Advertisement

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

12:48 AM Jun 18, 2024 | Team Udayavani |

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರುದ್ಧ ಸಮರ ಸಾರಿರುವ ಬಿಜೆಪಿ, ರಾಜ್ಯ ಸರಕಾರಕ್ಕೆ ಮೂರು ದಿನಗಳ ಕಾಲಾವಕಾಶ ಕೊಟ್ಟಿದ್ದು, ಅಷ್ಟರಲ್ಲಿ ಬೆಲೆ ಇಳಿಸದಿದ್ದರೆ ಜೂ. 20ರಂದು ಜಿಲ್ಲಾ ಕೇಂದ್ರಗಳಲ್ಲಿ ಸಂಚಾರ ತಡೆ ಮಾಡುವುದಾಗಿ ಎಚ್ಚರಿಕೆ ನೀಡಿದೆ.

Advertisement

ಬೆಂಗಳೂರಿನ ಫ್ರೀಡಂ ಪಾರ್ಕ್‌ ಸೇರಿ ರಾಜ್ಯದ ವಿವಿಧೆಡೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಕಾರ್ಯಕರ್ತರು,ಚಬೆಲೆ ಏರಿಕೆ ಅಸ್ತ್ರವನ್ನಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಹೋರಾಟ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಅಣಕು ಶವ ಹೊತ್ತು ಬಂದ ಕಾರ್ಯಕರ್ತರು
ಸ್ವಾತಂತ್ರ್ಯ ಉದ್ಯಾವನದ ಬಳಿ ಉರಿಬಿಸಿಲಿನಲ್ಲೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಪ್ರತಿಭಟನೆ ಆರಂಭವಾಗುವ ವೇಳೆಗೆ ಪ್ರಮುಖ ನಾಯಕರೆಲ್ಲರೂ ವೇದಿಕೆ ಹತ್ತುತ್ತಿದ್ದರು. ಇದೇ ಸಮಯಕ್ಕೆ ರಾಜ್ಯ ಸರಕಾರದ ಅಣಕು ಶವಯಾತ್ರೆ ನಡೆಸಿದ ಕಾರ್ಯಕರ್ತರು, ಚಟ್ಟದ ಮೇಲೆ ಮಲಗಿದ ಶವಕ್ಕೆ ಸಿಂಗರಿಸಿದಂತೆ ಹೂವು ಹಾಕಿ ತರಲಾದ ಬೊಂಬುಗಳನ್ನು ನೇರವಾಗಿ ವೇದಿಕೆಗೆ ತಂದಿಟ್ಟರು. ಮೂರು ನಾಮ ಹಾಕಿಕೊಂಡು ಬಂದಿದ್ದ ಕಾರ್ಯಕರ್ತರು ಶಂಖ, ಜಾಗಟೆ ಬಾರಿಸಿದರು. ಬಾಯಿ ಬಡಿದುಕೊಂಡು ಅಳುವ ಪ್ರಹಸನ ನಡೆಸಿದರು.

ಎತ್ತಿನಗಾಡಿ, ಟಾಂಗಾಲ್ಲಿ ಬಂದ ನಾಯಕರು
ವಿಪಕ್ಷ ನಾಯಕ ಆರ್‌.ಅಶೋಕ್‌ ಸೇರಿ ಬಿಜೆಪಿ ನಾಯಕರು ಎತ್ತಿನ ಗಾಡಿ, ಟಾಂಗಾದಲ್ಲಿ ಪ್ರತಿಭಟನ ಸ್ಥಳಕ್ಕೆ ಆಗಮಿಸಿದರು. ಪ್ರತಿಭಟನಕಾರ ರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಸಿಎಂ ಮನೆಗೆ ಮುತ್ತಿಗೆ ಹಾಕಲು ಕರೆ ಕೊಟ್ಟರು. ಫ್ರೀಡಂ ಪಾರ್ಕ್‌ ಎದುರಿನ ರಸ್ತೆಗೆ ಕಾರ್ಯಕರ್ತರು ಇಳಿಯುತ್ತಿದ್ದಂತೆ ಪೊಲೀಸರು ಬಂಧಿಸಲು ಸಜ್ಜಾದರು. ಎತ್ತಿನಗಾಡಿ ಏರಿದ ನಾಯಕರು, ಪೆಟ್ರೋಲ್‌, ಡೀಸಲ್‌ ದರ ಏರಿಕೆಯಾಗಿದೆ. ನಾವು ಬಸ್‌ ಹತ್ತುವುದಿಲ್ಲ ಎಂದು ಹಠ ಹಿಡಿದರು. ಬಸ್‌ವರೆಗೂ ಬಂಡಿಯಲ್ಲಿ ಹೋಗಲು ಬಿಡದಿದ್ದರೆ, ರಸ್ತೆಯಲ್ಲೇ ಧರಣಿ ಕೂರುವುದಾಗಿ ಎಚ್ಚರಿಸಿದ ಬಳಿಕ ಟಾಂಗಾ, ಎತ್ತಿನಗಾಡಿ ಇದ್ದಲ್ಲಿಗೇ ಬಸ್‌ಗಳನ್ನು ತರಿಸಿದ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.

ಮೊಂಡು ವಾದ ಬಿಟ್ಟು ದರ ಇಳಿಸಿ: ಬಿ.ವೈ. ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಕ್ರಮವಾಗಿ 3 ಮತ್ತು 3.50 ರೂ. ವರೆಗೆ ಹೆಚ್ಚಿಸಿರುವುದು ಅವಿವೇಕ ಮತ್ತು ಜನವಿರೋಧಿ ನಿರ್ಧಾರ. ರಾಜ್ಯ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವವರೆಗೆ ಹೋರಾಟ ನಡೆಸುತ್ತೇವೆ. ವಿಪಕ್ಷವಾಗಿ ಜನರ ಪರವಾಗಿ ಧ್ವನಿ ಎತ್ತುತ್ತೇವೆ. ಮೊಂಡು ವಾದಗಳನ್ನು ಬಿಟ್ಟು ದರ ಇಳಿಸದಿದ್ದರೆ ಜೂ. 20ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸಂಚಾರ ತಡೆ ಮಾಡುತ್ತೇವೆ ಎಂದರು. ಲೋಕಸಭೆ ಚುನಾವಣೆ ಫ‌ಲಿತಾಂಶದಿಂದ ಕಾಂಗ್ರೆಸ್‌ ಹತಾಶೆಗೊಳಗಾಗಿದೆ. ಆಡಳಿತ ಪಕ್ಷದ ಶಾಸಕರೇ ಗ್ಯಾರಂಟಿ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ವಿಪಕ್ಷದಲ್ಲಿದ್ದಾಗ ತೋರಿದ ಜನಪರ ಕಾಳಜಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲಿ ಕಳೆದುಹೋಗಿದೆ? ಒಂದು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕಾಮಗಾರಿ ನಡೆದಿಲ್ಲ.

Advertisement

ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡಲಾಗುತ್ತಿಲ್ಲ, ರಾಜೀನಾಮೆ ಕೊಡುತ್ತೇವೆ ಎಂದು ಕಾಂಗ್ರೆಸ್‌ ಶಾಸಕರೇ ಹೇಳುತ್ತಿದ್ದಾರೆ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಸಿಎಂ ಸ್ಥಾನದಿಂದ ಕೆಳಗಿಳಿಯುವಾಗ ಕಂದಾಯ ಮಿಗತೆ ಇತ್ತು. ಒಂದೇ ವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡಲು ಹೇಗೆ ಸಾಧ್ಯ? ರಾಜ್ಯ ದಿವಾಳಿ ಅಂಚಿಗೆ ಹೋಗಿದೆ. ಯಾವ ಪುರುಷಾರ್ಥಕ್ಕೆ ಆಡಳಿತ ನಡೆಸುತ್ತಿದ್ದೀರಿ ಎಂದು ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಎರಡು ನಾಲಗೆಯ ನುಂಗಣ್ಣ: ಅಶೋಕ್‌
ಎತ್ತಿನಗಾಡಿಯಲ್ಲಿ ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಮಾತನಾಡಿ, ಈ ಹಿಂದೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾದಾಗ ಬಿಜೆಪಿಯವರಿಗೆ ಮಾನ-ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯರಿಗೆ ಎರಡು ನಾಲಗೆ ಇದೆ. ಈಗ ಇಂಧನ ದರ ಏರಿಸಿರುವ ಅವರಿಗೆ ಮಾನ-ಮರ್ಯಾದೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಈಗ ಸಿದ್ದರಾಮಯ್ಯ ಎಂದರೆ “ನುಂಗಣ್ಣ’ ಎನ್ನುವಂತಾಗಿದ್ದಾರೆ. ಇಂಧನ ದರ ಹೆಚ್ಚಳವಾದರೆ ಎಲ್ಲದರ ದರವೂ ಜಾಸ್ತಿಯಾಗುತ್ತದೆ ಎಂದಿದ್ದ ಸಿದ್ದರಾಮಯ್ಯರೇ… ನೀವೀಗ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಿಸಿದರೆ ಉಳಿದದ್ದರ ದರ ಏರಿಕೆ ಆಗುವುದಿಲ್ಲವೇ? ಗ್ಯಾರಂಟಿಗಳನ್ನು ಟಕಾಟಕ್‌ ನೀಡುತ್ತೇವೆಂದು ಜನರ ಜೇಬಿಗೆ ಟಕಾಕಟ್‌ ಕತ್ತರಿ ಹಾಕಿದ್ದೀರಿ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ನುಂಗಣ್ಣರ ಪಾಲಾಗಿದೆ. ಸಚಿವ ನಾಗೇಂದ್ರ ಶೇ. 20ರಷ್ಟು ಜೇನು ಕಿತ್ತರೆ, ಸಿಎಂ ಸಿದ್ದರಾಮಯ್ಯ ಅವರು ಶೇ. 80ರಷ್ಟು ಜೇನು ಹೊಡೆದಿದ್ದಾರೆ. ಎಲ್ಲರೂ ದಂಗೆ ಎದ್ದು ಈ ಸರಕಾರವನ್ನು ಕಿತ್ತೂಗೆಯಬೇಕು ಎಂದು ಕರೆ ಕೊಟ್ಟರು.

ಒಂದು ವರ್ಷದಲ್ಲಿ ಕಾಂಗ್ರೆಸ್‌ ಮಾಡಿರುವುದು ಒಂದೇ ಕಾಮಗಾರಿ, ಅದು ಬೆಲೆ ಏರಿಕೆ. ಬೆಲೆ ಏರಿಕೆ ವಿರುದ್ಧ ಹೋರಾಟ ಎಂದಿದ್ದ ಆರ್ಥಿಕ ತಜ್ಞ ಸಿದ್ದರಾಮಯ್ಯ ಈಗ ಮಾಡಿರುವುದೇನು? ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದಿದ್ದ ಸಿದ್ದರಾಮಯ್ಯ ಅತ್ಯಂತ ದುರ್ಬಲ ಸಿಎಂ ಎನಿಸುತ್ತಿದ್ದಾರೆ.
-ಡಾ| ಸಿ.ಎನ್‌. ಅಶ್ವತ್ಥ ನಾರಾಯಣ,ಬಿಜೆಪಿ ಶಾಸಕ

ಬಕ್ರೀದ್‌ಗೆ ಮುನ್ನ ದರ ಏರಿಕೆ ಮಾಡಿ ಜನರನ್ನು ಬಕರಾ ಮಾಡಿದ್ದಾರೆ. ಊಸರವಳ್ಳಿಯೂ ನಾಚುವಂತೆ ಬಣ್ಣ ಬದಲಿಸುತ್ತಿರುವ ಸಿಎಂಗೂ ಗೋಸುಂಬೆಗೂ ಸ್ಪರ್ಧೆ ಇಟ್ಟರೆ, ಸಿದ್ದರಾಮಯ್ಯ ಗೆಲ್ಲುತ್ತಾರೆ. ಬೆಲೆ ಇಳಿಸಿ ಇಲ್ಲವೇ ಅಧಿಕಾರ ಬಿಟ್ಟು ಇಳಿಯಿರಿ. ಹೀಗೇ ಆದರೆ ಕಾಂಗ್ರೆಸ್‌ ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ.
– ಸಿ.ಟಿ. ರವಿ,
ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next