ಕೊಪ್ಪಳ: ಸರ್ಕಾರಿ ನೌಕರರ ಸಂಘದ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟ ಏ. 12 ಮತ್ತು 13ರಂದು ಎರಡು ದಿನಗಳ ಕಾಲ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾ ಕ್ರೀಡಾಂಗಣ ಸಮಿತಿ ಪ್ರಧಾನ ವ್ಯವಸ್ಥಾಪಕ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏ. 12 ಮತ್ತು 13ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಕ್ರೀಡಾಕೂಟಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಸಕಲ ನೆರವು ಒದಗಿಸಬೇಕು. ಕಾರ್ಯಕ್ರಮ ಅಚ್ಚುಕಟ್ಟಾಗಿ ಆಯೋಜಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗಿದೆ. ಆಯಾ ಅಧಿಕಾರಿಗಳು ತಮಗೆ ವಹಿಸಿದ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಕ್ರೀಡಾಕೂಟ ಯಶಸ್ವಿಗೊಳಿಸಬೇಕು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ಕುಸ್ತಿ, ಪವರ್ ಲಿಫ್ಟಿಂಗ್ ಸೇರಿದಂತೆ ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಬಾರಿ ಈಜು ಸ್ಪರ್ಧೆಯನ್ನು ಸಹ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಎಡಿಸಿಎಂ.ಪಿ. ಮಾರುತಿ ಮಾತನಾಡಿ, 2021-22ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಸರ್ಕಾರಿ ನೌಕರರು ಆಗಮಿಸಿ, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತಾಗಬೇಕು. ನೌಕರರಿಗೆ ಒಒಡಿ ಸೌಲಭ್ಯ ಒದಗಿಸುವುದು ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ್ ಮಾತನಾಡಿ, ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರ ಬಂಧುಗಳು ವೆಬ್‌ಸೈಟ್
https://bit.ly/koppalksgea ಲಿಂಕ್ ಮೂಲಕ ಏ. 5ರೊಳಗೆ ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಅಧಿಕಾರಿಗಳಾದ ಅಮೃತ್ ಅಸ್ಟಗಿ, ಸದಾಶಿವ, ಡಾ| ಎಚ್. ನಾಗರಾಜ್, ಜಿ. ಸುರೇಶ, ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಮುಸ್ತಫಾ ಕುದರಿಮೋತಿ, ಕೋಶಾಧ್ಯಕ್ಷ ಸುಶಿಲೇಂದ್ರರಾವ್ ದೇಶಪಾಂಡೆ, ಕಾರ್ಯದರ್ಶಿ ಶಿವಪ್ಪ ಜೋಗಿ, ಸಹ ಕಾರ್ಯದರ್ಶಿ ವೆಂಕಟೇಶ ಕುಲಕರ್ಣಿ, ಬೀರಪ್ಪ ಅಂಡಗಿ ಚಿಲವಾಡಗಿ, ಯಶವಂತ ಸೇರಿದಂತೆ ವಿವಿಧ ಇಲಾಖೆಗಳ ಅಧಿ ಕಾರಿಗಳು, ಜಿಲ್ಲಾ ಕ್ರೀಡಾಂಗಣ ಸಮಿತಿ ಪದಾಧಿಕಾರಿಗಳಿದ್ದರು.