ಹೊಸದಿಲ್ಲಿ/ಮೈಸೂರು: ಉತ್ತರದ ಅಯೋಧ್ಯೆಯಿಂದ ಪೂರ್ವದ ಗುವಾಹಟಿ ವರೆಗೆ, ಪಶ್ಚಿಮದ ತ್ರಯಂಬಕೇಶ್ವರದಿಂದ ದಕ್ಷಿಣದ ತಿರುವನಂತಪುರದ ವರೆಗೆ ಒಟ್ಟು 30 ನಗರಗಳನ್ನು 2 ವರ್ಷಗಳೊಳಗಾಗಿ “ಭಿಕ್ಷಾಟನೆ ಮುಕ್ತ ನಗರ’ಗಳನ್ನಾಗಿಸಲು ಕೇಂದ್ರ ಸರಕಾರ ಯೋಜನೆಯೊಂದನ್ನು ರೂಪಿಸಿದೆ. ಈ ಪೈಕಿ ಕರ್ನಾಟಕದ ಮೈಸೂರು ಕೂಡ ಸೇರಿದೆ.
ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಮತ್ತು ಮಹಿಳೆಯರನ್ನು ಪತ್ತೆಹಚ್ಚಿ, ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸಾಮಾ ಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯ ಈ ಯೋಜನೆ ರೂಪಿಸಿದೆ. ಈ 30 ನಗರಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವವರ ಸಮಗ್ರ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ.
ಧಾರ್ಮಿಕ, ಐತಿಹಾಸಿಕ ಅಥವಾ ಪ್ರವಾಸೋದ್ಯಮದ ಪ್ರಾಮುಖ್ಯದ ಆಧಾರದಲ್ಲಿ ನಗರಗಳನ್ನು ಆಯ್ಕೆ ಮಾಡಲಾಗಿದೆ. ಆರಂಭದಲ್ಲಿ ಈ 30 ನಗರಗಳನ್ನು ಭಿಕ್ಷುಕ ಮುಕ್ತವಾಗಿಸಿ, ಅನಂತರ ದಲ್ಲಿ ಈ ಪಟ್ಟಿಗೆ ಇನ್ನಷ್ಟು ನಗರಗಳನ್ನು ಸೇರಿಸ ಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಮೀಕ್ಷೆ ಮತ್ತು ಪುನರ್ವಸತಿ ಕುರಿತ ಮಾರ್ಗ ಸೂಚಿಗಾಗಿ ಸಚಿವಾಲಯವು ಫೆಬ್ರ ವರಿಯ ಮಧ್ಯಭಾಗದಲ್ಲಿ ರಾಷ್ಟ್ರೀಯ ಮಟ್ಟದ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್‌ಗ್ಳನ್ನು ಲೋಕಾರ್ಪಣೆಗೊಳಿಸಲಿದೆ.
ಉದ್ದೇಶವೇನು?
ಭಿಕ್ಷಾಟನೆಯಲ್ಲಿ ತೊಡಗಿದವರಿಗೆ ಶಿಕ್ಷಣ, ಕೌಶಲ ತರಬೇತಿ ಮತ್ತು ಉದ್ಯೋಗ ನೀಡುವ ಮೂಲಕ ಅವರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಈ ಯೋಜನೆಯ ಉದ್ದೇಶ.