ವಿಧಾನ ಪರಿಷತ್ತು: ಸಾರಿಗೆ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ. ವೇತನ ಪರಿಷ್ಕರಣೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮಲು ಹೇಳಿದ್ದಾರೆ.
ಪ್ರಶೋತ್ತರ ವೇಳೆ ಬಿಜೆಪಿಯ ಡಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿ, 2016ರಿಂದಲೂ ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆ ಆಗಿರಲಿಲ್ಲ. ಶೀಘ್ರದಲ್ಲೆ ವೇತನ ಪರಿಷ್ಕರಣೆಯನ್ನು ಸರ್ಕಾರ ಇತ್ಯರ್ಥ ಪಡಿಸಲಿದೆ ಎಂದು ಭರವಸೆ ನೀಡಿದರು.
ಈ ಸಂಬಂಧ ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜತೆಗೆ ಚರ್ಚೆ ಮಾಡಲಾಗಿದೆ. ರಾಜ್ಯದ ಎಲ್ಲ ರಸ್ತೆ ಸಾರಿಗೆ ಸಂಸ್ಥೆಗಳ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಸಂಪೂರ್ಣ ಅಧ್ಯಯನ ನಡೆಸಿ ವರದಿ ಸಲ್ಲಿಸಲು ನಿವೃತ್ತಿ ಐಎಎಸ್ ಅಧಿಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಏಕ ಸದಸ್ಯ ಸಮತಿ ಸಲ್ಲಿಸಿರುವ ವರದಿ ಕೂಡ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
ಸಾರಿಗೆ ನೌಕರರ ಪ್ರತಿಭಟನೆ, ಕೋವಿಡ್ ಸಂಕಷ್ಟ ಸೇರಿ ಹಲವು ಕಾರಣಗಳಿಂದಾಗಿ ಸಾರಿಗೆ ಇಲಾಖೆ ಅನೇಕ ಸಂಕಷ್ಟಗಳನ್ನು ಅನುಭವಿಸಿತು. ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ನೌಕರರಿಗೆ ಯಾವುದೇ ರೀತಿಯ ವೇತನ ಪರಿಷ್ಕರಣೆ ಮಾಡಲಾಗಲಿಲ್ಲ. ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಒಟ್ಟು 12 ಸಾವಿರ ಕೋಟಿ ರೂ. ನೆರವನ್ನು ಸರ್ಕಾರ ನೀಡಿದೆ. ನಾಲ್ಕೂ ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ 2020-21ನೇ ಸಾಲಿನಲ್ಲಿ ಹಾಗೂ 2021-22ನೇ ಸಾಲಿನಲ್ಲಿ ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ಮೊತ್ತಕ್ಕೂ ಸರ್ಕಾರ ವಿನಾಯ್ತಿ ನೀಡಿದೆ ಎಂದು ಮಾಹಿತಿ ನೀಡಿದರು.
ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಲು ಹೊಸ ಪ್ಯಾಕೇಜ್ ಪರಿಚಯಿಸಲಾಗಿದೆ. ಆದಾಯ ವೃದ್ಧಿಗಾಗಿ ನಮ್ಮ ಕಾರ್ಗೋ ಪಾರ್ಸಲ್ ಸೇವೆ ಪ್ರಾರಂಭಿಸಲಾಗಿದೆ. ಸಾರಿಗೆ ನಿಮಗದ ಘಟಕಗಳ ಮಟ್ಟದಲ್ಲಿ ದಿನಂಪ್ರತಿ ಅನುಸೂಚಿವಾರು ಆದಾಯ ಪರಿಶೀಲಿಸಿ, ನಷ್ಟ ಉಂಟು ಮಾಡುವ ಅನುಸೂಚಿಗಳನ್ನು ಪರಿಷ್ಕರಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.