Advertisement

ಸಂಪುಟ ವಿಸ್ತರಣೆ ಬೆನ್ನಲ್ಲೇ ಸರ್ಕಾರ ಪತನ

04:32 PM Dec 22, 2018 | Team Udayavani |

ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯಾದ ಮರುದಿನವೇ ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಬಿದ್ದು ಹೋಗಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಶುಕ್ರವಾರ, ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವ ದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವಿಷಯ ಒಂದು ರೀತಿ ನಾಳೆ ಬಾ…ಎಂಬಂತಿದೆ. ಒಂದಂತೂ ಸತ್ಯ, ಸಚಿವ ಸಂಪುಟ ವಿಸ್ತರಣೆಯಾದ ಮರುದಿನವೇ ಮೈತ್ರಿ ಸರ್ಕಾರ ಬಿದ್ದು ಹೋಗುವುದು ಖಚಿತ ಎಂದರು.

ನಾವೇನು ಮತ್ತೆ ಸರ್ಕಾರ ರಚಿಸುವುದಾಗಿ ಹೇಳುತ್ತಿಲ್ಲ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಸಹ ಸರ್ಕಾರ ರಚಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಸರ್ಕಾರ ರಚನೆ ಸಂಬಂಧ ಬಿಜೆಪಿ ಪ್ರಯತ್ನ ಕೂಡ ಮಾಡಲ್ಲ. ಅವರ ಸರ್ಕಾರ ಪತನಗೊಂಡ ನಂತರ ನೋಡೋಣ ಎಂದು ಹೇಳಿದರು. 

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು. ಸುಳ್ಳು ಹೇಳುವ ವಿಚಾರದಲ್ಲಿ ಅವರಿಬ್ಬರಲ್ಲೇ ಕಾಂಪಿಟೇಶನ್‌ ಇದೆ. ಉಭಯರಿಗೂ ಆ ಬಗ್ಗೆ ನೋಬಲ್‌ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಡಿದರು. ಬೆಳಗಾವಿಯಲ್ಲಿ 11 ದಿನ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ರೈತರು, ಬರ, ಕಬ್ಬಿನ ಬಾಕಿ ಸೇರಿದಂತೆ ಯಾವುದೇ ಸಮಸ್ಯೆ ಬಗ್ಗೆ ಚರ್ಚೆಯೇ ಆಗಲಿಲ್ಲ. ನಿಜಕ್ಕೂ ವ್ಯರ್ಥವಾದ ಅಧಿವೇಶನ ಎಂದು ತುಂಬ ನೋವಿನಿಂದ ಹೇಳಬೇಕಿದೆ. ನಾವು ಉಭಯ ಸದನಗಳಲ್ಲೂ ಮೌನವಾಗಿದ್ದೆವು. ಸರ್ಕಾರದ ನಡೆ ನೋಡಿ ಕೊನೆಗೆ ಅನಿವಾರ್ಯವಾಗಿ 2 ದಿನ ಧರಣಿ ನಡೆಸಬೇಕಾಯಿತು. ಈ ಬಾರಿಯ ಬೆಳಗಾವಿಯ ಅಧಿವೇಶನದಲ್ಲಿ ಯಾವುದೇ ಸಮಸ್ಯೆ, ಅದರಲ್ಲೂ ಉತ್ತರ ಕರ್ನಾಟಕದ ರೈತರ ಸಂಕಷ್ಟದ ಪರಿಹಾರ ಹುಡುಕುವ ಪ್ರಯತ್ನವನ್ನೇ ಸರ್ಕಾರ ಮಾಡಲಿಲ್ಲ ಎಂದು ದೂರಿದರು.

ರೈತರ 46 ಕೋಟಿ ರೂ. ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿರುವ ಬಗ್ಗೆ ನಿಲುವೇನು? ಎಂಬುದನ್ನು ಅಧಿವೇಶನದಲ್ಲಿ ಸ್ಪಷ್ಟಪಡಿಸಲಿಲ್ಲ. ಆ ಬಗ್ಗೆ ಚರ್ಚೆಗೆ ಅವಕಾಶವನ್ನೇ ನೀಡಲಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಕುಡಿಯುವ ನೀರು, ಮೇವು, ನೀರಾವರಿ ಬಗ್ಗೆ ಸದನದಲ್ಲಿ ಪ್ರಸ್ತಾಪವೇ ಆಗಲಿಲ್ಲ ಎಂದು ಹೇಳಿದರು.

Advertisement

 ಮಾಯಕೊಂಡ ಶಾಸಕ ಪ್ರೊ| ಎನ್‌.ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಮುಖಂಡರಾದ ಬಿ.ಎಂ. ಸತೀಶ್‌, ಎನ್‌. ರಾಜಶೇಖರ್‌, ಗುರುನಾಥ್‌ ಇತರರು ಈ ಸಂದರ್ಭದಲ್ಲಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡದ್ದು. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಾವು ಹೇಳುವುದು ಇಷ್ಟೆ, ನಿಮ್ಮ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಆದರೆ, ಘೋಷಿಸಿರುವ ಸಾಲ ಮನ್ನಾ ಆದಷ್ಟು ಬೇಗ ಕಾರ್ಯಗತವಾಗಬೇಕು. ಆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವಂತೆ ನೀವು ನಡೆದುಕೊಳ್ಳಬೇಕು ಎಂದರು. ಮಣ್ಣಿನ ಮಗ ಎಚ್‌.ಡಿ. ದೇವೇಗೌಡರು ಹಾಗೂ ಅಹಿಂದ ನಾಯಕ ಸಿದ್ದರಾಮಯ್ಯನವರು ಜಂಟಿಯಾಗಿ ರಾಜ್ಯದಲ್ಲಿ ಪ್ರವಾಸ ಮಾಡಿದರೆ, ಅವರನ್ನು ನೋಡಿ ಮೈತ್ರಿ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರೂ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಾರೆ. ಆಗ ಅಧಿಕಾರಿಗಳೂ ಸಹ ಅವರ ಜತೆ ಇರುವುದರಿಂದ ಅವರಿಗೆ ಜನರ ಸಂಕಷ್ಟ ಮನವರಿಕೆಯಾಗಲಿದೆ ಎಂದು ನಾವು ಹೇಳಿದಾಗ, ನಿಮ್ಮ ಸಲಹೆ ಸೂಕ್ತವಾಗಿದೆ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರೆ ಹೊರತು, ಅದನ್ನು ಕಾರ್ಯಗತ ಮಾಡುವುದಾಗಿ ಭರವಸೆ ನೀಡಲಿಲ್ಲ. ಮೊದಲು ಜಿಲ್ಲಾ ಸಚಿವರು ಪ್ರವಾಸ ಕೈಗೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಆಗ್ರಹಿಸಿದರು. ಮುಂದೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದಲ್ಲಿ ಸಭೆ ಸೇರಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬೇಕು ಎಂಬುದನ್ನು ಕಾರ್ಯಕ್ರಮ ರೂಪಿಸಲಾಗುವುದು ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next