ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 245.84 ಕೋ. ರೂ.ಗಳ ಪ್ರಸ್ತಾವನೆ ಬಂದಿದ್ದು, ಅನುದಾನದ ಕೊರತೆ ಇರುವುದರಿಂದ ಎಲ್ಲ ಕಾಮಗಾರಿಗಳನ್ನೂ ಕೈಗೊಳ್ಳಲಾಗುತ್ತಿಲ್ಲ. ಸಸಿಹಿತ್ಲು ಬೀಚ್ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ವಿಧಾನಸಭೆಯಲ್ಲಿ ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಪರವಾಗಿ ಉತ್ತರಿಸಿದ ಪ್ರಿಯಾಂಕ, ಉಡುಪಿ ಜಿಲ್ಲೆಯಿಂದ ಪ್ರವಾಸೋದ್ಯಮ ಇಲಾಖಾ ಯೋಜನಾನುಷ್ಠಾನಕ್ಕೆ 61.15 ಕೋಟಿ ರೂ. ಪ್ರಸ್ತಾವನೆ ಬಂದಿದ್ದರೆ, ದ.ಕ. ಜಿಲ್ಲೆಯಿಂದ 63.51 ಕೋಟಿ ರೂ. ಹಾಗೂ ಉತ್ತರ ಕನ್ನಡ ಜಿಲ್ಲೆಯಿಂದ 121.18 ಕೋಟಿ ರೂ. ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ಈ ಪೈಕಿ ತಲಾ 50 ಲಕ್ಷ ರೂ. ವೆಚ್ಚದ ಮರೋಳಿಯ ಶ್ರೀಸೂರ್ಯನಾರಾಯಣ ದೇವಸ್ಥಾನ ಹಾಗೂ ಅತ್ತಾವರದ ಶ್ರೀ ಮಂಗಳಾದೇವಿ ದೇವಸ್ಥಾನದ ಯಾತ್ರಿ ನಿವಾಸ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ ಎಂದರು.
ಮುಂದುವರಿದ ಕಾಮಗಾರಿ ಗಳನ್ನು ಕೈಗೊಳ್ಳಲು ಇಲಾಖೆಗೆ ಒದಗಿಸಿರುವ ಅನುದಾನದಲ್ಲಿ ಕೊರತೆ ಆಗಿರುವುದರಿಂದ ಉಳಿದ ಪ್ರಸ್ತಾವನೆಗಳನ್ನು ಪರಿಗಣಿಸಲು ಕಷ್ಟಸಾಧ್ಯವಾಗುತ್ತದೆ. ಬಂಡವಾಳ ಮತ್ತು ಕೆಟಿವಿಜಿ ಲೆಕ್ಕಶೀರ್ಷಿಕೆಯಡಿ ಕೆಲ ಕಾಮಗಾರಿಗಳಿಗೆ ಅನುದಾನ ಕೊಡಲಾಗುತ್ತಿದೆ. ಮೂಡುಬಿದರೆ, ಮೂಲ್ಕಿ ತಾಲೂಕಿನಲ್ಲಿ 26 ಪ್ರವಾಸಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬರುವ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಸಹಾಯಧನ, ಪ್ರೋತ್ಸಾಹಕಗಳು ಮತ್ತು ರಿಯಾಯಿತಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಉಮಾನಾಥ ಕೋಟ್ಯಾನ್, ಮೂಡುಬಿದರೆಯಲ್ಲಿನ ಸಾವಿರ ಕಂಬದ ಜೈನ ಬಸದಿ, ಕೊಡಂಜಿಕಲ್ಲು, ಸಸಿಹಿತ್ಲು ಬೀಚ್ ಸೇರಿದಂತೆ ಅನೇಕ ಪ್ರವಾಸಿತಾಣಗಳಿವೆ. ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಈ ಹಿಂದೆ ನಾನು ಪ್ರವಾಸೋದ್ಯಮ ಸಚಿವನಿದ್ದಾಗ ಸಸಿಹಿತ್ಲು ಬೀಚ್‌ನಲ್ಲಿ ಅಖೀಲ ಭಾರತೀಯ ಮಟ್ಟದ ಸರ್ಫಿಂಗ್ ಸ್ಪರ್ಧೆ ಏರ್ಪಡಿಸಿತ್ತು. 2 ದಿನದ ಸ್ಪರ್ಧೆಯನ್ನು ನೋಡಲು 45 ಸಾವಿರ ಜನ ಸೇರಿದ್ದರು. ಸರ್ಫಿಂಗ್ ಕಲಿಯಲು ಇಡೀ ಏಷ್ಯಾದಲ್ಲೇ ಪ್ರಶಸ್ತವಾಗಿರುವ ಸಸಿಹಿತ್ಲು ಬೀಚ್‌ನ ಅಭಿವೃದ್ಧಿಗೆ ನಮ್ಮ ಸರಕಾರ ಈಗಲೂ ಬದ್ಧವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.