ಬೆಂಗಳೂರು: ಇನ್ನು ಮುಂದೆ ಸರ್ಕಾರಿ ಇಲಾಖೆ ಕಚೇರಿಗಳು ಹಾಗೂ ಸರ್ಕಾರಿ ನೌಕರರ ಮನೆ ಕಸ ರಸ್ತೆಗೆ ಬೀಳುವುದಿಲ್ಲ.
ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 5 ಸಾವಿರ ಟನ್‌ಗೂ ಹೆಚ್ಚು ಕಸ ಉತ್ಪತ್ತಿಯಾಗುತ್ತಿದ್ದು, ಇದರ ನಿರ್ವಹಣೆ ಪಾಲಿಕೆಗೆ ಜಟಿಲ ಸಮಸ್ಯೆಯಾಗಿದೆ. 2018-19ನೇ ಸಾಲಿನಲ್ಲಿ ಬಿಬಿಎಂಪಿ ಕಸ ಸಂಗ್ರಹ ಮತ್ತು ಸಾಗಣೆಗೆ 821 ಕೋಟಿ ರೂ. ಖರ್ಚು ಮಾಡಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಆ ಖರ್ಚು 100 ಕೋಟಿ ರೂ. ಹೆಚ್ಚಾಗಿದೆ. ಆದರೂ ನಗರದಲ್ಲಿ ಕಸ ಸಂಸ್ಕರಣೆ ಹಾಗೂ ವಿಲೇವಾರಿ ಸಮಸ್ಯೆ ಬಗೆಹರಿಯುತ್ತಿಲ್ಲ. ಹಾದಿ ಬೀದಿಯಲ್ಲಿ ಕಸದ ರಾಶಿ ಕಾಣತ್ತಿವೆ. ಕೆಲವೆಡೆ ಕಸ ಸೂಕ್ತ ರೀತಿಯಲ್ಲಿ ವಿಂಗಡಣೆ ಆಗುತ್ತಿಲ್ಲ. ಇನ್ನು ಕೆಲವೆಡೆ ವಿಂಗಡಿಸಿದರೂ ಕಸ ಸಂಗ್ರಹಿಸುವವರು ಮತ್ತೆ ಅದನ್ನು ಒಟ್ಟುಗೂಡಿಸುತ್ತಿದ್ದಾರೆ. ಇವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೊದಲು ಸರ್ಕಾರಿ ವಲಯ ಮತ್ತದರ ನೌಕರರೇ ಕಸ ಸಂಸ್ಕರಣೆ ಹಾಗೂ ಕಾಪೋಸ್ಟ್ ಮಾಡಿ ಇತರರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಈ ನಿಯಮ ಮಾಡಲಾಗಿದೆ.
ಎನ್‌ಜಿಟಿ ರಾಜ್ಯ ಸಮಿತಿ ಸೂಚನೆ: ಇತ್ತೀಚೆಗೆ ನಡೆದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ರಚಿಸಿರುವ ರಾಜ್ಯ ಮಟ್ಟದ ಸಮಿತಿಯ ಸಭೆಯಲ್ಲಿ ‘ಬೆಂಗಳೂರಿನಲ್ಲಿ ಇಂದಿಗೂ ಶೇ.23ರಷ್ಟು ಮಾತ್ರ ಸಂಸ್ಕರಿಸಿದ ಕಸ ಸಂಗ್ರಹವಾಗುತ್ತಿದ್ದು, ಬಿಬಿಎಂಪಿ ಹಾಗೂ ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಸಮಿತಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದರು. ಜತೆಗೆ ಘನತಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2016ರಲ್ಲಿ ರೂಪಿಸಿರುವ ನಿಯಮಾವಳಿಗಳನ್ನು ಜಾರಿಗೆ ತಂದು ಒಂದು ವೇಳೆ ಪಾಲಿಸದಿದ್ದರೆ ದಂಡ ವಿಧಿಸಲು ಸೂಚಿಸಿತ್ತು. ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಈ ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಸಂಸ್ಕರಣೆ ಜತೆ ಕಾಂಪೊಸ್ಟ್ ಕೂಡ ಕಡ್ಡಾಯ: ಕಚೇರಿ ಅಥವಾ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಮೊದಲು ಹಸಿ ಕಸ, ಒಣ ಕಸ ಹಾಗೂ ಗೃಹ ನೈರ್ಮಲ್ಯಗಳು ಎಂದು ಮೂರು ಭಾಗಗಳಾಗಿ ಸಂಸ್ಕರಿಸಬೇಕು. ಅದರಲ್ಲಿ ಹಸಿ ಕಸವನ್ನು ಬುಟ್ಟಿ, ಮಡಿಕೆ ಮಾದರಿಯ ಕಾಂಪೋಸ್ಟ್ ಬಿನ್‌ಗಳನ್ನಿಟ್ಟು ಅದರಲ್ಲಿ ಹಾಕುತ್ತಾ ಹಸಿ ಕಸದ ಪ್ರಮಾಣದಲ್ಲಿಯೇ ಕಸದ ಮೇಲೆ ಕೊಕೊ ಪುಡಿಯನ್ನು ಸಿಂಪಡಿಸಿ ಗೊಬ್ಬರವಾಗಿಸಬೇಕು. ಬಳಿಕ ಅದನ್ನು ಕಚೇರಿ ಅಥವಾ ಮನೆಯ ಗಿಡ/ಕೈತೋಟಗಳಿಗೆ ಬಳಸಬೇಕು. ಒಂದು ವೇಳೆ ಕೈತೋಟ ಇಲ್ಲವಾದರೆ ಸಮೀಪದ ಉದ್ಯಾನಕ್ಕೆ ನೀಡಬೇಕು. ಉಳಿದಂತೆ ಬೇರ್ಪಡಿಸಿ ಒಣಕಸವನ್ನು ವಾರಕ್ಕೆ ಎರಡು ಬಾರಿ ಪಾಲಿಕೆ ವತಿಯಿಂದ ಒಣಕಸ ಸಂಗ್ರಹಣೆಗೆ ನಿಯೋಜಿಸಿರುವ ಟಿಪ್ಪರ್‌ಗಾಡಿಗಳಿಗೆ ಹಾಗೂ ಗೃಹ ಹಾನಿಕಾರಕ ಕಸವನ್ನು ಹಳದಿ ಚೀಲದಲ್ಲಿ ಸುತ್ತಿ ಪಾಲಿಕೆ ಕಸ ಸಂಗ್ರಹಿಸುವವರಿಗೆ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Advertisement
ನಗರದ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಸಂಬಂಧ ಬಿಬಿಎಂಪಿ ಮಹತ್ವದ ಸುತ್ತೋಲೆ ಹೊರಡಿಸಿದ್ದು, ಅದರಂತೆ ನಗರದ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳು ಹಾಗೂ ಅವುಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸಿಬ್ಬಂದಿ ತಮ್ಮ ಮನೆಯಲ್ಲಿಗಳಲ್ಲಿ ಸೃಜಿಸುವ ಕಸವನ್ನು ಹಸಿ ಕಸ, ಒಣ ಕಸ ಹಾಗೂ ಗೃಹ ನೈರ್ಮಲ್ಯಗಳು ಎಂದು ಮೂರು ಭಾಗಗಳಾಗಿ ಸಂಸ್ಕರಿಸಬೇಕು. ಅದರಲ್ಲಿ ಹಸಿ ಕಸವನ್ನು ಕಡ್ಡಾಯವಾಗಿ ಅಲ್ಲಿಯೇ ಕಾಂಪೋಸ್ಟ್ ಮಾಡಬೇಕು. ಆ ನಂತರ ಉತ್ಪತ್ತಿಯಾಗುವ ಸಂಸ್ಕರಿತ ಗೊಬ್ಬರವನ್ನು ಸಮೀಪದ ಉದ್ಯಾನಕ್ಕೆ ನೀಡಬೇಕಿದೆ.
Related Articles
Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಕಚೇರಿ ಹಾಗೂ ಅಧಿಕಾರಿಗಳು ಈ ನಿಯಮವನ್ನು ಪಾಲಿಸಿರುವ ಬಗ್ಗೆ ಜುಲೈ ಒಳಗಾಗಿ ಸರ್ಕಾರಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕೆಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಸುತ್ತೋಲೆಯಲ್ಲಿ ನಮೂದಿಸಿದ್ದಾರೆ.
ಕಸ ಸಂಸ್ಕರಣೆ:
ಹಸಿ ಕಸ: ಎಲ್ಲಾ ಆಹಾರ ತಿನಿಸುಗಳು, ತರಕಾರಿ, ಹೂವು, ಹಣ್ಣಿನ ಸಿಪ್ಪೆ , ಒದ್ದೆಯಾದ ಕಾಗದ. ಒಣ ಕಸ: ಕಾಗದ, ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಾಟಲುಗಳು, ಸೀಡಿಗಳು, ರಬ್ಬರ್, ಬಟ್ಟೆ, ಹಾಲಿನ ಪ್ಯಾಕೆಟುಗಳು ಇನ್ನಿತರೆ, ಎಷ್ಟು ಕಾಲ ಇಟ್ಟರೂ ಕೊಳೆತು ಹೋಗದ ವಸ್ತುಗಳು. ಗೃಹ ಹಾನಿಕಾರಕ ಕಸ: ಬ್ಲೇಡ್, ಒಡೆದ ಗಾಜಿನ ಬಾಟಲಿ, ಸಿರಿಂಜು, ಸ್ಯಾನಿಟರಿ ಪ್ಯಾಡು, ಮಕ್ಕಳ ಡಯಾಪರ್, ಟ್ಯಾಂಪನ್ ಇನ್ನಿತರೆ. ರಾಸಾಯನಿಕ ಹೊಂದಿದ ಹಾಗೂ ಕೈಗೆ-ಕಾಲಿಗೆ ತಾಗಿದಲ್ಲಿ ಗಾಯವುಂಟು ಮಾಡುವ ವಸ್ತುಗಳು.
ಕಾಂಪೋಸ್ಟ್‌ಗೆ ಇದೇ ದಾರಿ:
ಹಸಿ ಕಾಂಪೋಸ್ಟ್ ಮಾಡುವುದು ಸುಲಭ ಮಾರ್ಗವಾಗಿದ್ದು, ಇದಕ್ಕಾಗಿಯೇ ಕಾಂಪೋಸ್ಟ್ ಬಿನ್ ಹಾಗೂ ಕೊಕೊ ಪೌಡರ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ವಿವಿಧ ಮಾದರಿಯ ಗಾತ್ರದಲ್ಲಿದ್ದು, ಮನೆಯಲ್ಲಿರುವ ಜನರ ಆಧಾರದ ಮೇಲೆ ಬಿನ್‌ಗಳನ್ನು ಕೊಂಡುಕೊಳ್ಳಬೇಕು. ಆ ಬಿನ್ ಅನ್ನು ಮನೆಗೆ ತಂದ ಬಳಿಕೆ ಮೊದಲು ತಳದಲ್ಲಿ ಎರಡು ಇಂಚು ಕೊಕೊ ಪೌಡರ್ ಅಥವಾ ಒಣಗಿದ ಎಲೆಗಳನ್ನು ಹಾಕಬೇಕು. ಆನಂತರ ನಿತ್ಯ ಹಸಿ ಕಸ (ನೀರನ್ನು ಇಲ್ಲದ)ವನ್ನು ಅದರಲ್ಲಿ ಹಾಕುತ್ತಾ ಹಸಿ ಕಸವಿರುವಷ್ಟೆ ಪ್ರಮಾಣದ ಕೊಕೊ ಪೌಡರ್/ ಒಣಗಿದ ಎಲೆಗಳನ್ನು ಸಿಂಪಡೆಸಬೇಕು. ಆ ಬಿಬ್ ತುಂಬಿದ ಬಳಿಕ ಮತ್ತೂಂದು ಬಿನ್‌ನಲ್ಲಿ ಇದೇ ಮಾದರಿ ಅನುಸರಿಸಬೇಕು. ಮೊದಲು ಹಸಿ ಕಸ ಹಾಕಿದ ಬಿನ್ ಮೂರ್‍ನಾಲು ವಾರದ ಬಳಿಕ ಗೊಬ್ಬರವಾಗುತ್ತದೆ. ಕಾಂಪೋಸ್ಟ್ ಬಿನ್ ಮೇಲ್ಮೈ ಸಾಕಷ್ಟು ತೂತುಗಳಿದ್ದು, ಯಾವುದೇ ರೀತಿಯಲ್ಲು ಕಸದ ವಾಸನೆ ಬರುವುದಿಲ್ಲ ಎನ್ನುತ್ತಾರೆ ಬಿಬಿಎಂಪಿ ತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು.