Advertisement

ಗುಂಪು ಕೃಷಿ ಜಾರಿಗೆ ಸರ್ಕಾರ ನಿರ್ಧಾರ

06:00 AM Nov 10, 2018 | Team Udayavani |

ಬೆಂಗಳೂರು: ರೈತರು ಕೃಷಿಯಿಂದ ವಿಮುಖರಾಗುತ್ತಿರುವುದನ್ನು ತಡೆಯಲು ಗುಂಪು ಕೃಷಿ ಯೋಜನೆ (ಕ್ಲಸ್ಟರ್‌ ಫಾರ್ಮಿಂಗ್‌) ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.

Advertisement

ಪ್ರತಿ ಗ್ರಾಮದ 50 ರೈತರನ್ನು ಒಟ್ಟುಗೂಡಿಸಿ ಸಹಕಾರ ಸಂಘದ ಸ್ಥಾನಮಾನ ನೀಡಿ ಅವರ ಮಾಲೀಕತ್ವದ 200ರಿಂದ 250 ಎಕರೆ ಭೂಮಿಯಲ್ಲಿ ಸ್ಥಳೀಯ ಹವಾಮಾನ ಹಾಗೂ ಪದ್ಧತಿಗೆ ಅನುಗುಣವಾಗಿ ಬೆಳೆ ಬೆಳೆಯಲು ಟ್ರ್ಯಾಕ್ಟರ್‌ ಸೇರಿ ಯಂತ್ರೋಪಕರಣಗಳ ಸಹಿತ ಆರ್ಥಿಕ ನೆರವು ಕಲ್ಪಿಸುವುದು ಇದರ ಉದ್ದೇಶ. ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ, ಡಿಸಿಸಿ ಬ್ಯಾಂಕ್‌ ಅಧಿಕಾರಿಗಳಿಗೆ ಇದರ ಹೊಣೆಗಾರಿಕೆ ನೀಡಲು ನಿರ್ಧರಿಸಲಾಗಿದೆ.

ಉತ್ತರಾಖಂಡದಲ್ಲಿ ಇಂತಹ ಯೋಜನೆ ಜಾರಿಯಲ್ಲಿದ್ದು, ಕೇಂದ್ರ ಸರ್ಕಾರದ ನೆರವು ಸಹ ದೊರೆಯುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಅನುಷ್ಠಾನಗೊಳಿಸಲು ಸಹಕಾರ ಇಲಾಖೆ ತೀರ್ಮಾನಿಸಿದೆ. ಸದ್ಯದಲ್ಲೇ ಸಚಿವ ಬಂಡೆಪ್ಪ ಕಾಶೆಂಪುರ್‌ ಅವರು ಉತ್ತರಾಖಂಡಕ್ಕೆ ಹೋಗಿ ಆಧ್ಯಯನ ನಡೆಸಲಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌, ಗುಂಪು ಕೃಷಿ ಯೋಜನೆ ರೈತರಿಗೆ ಅನುಕೂಲವಾಗಲಿದ್ದು, ಪ್ರಾಯೋಗಿಕವಾಗಿ ಒಂದೆರಡು ಜಿಲ್ಲೆಗಳಲ್ಲಿ ಕೈಗೊಂಡು ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಸಹಕಾರ ಇಲಾಖೆ ವತಿಯಿಂದ ಬ್ಯಾಂಕುಗಳ ಮೂಲಕ ಇದಕ್ಕೆ ಆರ್ಥಿಕ ಹಾಗೂ ಯಂತ್ರೋಪಕರಣಗಳ ನೆರವು ಕಲ್ಪಿಸಲಾಗುವುದು. ಕೃಷಿ ವೆಚ್ಚ ದುಬಾರಿಯಾಗುತ್ತಿರುವುದರಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅದನ್ನು ತಡೆಗಟ್ಟುವುದು ಹಾಗೂ ಉತ್ಪನ್ನ ಹೆಚ್ಚಿಸುವುದು ನಮ್ಮ ಗುರಿಯಾಗಿದೆ ಎಂದರು.

Advertisement

ಸಾಲ ಮನ್ನಾ:
ರೈತರ ಸಾಲ ಮನ್ನಾ ವಿಚಾರದಲ್ಲಿ ಜಿಲ್ಲಾ ಬ್ಯಾಂಕುಗಳಿಂದ ಕ್ಲೈಮ್‌ಗಳು ಬರುತ್ತಿದ್ದು, ಹದಿನೈದು ದಿನಗಳಲ್ಲಿ ಸಮಸ್ಯೆ ಸರಿ ಹೋಗಲಿದೆ. ಇದುವರೆಗೂ 2.30,210 ರೈತರು ಕ್ಲೈಮ್‌ ಸಲ್ಲಿಸಿದ್ದು, ಡಾಟಾ ಎಂಟ್ರಿ ನಡೆಯುತ್ತಿದೆ. ಜುಲೈನಿಂದ ಅಕ್ಟೋಬರ್‌ವರೆಗೆ  ಸಾಲಮನ್ನಾ ಬಾಬ್ತು 1050 ಕೋಟಿ ರೂ. ಸಹ ಆರ್ಥಿಕ ಇಲಾಖೆ ಸಿದ್ಧಪಡಿಸಿಕೊಂಡಿದೆ ಎಂದು ತಿಳಿಸಿದರು. ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಉಪಸ್ಥಿತರಿದ್ದರು.

ನ.14ರಿಂದ ಸಹಕಾರ ಸಪ್ತಾಹ
65ನೇ ಅಖೀಲ ಭಾರತ ಸಹಕಾರ ಸಪ್ತಾಹ ನವೆಂಬರ್‌ 14 ರಿಂದ 20 ರವರೆಗೆ ನಡೆಯಲಿದ್ದು, “ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳ ಮೂಲಕ ಉತ್ತಮ ಆಡಳಿತ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆ’ ಈ ಬಾರಿಯ ಸಪ್ತಾಹದ ಘೋಷವಾಖ್ಯವಾಗಿದೆ. ನವೆಂಬರ್‌ 14 ರಂದು ಬೀದರ್‌ನಲ್ಲಿ ಸಪ್ತಾಯ ಉದ್ಘಾಟನೆಯಾಗಿ 15ರಂದು ಶಿರಸಿ, 16ರಂದು ರಾಯಚೂರು, 17ರಂದು ಬೆಂಗಳೂರು, 18ರಂದು ಹಾವೇರಿ, 19ರಂದು ಕೋಲಾರ ಹಾಗೂ 20ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಸಪ್ತಾಹದ ಅಂಗವಾಗಿ ವಿಭಾಗಾವಾರು ಸಹಕಾರ ಕ್ಷೇತ್ರಕ್ಕೆ ದುಡಿದವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆ‌ಂಪೂರ್‌ ತಿಳಿಸಿದ್ದಾರೆ.

ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಪಾಲ್ಗೊಳ್ಳದಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಜೆಡಿಎಸ್‌, ಕಾಂಗ್ರೆಸ್‌ಗಿಂತಲೂ ಮೊದಲು ಕಚೇರಿಯಲ್ಲಿ ಪ್ರತಿವರ್ಷ ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದೆ. ಬೀದರ್‌ನಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಭಾಗವಹಿಸುತ್ತೇನೆ.
– ಬಂಡೆಪ್ಪ ಕಾಶಂಪುರ್‌, ಸಚಿವ

ಮಹಿಳಾ ಸ್ವ ಸಹಾಯ ಸಂಘಗಳಿಗೆ “ಕಾಯಕ’ ಯೋಜನೆ
ಬೆಂಗಳೂರು:
ಮಹಿಳಾ ಸ್ವಸಹಾಯ ಸಂಘಗಳಿಗೆ ಹತ್ತು ಲಕ್ಷ ರೂ.ವರೆಗೆ ಆರ್ಥಿಕ ನೆರವು ಕಲ್ಪಿಸಿ ದುಡಿಯುವ ಕೈಗಳಿಗೆ ಉದ್ಯೋಗ ಕೊಡುವ “ಕಾಯಕ’ ಯೋಜನೆ ಈ ತಿಂಗಳ ಅಂತ್ಯ ಅಥವಾ ಡಿಸೆಂಬರ್‌ನಲ್ಲಿ ಜಾರಿಗೊಳಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹತ್ತು ಲಕ್ಷ ರೂ. ಮೊತ್ತದಲ್ಲಿ ಐದು ಲಕ್ಷ ರೂ. ಶೂನ್ಯ ಬಡ್ಡಿ ದರ ಹಾಗೂ ಉಳಿದ ಐದು ಲಕ್ಷ ರೂ.ಗಳಿಗೆ ಶೇ.4 ರಷ್ಟು ಬಡ್ಡಿದರ ವಿಧಿಸಲಾಗುವುದು. ಮೊದಲ ವರ್ಷ ಮರುಪಾವತಿಗೆ ಕಾಲಾವಕಾಶ ಕೊಟ್ಟು ಮೂರು ವರ್ಷಗಳಲ್ಲಿ ಕಂತುಗಳ ಮೂಲಕ ಪಾವತಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಈ ವರ್ಷ ಮೂರು ಸಾವಿರ ಗುಂಪುಗಳಿಗೆ ನೆರವು ಕಲ್ಪಿಸುವ ಗುರಿ ಹೊಂದಲಾಗಿದೆ. ಪ್ರತಿ ಸಂಘದಲ್ಲಿ 10 ರಿಂದ 15 ಸದಸ್ಯರು ಇರುವುದರಿಂದ ಎಲ್ಲರಿಗೂ ಕೆಲಸ ಸಿಗುವಂತಾಗಲಿದೆ. ಮಹಿಳಾ ಸ್ವಸಹಾಯ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ವಿಚಾರದಲ್ಲೂ ಮುಂದಿನ ಹಂತದಲ್ಲಿ ಕ್ರಮ ಕೈಗೊಳ್ಳಲಾಗುವುದು.

ಬೀದಿ ಬದಿ ವ್ಯಾಪಾರಿಗಳಿಗೆ 2 ರಿಂದ 10 ಸಾವಿರ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಪಿಗ್ಮಿ ಮಾದರಿಯಲ್ಲಿ ಸಾಲ ಸೌಲಭ್ಯ ಒದಗಿಸುವ ಬಡವರ ಬಂಧು ಯೋಜನೆಗೆ ನ.22 ರಂದು ಚಾಲನೆ ದೊರೆಯಲಿದೆ. ಬೆಂಗಳೂರಿನ ಎಪಿಎಂಸಿ ಆವರಣದಲ್ಲಿ ಯೋಜನೆ ಉದ್ಘಾಟನೆಯಾಗಲಿದ್ದು, 53 ಸಾವಿರ ಜನರಿಗೆ ಇದರ ಅನುಕೂಲ ತಲುಪಲಿದೆ ಎಂದು ತಿಳಿಸಿದರು.

ಸಾಲ ಪಡೆದವರು ಪಾವತಿಸಿದ ನಂತರ ಮತ್ತೆ ಹೊಸ ಸಾಲ ಸಿಗಲಿದೆ. ಮೀಟರ್‌ ಬಡ್ಡಿ ದಂಧೆಕೋರರಿಂದ ಬೀದಿ ಬದಿ ವ್ಯಾಪಾರಿಗಳನ್ನು ರಕ್ಷಿಸಲು ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next