ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ದೇವಸ್ಥಾನಗಳು ಮುಚ್ಚಲ್ಪಟ್ಟಿದ್ದರಿಂದ ಆದಾಯವಿಲ್ಲದೆ ಸಂಕಷ್ಟದಲ್ಲಿದ್ದ ತಮಗೆ ಆರ್ಥಿಕ ನೆರವು ನೀಡಲು, ತಸ್ದಿಕ್ ಹಣ ಬಿಡುಗಡೆ ಮಾಡಲು ಮತ್ತು ಆಹಾರ ಧಾನ್ಯ ಕಿಟ್ ವಿತರಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ನಡೆದುಕೊಂಡಿಲ್ಲ ಎಂದು ಅರ್ಚಕರು ಹೈಕೋರ್ಟ್‌ಗೆ ತಿಳಿಸಿದ್ದಾರೆ. ಈ ಕುರಿತ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಆರ್. ನಟರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಅರ್ಚಕರ ಪರವಾಗಿ ಅರ್ಜಿದಾರರಾದ ಕೆ.ಎಸ್.ಎನ್ ದೀಕ್ಷಿತ್ ಅವರು ಬುಧವಾರ ಅಫಿವಿಟ್ ಸಲ್ಲಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಅರ್ಚಕರ ನೆರವಿಗೆ ಸಿ ಕೆಟಗರಿಯ 35 ಸಾವಿರ ದೇವಸ್ಥಾನಗಳಿಗೆ ತಸ್ದಿಕ್ ಹಣ ಬಿಡುಗಡೆ ಮಾಡುವ ಸಂಬಂಧ ಸರ್ಕಾರ 2020ರ ಮೇ 5ರಂದು ಆದೇಶ ಹೊರಡಿಸಿತ್ತು. ಆದರೆ, ಈ ವಿಚಾರದಲ್ಲಿ ಸರ್ಕಾರ ಅರ್ಚಕರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಶಿವಮೊಗ್ಗ, ಬೆಂಗಳೂರು ನಗರ, ಹಾವೇರಿ, ಚಾಮರಾಜ ನಗರ ಮತ್ತು ಉತ್ತರ ಕನ್ನಡದ ಅರ್ಚಕರು ತಮಗೆ ತಸ್ದಿಕ್ ಹಣ ತಲುಪಿಲ್ಲವೆಂದು ಹೇಳಿದ್ದಾರೆ ಎಂದು ಅಫಿಟವಿಟ್‌ನಲ್ಲಿ ಹೇಳಲಾಗಿದೆ. ಅರ್ಚಕರಿಗೆ ಆರ್ಥಿಕ ನೆರವು ನೀಡುವುದಾಗಿ ಸರ್ಕಾರ ಹೇಳಿತ್ತು.
ಆದರೆ, ಈವರೆಗೆ ಅದು ಸಾಕಾರಗೊಂಡಿಲ್ಲ. ಜೂ.8ರಿಂದ ದೇವಸ್ಥಾನಗಳು ತೆರೆದಿವೆ. ಹಾಗಾಗಿ, ಆರ್ಥಿಕ ನೆರವಿನ ಅಗತ್ಯವಿಲ್ಲ ಎಂಬ ನಿಲುವು ಸರ್ಕಾರ ತಾಳಿದೆ. ದೇವಸ್ಥಾನಗಳು ತೆರೆದ ಮಾತ್ರಕ್ಕೆ ಅವುಗಳಿಗೆ ಆದಾಯ ಪ್ರಾರಂಭವಾಗಿದೆ ಎಂಬ ಸರ್ಕಾರದ ವಾದ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ, ದೇವಸ್ಥಾನಗಳು ತೆರೆದಿರಬಹುದು. ಆದರೆ, ಭಕ್ತಾದಿಗಳ ಸಂಖ್ಯೆ ಕಡಿಮೆ ಇದೆ. ಬಂದವರೂ ದೊಡ್ಡ ಮೊತ್ತದ ತಟ್ಟೆ ಹಣ ಹಾಕುತ್ತಾರೆ ಎಂಬಂತಹ ಸ್ಥಿತಿ ಇಲ್ಲ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಈ ವೇಳೆ ಸರ್ಕಾರಿ ವಕೀಲರು ವಾದ ಮಂಡಿಸಿ, ಸಿ ಕೆಟಗರಿಯ 34 ಸಾವಿರ ದೇವಸ್ಥಾನಗಳಲ್ಲಿ ತಲಾ 12 ಸಾವಿರ ತಸ್ದಿಕ್ ಹಣದ 13 ಕೋಟಿ ರೂ.ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು ಮೊದಲ ಕಂತಿನಲ್ಲಿ 37 ಕೋಟಿ ರೂ. ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಈವರೆಗೆ 13 ಕೋಟಿ ರೂ. ಮಾತ್ರ ದೇವಸ್ಥಾನಗಳ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗಿದೆ. ಆದರೆ, ಇದರಲ್ಲಿ ಅರ್ಚಕರಿಗೆ ನಯಾ ಪೈಸೆ ಸಹ ಸಿಕ್ಕಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಈವರೆಗೆ ಎಲ್ಲಾ ಅರ್ಚಕರಿಗೆ ವಿಶೇಷವಾಗಿ ಉತ್ತರ ಕರ್ನಾಟಕದ ಅರ್ಚಕರಿಗೆ ಆಹಾರ ಕಿಟ್ ಏಕೆ ನೀಡಿಲ್ಲ? ಸಂಕಷ್ಟದಲ್ಲಿರುವ ವಕೀಲರಿಗೆ ನೆರವು ನೀಡಬಹುದು ಎಂದಾದರೆ, ಅರ್ಚಕರಿಗೆ ಅಂತಹ ನೆರವು ಏಕಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.