ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಫಿಟ್‌ಮೆಂಟ್ ವೇತನ ವನ್ನು ಶೇ.45ರಷ್ಟು ಹೆಚ್ಚಳ ಮಾಡುವಂತೆ ಸರ್ಕಾರಿ ನೌಕರರು ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿದ್ದ ಬಜೆಟ್ ಪೂರ್ವ ಸಭೆಯಲ್ಲಿ ನೌಕರರು, ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತಐಎಎಸ್ ಅಧಿಕಾರಿ ಶ್ರೀನಿವಾಸ್ ಮೂರ್ತಿ ನೇತೃತ್ವದ ಆಯೋಗ ಶೇ.30ರಷ್ಟು ಫಿಟ್‌ಮೆಂಟ್ ವೇತನ ಹೆಚ್ಚಳ ಮಾಡು ವಂತೆ ಶಿಫಾರಸು ಮಾಡಿದೆ. ಅದನ್ನು ಶೇ.45ಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಎಚ್‌ಆರ್‌ಎ ಅನ್ನು ಈಗಿರುವ ಮಾನದಂಡದಂತೆ 30, 20, 10 ಮಾದರಿಯಲ್ಲೇ ಮುಂದುವರಿಸಬೇಕು. ಸಾವು ಮತ್ತು ನಿವೃತ್ತಿ ಉಪದಾನವನ್ನು 2016ರ ಆಗಸ್ಟ್ 26ರಿಂದ ಜಾರಿಗೆ ಬರುವಂತೆ ನೀಡುವುದು, ಕುಟುಂಬದ ಪಿಂಚಣಿಯನ್ನು ಹಳೇ ಪಿಂಚಣಿ ಮಾದರಿಯಲ್ಲಿ ನೀಡಬೇಕು. ಜನವರಿಯಿಂದ ಡಿಎ ನೀಡಬೇಕು ಮತ್ತು ಎನ್‌ಪಿಎಸ್ ವ್ಯವಸ್ಥೆ ರದ್ದುಪಡಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ನೌಕರರು ಮನವಿ ಮಾಡಿದ್ದಾರೆ. ನೌಕರರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ, ಆಯೋಗ ನೀಡಿರುವ ವರದಿಯನ್ನು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಶೇ.30 ರಷ್ಟು ಹೆಚ್ಚಳ ಮಾಡುವುದರಿಂದ ಕೇಂದ್ರ ಸರ್ಕಾರದ ಸೆಕ್ರೆಟರಿ ಯೇಟ್ ನೌಕರರಿಗೆ ಸಮನಾದ ವೇತನವಾಗಲಿದೆ. ಹಣಕಾಸು
ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸಾಧ್ಯವಾದರೆ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಿಯೋಗದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ, ಎನ್‌ಪಿಎಸ್ ಸಂಘದ ಅಧ್ಯಕ್ಷ ರಮೇಶ್ ಸಂಗಾ ಹಾಜರಿದ್ದರು. ಇದೇ ಸಂದರ್ಭದಲ್ಲಿ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರ ಸಂಘದವರು ಕಾಯಂ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.