ನವದೆಹಲಿ:ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಸಂಗ್ರಹದಿಂದ ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸುಮಾರು 8 ಲಕ್ಷ ಕೋಟಿ ಆದಾಯ ಬಂದಿರುವುದಾಗಿ ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜಾತಿ, ಕುಟುಂಬ ರಾಜಕಾರಣ, ಕಮಲ ಕಂಪನ ; ಬೆಳಗಾವಿ ಬಿಜೆಪಿ ಸೋಲಿಗೆ ಕಾರಣವೇನು?
ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವೆ ನಿರ್ಮಲಾ ಅವರು, 2020-21ರಲ್ಲಿ 3.71 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಅಲ್ಲದೇ 2021ರ ನವೆಂಬರ್ 4ರಂದು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 19.48 ರೂ.ನಿಂದ 27.90 ರೂಪಾಯಿಗೆ ಹೆಚ್ಚಳ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ 15.33 ರೂ.ನಿಂದ 21.80 ರೂಪಾಯಿಗೆ ಏರಿಕೆ ಮಾಡಲಾಗಿತ್ತು ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
2018-19ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯಿಂದ 2,10,282 ಕೋಟಿ ರೂಪಾಯಿ, 2019-20ರಲ್ಲಿ 2,19,750 ಕೋಟಿ ರೂಪಾಯಿ ಹಾಗೂ 2020-21ರಲ್ಲಿ 3,71,908 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿರುವುದಾಗಿ ತಿಳಿಸಿದ್ದಾರೆ.
ನವೆಂಬರ್ 4ರಂದು ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಪ್ರತಿ ಲೀಟರ್ ಗೆ ಇಳಿಕೆ ಮಾಡಿತ್ತು. ನಂತರ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿತ್ತು.