Advertisement

ಸರಕಾರಿ ನೌಕರರ ವೇತನ ಶೇ.30 ಹೆಚ್ಚಳ: ಶಿಫಾರಸು

06:00 AM Feb 01, 2018 | |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಶೇ.30 ರಷ್ಟು ವೇತನ ಏರಿಕೆ ಮಾಡುವಂತೆ ಆರನೇ ರಾಜ್ಯ ವೇತನ ಆಯೋಗ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ ನೌಕರ ಸಮುದಾಯಕ್ಕೆ ಇದೊಂದು “ಬಂಪರ್‌’ ಕೊಡುಗೆಯಾಗಲಿದೆ.

Advertisement

ಸರ್ಕಾರಿ ನೌಕರರ ಕನಿಷ್ಠ ಮೂಲವೇತನ ಪರಿಷ್ಕರಣೆಯ ನಂತರ 9,600 ರೂ.ನಿಂದ 17,000 ರೂ. ಆಗಲಿದ್ದು, ಎಚ್‌ಆರ್‌ಎ ಸೇರಿ ಇತರೆ ಭತ್ಯೆಗಳೂ ಅದಕ್ಕೆ ತಕ್ಕಂತೆ ಹೆಚ್ಚಳವಾಗಲಿದೆ. 2017ರ, ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಲಾಗಿದೆ.

ಪ್ರತಿ ನೌಕರನ ಮೂಲ ವೇತನವನ್ನು ಶೇ.30ರಷ್ಟು ಹೆಚ್ಚಿಸಿ, 2017 ಜುಲೈ 1ರಲ್ಲಿದ್ದಂತೆ ಪಾವತಿಸಲಾಗುವ ಶೇ.45.25 ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ನೌಕರರ ವೇತನ ಪರಿಷ್ಕರಣೆ ಮಾಡಲು ಆಯೋಗ ಶಿಫಾರಸು ಮಾಡಿದೆ.

ರಜೆ ಹೆಚ್ಚಳ ಪ್ರಸ್ತಾಪವಿಲ್ಲ:
ರಾಜ್ಯದಲ್ಲಿರುವ 5.20 ಲಕ್ಷ ಸರ್ಕಾರಿ ನೌಕರರು, 5.73 ಲಕ್ಷ ಪಿಂಚಣಿದಾರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆ, ಸ್ಥಳೀಯ ಸಂಸ್ಥೆ, ಪದವಿ ಶಿಕ್ಷಣ ವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳಲ್ಲಿನ 73ಸಾವಿರ ಬೋಧಕೇತರ ಸಿಬ್ಬಂದಿಗಳಿಗೂ ಇದು ಅನ್ವಯವಾಗಲಿದೆ. ಒಟ್ಟಾರೆ 11.66 ಲಕ್ಷ ಮಂದಿ ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಇನ್ನು, ಆಯೋಗದ ಶಿಫಾರಸಿನಲ್ಲಿ ವಾರದಲ್ಲಿ ಐದು ದಿನ ಕೆಲಸದ ಬಗ್ಗೆ ಅರ್ಥಾತ್‌ ರಜೆ ಹೆಚ್ಚಳದ ಬಗ್ಗೆ ಈ ವರದಿಯಲ್ಲಿ ಯಾವುದೇ ಪ್ರಸ್ತಾಪ ಮಾಡಲಾಗಿಲ್ಲ.

ಮನೆ ಬಾಡಿಗೆ ಭತ್ಯೆಯ ದರಗಳನ್ನು ಮೂಲ ವೇತನದ ಪ್ರಸ್ತುತ ದರಗಳಾದ ಶೇ.30, ಶೇ.20 ಹಾಗೂ ಶೇ.10ರ ಬದಲು ಪರಿಷ್ಕೃತ ಮೂಲ ವೇತನ ಆಧರಿಸಿ ಶೇ.24, ಶೇ.16 ಹಾಗೂ ಶೇ.8 ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ. ಆದರೆ, ಸರ್ಕಾರಿ ನೌಕರರ ಸಂಘಟನೆಗಳು ಆಯೋಗದ ಶಿಫಾರಸಿಗೆ ವಿರೋಧ ಮಾಡಿದ್ದು, ಶೇ.45 ರಷ್ಟು ಹೆಚ್ಚಳ, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾದ ವೇತನ-ಭತ್ಯೆ ಬೇಕು ಎಂದು ಪಟ್ಟು ಹಿಡಿದಿವೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಆರನೇ ವೇತನ ಆಯೋಗದ ಅಧ್ಯಕ್ಷ ಎಂ.ಆರ್‌.ಶ್ರೀನಿವಾಸಮೂರ್ತಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಸಲ್ಲಿಸಿದರು. ಮುಂದಿನ ಸಂಪುಟದಲ್ಲಿ ಚರ್ಚಿಸಿ  ಶಿಫಾರಸುಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಆಯೋಗದ ಶಿಫಾರಸ್ಸಿನ ಅನ್ವಯ ವೇತನ ಮತ್ತು ಪಿಂಚಣಿಗಳಲ್ಲಿನ ಪರಿಷ್ಕರಣೆಯು 2017ರ ಜುಲೈ 1 ರಿಂದ ಜಾರಿಗೆ  ತರಬೇಕಿದ್ದು, ಪರಿಷ್ಕೃತ ದರಗಳಂತೆ ಆರ್ಥಿಕ ಸೌಲಭ್ಯವನ್ನು 2018ರ ಏಪ್ರಿಲ್‌ 1 ರಿಂದ ಪಾವತಿಸಬೇಕಾಗುತ್ತದೆ.

ವರದಿ ಬಗ್ಗೆ ಸಮರ್ಥನೆ ಸುದ್ದಿಗಾರರ ಜತೆ ಮಾತನಾಡಿದ ಎಂ.ಆರ್‌.ಶ್ರೀನಿವಾಸಮೂರ್ತಿ,ಕೇರಳ, ಆಂಧ್ರಪ್ರದೇಶಕ್ಕೆ ಹೋಗಿ ಅಲ್ಲಿನ ವೇತನ ಆಯೋಗದ ವರದಿಗಳನ್ನು ಅಧ್ಯಯನ ಮಾಡಿ ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ವರದಿಯನ್ನೂ ಪರಾಮರ್ಶೆ ಮಾಡಿ ರಾಜ್ಯದ ಸ್ಥಿತಿಗೆ ತಕ್ಕಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಆಯೋಗವು ಪ್ರಸ್ತಾಪಿಸಿದ ವಿಧಾನದಂತೆ 2017 ರ ಜುಲೈ 1 ರಲ್ಲಿದ್ದಂತೆ ಪ್ರತಿ ನೌಕರನ ಮೂಲ ವೇತನದಲ್ಲಿ ಶೇ.30 ರಷ್ಟು ಹೆಚ್ಚಳ ಕೊಟ್ಟು ಆ ದಿನಾಂಕದಂದು ಪಾವತಿಸಲಾಗುವ ಶೇ.45.25 ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ನೌಕರರ ವೇತನ ಪರಿಷ್ಕರಣೆ ಮಾಡಲಾಗುವುದು. ಪಿಂಚಣಿ ಮತ್ತು ಕುಂಟಬ ಪಿಂಚಣಿಗಳ ಪರಿಷ್ಕರಣೆಯು ಪ್ರಸಕ್ತ ಮೂಲ ಪಿಂಚಣಿಯ ಶೇ.30 ರಷ್ಟು ಹೆಚ್ಚಳ ಹಾಗೂ 2017 ಜುಲೈ 1 ರಂದು ಲಭ್ಯವಿರುವ ಶೇ.45.25 ತುಟ್ಟಿಭತ್ಯೆ ಸೇರ್ಪಡೆ ಒಳಗೊಂಡಿರುತ್ತದೆ. ಮರಣ ಮತ್ತು ನಿವೃತ್ತಿ ಉಪದಾನದ ಗರಿಷ್ಠ ಮಿತಿ 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಸ್ವಯಂ ನಿವೃತ್ತಿ ಕನಿಷ್ಠ ಅವಧಿ ಇಳಿಕೆ:
ಆಯೋಗವು ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷಗಳಂತೆ ಮುಂದುವರಿಸಲು ಶಿಫಾರಸು ಮಾಡಿದೆ. ಸ್ವಯಂ ನಿವೃತ್ತಿಗೆ ಅವಶ್ಯವಿರುವ ಕನಿಷ್ಠ ಆರ್ಹತಾದಾಯಕ ಸೇವೆ 15 ವರ್ಷಗಳಿಂದ 10 ವರ್ಷಗಳಿಗೆ ಇಳಿಸಲು ಹಾಗೂ ಪೂರ್ಣ ಪ್ರಮಾಣದ ಪಿಂಚಣಿ ಪಡೆಯಲು ಈಗ ಇರುವ 33 ವರ್ಷಗಳ ಅರ್ಹತಾ ಅವಧಿಯನ್ನು 30 ವರ್ಷಗಳಿಗೆ ಇಳಿಸಲು ಶಿಫಾರಸು ಮಾಡಿದೆ.

ಸರ್ಕಾರಿ ನೌಕರರು, ಪಿಂಚಣಿದಾರರು, ಅನುದಾನಿತ ಶಿಕ್ಷಣ ಸಂಸ್ಥೆ, ಸ್ಥಳೀಯ ಸಂಸ್ಥೆ, ಪದವಿ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗೆ ಆನ್ವಯವಾಗುವಂತೆ ಶಿಫಾರಸು ಮಾಡಿದೆ. ನಿಗಮ-ಮಂಡಳಿ, ಪ್ರಾಧಿಕಾರದ ಸಿಬ್ಬಂದಿಗೆ ಅನ್ವಯಗೊಳಿಸುವುದು ಸರ್ಕಾರಕ್ಕೆ ಬಿಟ್ಟ ನಿರ್ಧಾರ ಎಂದರು.

ಹೆಚ್ಚುವರಿ ಪಿಂಚಣಿ:
ಆಯೋಗವು 80 ವರ್ಷ ವಯಸ್ಸಿಗೆ ಮೇಲ್ಪಟ್ಟ ಎಲ್ಲ ಪಿಂಚಣಿದಾರರಿಗೂ ಹೆಚ್ಚುವರಿ ಪಿಂಚಣಿ ಸಂದಾಯವನ್ನು ಶಿಫಾರಸು ಮಾಡಿದೆ. ಹೆಚ್ಚುವರಿ ಪಿಂಚಣಿ ದರಗಳು 80 ರಿಂದ 85 ವರ್ಷದೊಳಗಿನವರಿಗೆ ಶೆ.20 ರಷ್ಟು , 85 ರಿಂದ 90 ವರ್ಷದೊಳಗಿನವರಿಗೆ ಶೇ.30 ರಷ್ಟು, 90 ರಿಂದ 95 ವರ್ಷದೊಳಗಿನವರಿಗೆ ಶೇ.40, 95 ರಿಂದ 100 ವರ್ಷದೊಳಗಿನವರಿಗೆ ಶೇ.50 ಹಾಗೂ 100 ವರ್ಷ ಮೇಲ್ಪಟ್ಟವರಿಗೆ ಶೇ.100 ರಷ್ಟು ಇರಲಿದೆ.

ಪಿಂಚಣಿದಾರರು ಹಾಗೂ ಕುಂಟುಂಬ ಪಿಂಚಣಿದಾರರಿಗೆ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿರುವಂತೆ ವೈದ್ಯಕೀಯ ವೆಚ್ಚದ ಮರುಪಾವತಿಯ ನಗದುರಹಿತ ಚಿಕಿತ್ಸೆಯನ್ನು ಸೂಚಿತ ಆಸ್ಪತ್ರೆಗಳಲ್ಲಿ ಪಡೆಯುವ ಸೌಲಭ್ಯ ವಿಸ್ತರಿಸಲು ಆಯೋಗವು ಶಿಫಾರಸು ಮಾಡಿರುತ್ತದೆ. ಆಯೋಗವು ಇತರೆ ಭತ್ಯೆಗಳಾದ ನಗರ ಪರಿಹಾರ ಭತ್ಯೆ, ಪ್ರಯಾಣ ಭತ್ಯೆ ಸಮವಸ್ತ್ರ ಭತ್ಯೆ ಮತ್ತು ವಿಶೇಷ ಭತ್ಯೆಗಳ ದರಗಳ ಹೆಚ್ಚಳ ಮಾಡಲೂ ಶಿಫಾರಸು ಮಾಡಿದೆ.

ವಿಶೇಷ ಚೇತನ ನೌಕರರಿಗೆ ಯಾಂತ್ರೀಕೃತ ಮತ್ತು ಮೋಟಾರು ಚಾಲಿತ ವಾಹನಗಳನ್ನು ಖರೀದಿಸಲು ಪ್ರಸ್ತುತ ನೀಡುತ್ತಿರುವ ಸಹಾಯ ಧನ 25 ಸಾವಿರ ರೂ.ಗಳಿಂದ 40 ಸಾವಿರ ರೂ.ಗಳಿಗೆ ಹೆಚ್ಚಿಸಲು ಶಿಫಾರಸು ಮಾಡಿದೆ. ನೌಕರರ ಅಂಗವಿಕಲ ಮಕ್ಕಳಿಗೆ  ಈಗ ಪ್ರತಿ ಮಗುವಿಗೆ ಪ್ರತಿ ತಿಂಗಳು ನೀಡುತ್ತಿರುವ 500 ರೂ. ಶೈಕ್ಷಣಿಕ ಭತ್ಯೆ 1000 ರೂ. ಮಾಡಲು ಶಿಫಾರಸು ಮಾಡಲಾಗಿದೆ.

ಅನಾವಶ್ಯಕ ಹುದ್ದೆ ಕಡಿತಕ್ಕೆ ಸಲಹೆ?
ಮಂಜೂರಾಗಿರುವ 7.73 ಲಕ್ಷ ಹುದ್ದೆಗಳಿಗೆ ಪ್ರತಿಯಾಗಿ 5.20 ಲಕ್ಷ ನೌಕರರು ಸೇವೆಯಲ್ಲಿದ್ದು, ಶೇ.33 ರಷ್ಟು ಹುದ್ದೆಗಳು ಖಾಲಿ ಇರುವುದನ್ನು ಆಯೋಗ ಗಮನಿಸಿದೆ. ಪ್ರಸ್ತುತ ಲಭ್ಯವಿರುವ ಹೊಸ ತಂತ್ರಜ್ಞಾನ ಕೆಲಸದಲ್ಲಿ ಆಳವಡಿಸಿಕೊಂಡು ಎಲ್ಲ ಇಲಾಖೆಗಳ ಸಿಬ್ಬಂದಿ ಅವಶ್ಯಕತೆ ಪುನರ್‌ ಪರಿಶೀಲಿಸುವ ಕ್ರಿಯೆ ಕೈಗೊಂಡು ಹೊಸ ಸಿಬ್ಬಂದಿ ಮಾದರಿ ರೂಪಿಸಿ ಸಿಬ್ಬಂದಿ ಸಂಖ್ಯೆ ನಿರ್ಧರಿಸಲು ಸಲಹೆ ಮಾಡಿದೆ. ಈ ಮೂಲಕ ಪರೋಕ್ಷವಾಗಿ ಅನಾವಶ್ಯಕ ಹುದ್ದೆ ಕಡಿತಕ್ಕೆ ಸೂಚಿಸಿದೆ.

ಕನಿಷ್ಠ ಮೂಲ ವೇತನ 17 ಸಾವಿರ ರೂ.
ಪರಿಷ್ಕರಣೆ ನಂತರ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಮೂಲ ವೇತನ ಮಾಸಿಕ 17 ಸಾವಿರ ರೂ. ಗರಿಷ್ಠ ವೇತನವು 1,50,600 ರೂ. ಜತೆ ಭತ್ಯೆಗಳು ಸೇರಿರಲಿವೆ. ಕನಿಷ್ಠ ಪಿಂಚಣಿ 8,500 ರೂ. ಗರಿಷ್ಠ ಪಿಂಚಣಿ 75,300 ರೂ. ಮತ್ತು ತುಟ್ಟಿಭತ್ಯೆ ಇರುತ್ತದೆ. ಕುಟುಂಬ ಪಿಂಚಣಿಯ ಗರಿಷ್ಠ ಮಿತಿ 45,180 ರೂ. ಹಾಗೂ ಭತ್ಯೆ ಇರಲಿದೆ. ವೇತನ ಪರಿಷ್ಕರಣೆಯಿಂದಾಗಿ ಪ್ರತಿ ವರ್ಷ ರಾಜ್ಯ ಸರ್ಕಾರಕ್ಕೆ 10,508 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಲೆಕ್ಕಾಚಾರ ಹೇಗೆ?
ಈಗಿರುವ ಕನಿಷ್ಠ ಮೂಲ ವೇತನ 9,600 ರೂ.ಗೆ ಶೇ.45.25 ರಷ್ಟು ತುಟ್ಟಿಭತ್ಯೆ ಮೊತ್ತ 4,344 ರೂ. ಇದೆ. ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದರೆ ಮೂಲ ವೇತನದ ಶೇ.30 ರಷ್ಟು ಮನೆ ಬಾಡಿಗೆ ಭತ್ಯೆ ನೀಡಲಾಗುತ್ತಿತ್ತು. ಹೀಗಾಗಿ, 2,880 ರೂ. ಸೇರಿ ಒಟ್ಟು 16,824 ರೂ. ವೇತನ ಸಿಗುತ್ತಿತ್ತು. ಆಯೋಗದ ಶಿಫಾರಸು ಪ್ರಕಾರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಶೆ.45.25 ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನ ಮಾಡಿ ಶೇ.30 ರಷ್ಟು ಫಿಟ್‌ಮೆಂಟ್‌ ನೀಡಲು ಸೂಚಿಸಲಾಗಿದೆ. ಈಗ 17000 ರೂ. ಕನಿಷ್ಠ ಮೂಲವೇತನ ನಿಗದಿ ಮಾಡಲಾಗಿದ್ದು, ಆಯೋಗದ ಶಿಫಾರಸು ಪ್ರಕಾರ ಶೇ.30ರ ಬದಲು ಶೇ.24 ರಷ್ಟು ಮನೆಬಾಡಿಗೆ ಭತ್ಯೆ ನೀಡಿದರೆ ಸಿಗುವ ವೇತನ 21,800ಕ್ಕೆ  ಏರಲಿದೆ. ಆರಂಭಿಕ ವೇತನ ಶ್ರೇಣಿಯವರಿಗೆ 4,256 ರೂ. ಹೆಚ್ಚಳವಾದಂತಾಗಲಿದೆ.

ನೌಕರರ ಸಂಘ ಅಸಮಾಧಾನ
ಆರನೇ ವೇತನ ಆಯೋಗ ಶೇ.30 ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿರುವುದರ ಬಗ್ಗೆ ಸಮಸ್ತ ನೌಕರ ಸಮುದಾಯಕ್ಕೆ ಅತೃಪ್ತಿಯಿದೆ. ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಶಿಫಾರಸು ಪ್ರಕಾರ ಕೇಂದ್ರ ಸರ್ಕಾರಿ ನೌಕರರರಿಗೆ ಸರಿಸಮನಾಗಿ ರಾಜ್ಯ ಸರ್ಕಾರಿ ನೌಕರರಿಗೂ ವೇತನ ಹಾಗೂ ಭತ್ಯೆ  ಸಿಗಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಆಗ್ರಹಿಸಿದ್ದಾರೆ.  ಶೇ.45 ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಹೀಗಾಗಿ, ನಮಗೆ ಅನ್ಯಾಯವಾಗಿದೆ. ಜತೆಗೆ ಆಯೋಗವು ಮನೆ ಬಾಡಿಗೆ ಭತ್ಯೆಇಳಿಸಲು ಆಯೋಗ ಶಿಫಾರಸು ಮಾಡಿದೆ. ನಾನು ಮತ್ತೂಮ್ಮೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನ್ಯಾಯ ದೊರಕಿಸಿಕೊಡಲು ಮನವಿ ಮಾಡುತ್ತೇವೆ. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದಿದ್ದಾರೆ.

2012 ರಲ್ಲಿ ಶೇ.22 ರಷ್ಟು ಹೆಚ್ಚಾಗಿತ್ತು
2012 ರಲ್ಲಿ ಡಿ.ವಿ.ಸದಾನಂದಗೌಡರು ಸಿಎಂ ಆಗಿದ್ದಾಗ ಸರ್ಕಾರಿ ನೌಕರರ ವೇತನ ಶೇ.22 ರಷ್ಟು ಪರಿಷ್ಕರಣೆ ಮಾಡಲಾಗಿತ್ತು. ಆಗ ತುಟ್ಟಿಭತ್ಯೆ ಶೇ.100 ರಷ್ಟು ಮೂಲವೇತನಕ್ಕೆ ವಿಲೀನ ಮಾಡಲಾಗಿತ್ತು. ಕನಿಷ್ಠ ಮೂಲ ವೇತನ 4260 ರಿಂದ 9600 ರೂ.ಗೆ ನಿಗದಿಪಡಿಸಲಾಗಿತ್ತು.

ವೇತನ ಆಯೋಗದ ಅವಧಿ ವಿಸ್ತರಣೆ
ಆರನೇ ವೇತನ ಆಯೋಗ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಶಿಫಾರಸು ನೀಡಿದ ಬೆನ್ನಲ್ಲೇ ಆಯೋಗದ ಕಾಲಾವಧಿ ಏಪ್ರಿಲ್‌ ಅಂತ್ಯದವರೆಗೂ ವಿಸ್ತರಿಸಲಾಗಿದೆ. ಇಲಾಖೆಗಳ ಕಾರ್ಯವೈಖರಿ ಉತ್ತಮಪಡಿಸುವುದು, ನೌಕರರ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ಸರ್ಕಾರೇತರ ಇಲಾಖೆಗಳ ವೇತನ ತಾರತಮ್ಯ, ಬಡ್ತಿ ವಿಚಾರದಲ್ಲಿನ ವ್ಯತ್ಯಾಸ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಇನ್ನೂ ಮೂರು ತಿಂಗಳು ಕಾಲಾವಕಾಶ ಬೇಕೆಂದು ಆಯೋಗ ಮನವಿ ಮಾಡಿದ ಹಿನ್ನೆಲೆಯಲ್ಲಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಏಳನೇ ವೇತನ ಆಯೋಗ ರಚಿಸಿ ಶಿಫಾರಸು ಜಾರಿ ಮಾಡಲಾಗಿದೆ. ರಾಜ್ಯ ಸರ್ಕಾರ 6ನೇ ವೇತನ ಆಯೋಗ ರಚನೆ ಮಾಡಿದ್ದರೂ, ಈ ಹಿಂದೆ ಹತ್ತು ಬಾರಿ ವೇತನ ಪರಿಷ್ಕರಣೆ ಮಾಡಿದೆ.
– ಎಂ.ಆರ್‌.ಶ್ರೀನಿವಾಸಮೂರ್ತಿ, ಅಧ್ಯಕ್ಷರು, ಆರನೇ ವೇತನ ಆಯೋಗ.

ಆಯೋಗದ ಶಿಫಾರಸು ವರದಿಯನ್ನು ಪೂರ್ತಿಯಾಗಿ ನೋಡಿಲ್ಲ. ಮುಂದಿನ ಸಚಿವ ಸಂಪುಟದ ಮುಂದಿಟ್ಟು ನಿರ್ಧಾರ ಕೈಗೊಳ್ಳಲಾಗುವುದು. ವೇತನ ಪರಿಷ್ಕರಣೆ ವಿಚಾರದಲ್ಲಿ ನಮ್ಮ ಸರ್ಕಾರ ಮೊದಲಿನಿಂದಲೂ ಮುಕ್ತ ಮನಸ್ಸಿನಿಂದ ಇದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಆಯೋಗದ ಶಿಫಾರಸು ಒಪ್ಪಲು ಸಾಧ್ಯವೇ ಇಲ್ಲ. ನಮಗೂ ಕೇಂದ್ರ ಸರ್ಕಾರಿ ನೌಕರರಿಗೂ ವೇತನ ಹಾಗೂ ಭತ್ಯೆಗಳಲ್ಲಿ ಶೇ.67 ರಷ್ಟು ವ್ಯತ್ಯಾಸವಿದೆ. ಅದನ್ನು ಸರಿಪಡಿಸುವಂತೆ ಕೋರಲಾಗಿತ್ತು. ಶೇ.30 ರಷ್ಟು ಹೆಚ್ಚಳದಿಂದ ನಮಗೆ ನ್ಯಾಯ ಸಿಕ್ಕಿಲ್ಲ.
– ವೆಂಕಟೇಶ್‌, ಉಪಾಧ್ಯಕ್ಷರು, ರಾಜ್ಯ ಸರ್ಕಾರಿ ನೌಕರರ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next