Advertisement

ಸರ್ಕಾರಿ ದಿನಗೂಲಿ ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

03:04 PM Jan 14, 2020 | Suhan S |

ಬೆಳಗಾವಿ: ಹೊರಗುತ್ತಿಗೆ ಪದ್ಧತಿ ರದ್ದು ಮಾಡಬೇಕು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ದಿನಗೂಲಿ ನೌಕರರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ದಿನಗೂಲಿ, ಗುತ್ತಿಗೆ ಹಾಗೂ ಹಂಗಾಮಿ ನೌಕರರಿಗೆ ಸಹ ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ, ನಿಗಮಗಳಲ್ಲಿ, ಜಿಲ್ಲಾ ಪಂಚಾಯತಿಗಳಲ್ಲಿ ಜಾರಿಯಲ್ಲಿರುವ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸುವ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಅಧ್ಯಕ್ಷ ಡಾ.ಕೆ. ಎಸ್‌. ಶರ್ಮಾ ದಿನಗೂಲಿ ನೌಕರರ ಎಲ್ಲ ಬೇಡಿಕೆಗಳನ್ನು ಮಾರ್ಚ್‌ದಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಈಡೇರಿಸಬೇಕು. ಕಳೆದ ಜ.10 ರಂದು ಮುಖ್ಯಮಂತ್ರಿಗಳು ಹೊರಡಿಸಿರುವ ಆದೇಶಕ್ಕೆ ತಿದ್ದುಪಡಿ ತಂದು ಕ್ಷೇಮಾಭಿವೃದ್ಧಿ ದಿನಗೂಲಿ ನೌಕರರಿಗೆ ಶೇ.100 ರಷ್ಟು ತುಟ್ಟಿಭತ್ಯೆ ಹಾಗೂ ಮನೆ ಬಾಡಿಗೆ ಭತ್ಯೆಯನ್ನು ನೀಡುವಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹ ಪಡಿಸಿದರು.

ಯಾವುದೇ ಇಲಾಖೆಯಲ್ಲಿ ವಜಾ ಮಾಡಿರುವ ಹೊರ ಗುತ್ತಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ಆದೇಶಿಸಬೇಕು. ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ವಿ.ಜಿ.ಸೊಪ್ಪಿನಮಠ, ರಮೇಶ ಕಾತರಕಿ, ಯಲ್ಲಪ್ಪ ಚನ್ನನವರ, ಐ.ಎಂ.ಸನದಿ, ಪ್ರಕಾಶ ಗಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next