಿರಾಶ್ರಿತ ರೆಂಬುದನ್ನು ಮರೆತು ಇಲ್ಲಿಂದ ಹೊರ ಹೋಗಿ ಸಮಾಜಮುಖೀಯಾಗಿ ಬಾಳಿರಿ ಎಂದರು.

ನ್ಯಾಯವಾದಿ ಪ್ರತಾಪ್‌ ಜೋಗಿ ಮಾತನಾಡಿ, ಪುಸ್ತಕ ಎಂದರೆ ಜ್ಞಾನಭಂಡಾರ. ಇಂತಹ ಜ್ಞಾನಭಂಡಾರ ಓದುವುದರಿಂದ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಂಡು ಮನಸ್ಸಿನ ನೋವನ್ನು ನಿವಾರಿಸಿಕೊಳ್ಳಬಹುದು. ಮಹಾನ್‌ ನಾಯಕರ ಪುಸ್ತಕಗಳನ್ನು ಓದಿ ಅವರ ಆದರ್ಶಗಳನ್ನು ಪಾಲಿಸಬೇಕು. ಜೊತೆಗೆ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವಯ್ಯ, ಜೈಲು ಅಧೀಕ್ಷಕಿ ಅಪೇಕ್ಷ ಎಸ್‌. ಪವಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next