ಬೆಂಗಳೂರು: ಹೋಟೆಲ್ ಉದ್ಯಮಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಬೆಂಗಳೂರು ಬಂಟರ ಹೋಟೆಲ್ ಮಾಲೀಕರ ಸಂಘ ಭಾನುವಾರ ವಿಜಯನಗರದ ಬಂಟರ ಭವನದಲ್ಲಿ ಆಯೋಜಿಸಿದ್ದ ಬಂಟರಾತಿಥ್ಯ- ಬಂಟ ಹೊಟೇಲಿಗರ ಪ್ರಥಮ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಂಟ ಸಮುದಾಯದವರು ತಮ್ಮ ಕಠಿಣ ಪರಿಶ್ರಮದಿಂದ ಇಂದು ವಿಶ್ವದಾದ್ಯಂತ ಹೋಟೆಲ್‌ಗಳನ್ನು ಆರಂಭಿಸಿದ್ದಾರೆ ಎಂದು ಹೇಳಿದರು.
ಬಂಟರ ಸಮುದಾಯದವರು ಶಿಕ್ಷಣ, ವೈದ್ಯಕೀಯ, ಉದ್ಯಮ, ಬ್ಯಾಂಕಿಂಗ್ ಸೇರಿದಂತೆ ಸಾಕಷ್ಟು ಕ್ಷೇತ್ರದಲ್ಲಿ ಬೆಳೆದು ಸಾಧನಾಶೀಲರಾಗಿದ್ದಾರೆ. ಮುಂಬೈ ಸಹಿತ ದೇಶದ ಹಲವು ನಗರಗಳಲ್ಲಿ ಬಂಟರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ವಿದೇಶದಲ್ಲೂ ಹೋಟೆಲ್ ತೆರೆಯುವ ಮೂಲಕ ವಿಶ್ವದೆಲ್ಲಡೆ ತಮ್ಮ ಅಸ್ಥಿತ್ವವನ್ನು ಕಾಯ್ದುಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಸಮುದಾಯದವರು ವಿಶಿಷ್ಠ ಸಂಸ್ಕೃತಿ, ಪರಂಪರೆ ಹೊಂದಿದ್ದಾರೆ. ಬಂಟರು ಕರವಾಳಿಯ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಶಿಕ್ಷಣ, ನಿರುದ್ಯೋಗ ನಿವಾರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುವ ಹೋಟೆಲ್ ಉದ್ಯಮದ ಪ್ರಗತಿಗೆ ಸರ್ಕಾರ ಬದ್ಧವಾಗಿದೆ ಎಂದರು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಕರಾವಳಿ ಜನತೆ ಅಂದು ಊರು ಬಿಡುವ ಪರಿಸ್ಥಿತಿಯಿಂದ ಬೆಂಗಳೂರಿಗೆ ವಲಸೆ ಬಂದರು. ಆದರೂ ನೀವು ನಂಬಿದ ದೈವ ನಿಮ್ಮನ್ನು ಕೈ ಬಿಡಲಿಲ್ಲ. ಇದರ ಪರಿಣಾಮ ಇಂದು ನೀವೆಲ್ಲರೂ ಉತ್ತಮ ಸ್ಥಿತಿಯಲ್ಲಿದ್ದೀರಿ. ಹೋಟೆಲ್ ಉದ್ಯಮ ಆಧುನಿಕ ಶೈಲಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಪ್ರವಾಸೋದ್ಯಮದ ಭಾಗವಾಗಿ ಸರ್ಕಾರ ಕೂಡ ನಿಮ್ಮ ಜತೆ ಇದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ, ದುಬೈನ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಭಾರತಿ ಶೆಟ್ಟಿ, ಬೆಂಗಳೂರು ಬಂಟರ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ ಎಂ.ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಕೃತಿ ಹಾಗೂ ವ್ಯಕ್ತಿತ್ವ ಎದ್ದು ಕಾಣುವುದೇ ಆತಿಥ್ಯದಿಂದ. ಹೋಟೆಲ್ ವೃತ್ತಿಯ ಮೂಲಕ ಅಂತಹ ಆತಿಥ್ಯ ನೀಡಿ ದೇಶದ ಘನತೆ ಹೆಚ್ಚಿಸುತ್ತಿರುವ ಬಂಟರ ಸೇವೆ ಶ್ಲಾಘನೀಯ. ಹಣ, ಆಸ್ತಿಯಿಂದ ಸಿಗದ ತೃಪ್ತಿ, ಊಟದಿಂದ ಸಿಗುತ್ತದೆ. ಬಂಟರು ರೈತರಾಗಿ ಯಶಸ್ವಿಯಾಗಿದ್ದರು, ಈಗ ಹೋಟೆಲ್ ಮಾಲೀಕರಾಗಿ ಯಶಸ್ಸು ಸಾಧಿಸುತ್ತಿದ್ದಾರೆ.
-ಡಾ.ಸಿ.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ